ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರ್ವಜನಿಕರಿಗೂ ಪೂಜಾ ವಂಚನೆ: ಕೋರ್ಟ್‌ಗೆ ಯುಪಿಎಸ್‌ಸಿ ಹೇಳಿಕೆ

Published 21 ಆಗಸ್ಟ್ 2024, 15:58 IST
Last Updated 21 ಆಗಸ್ಟ್ 2024, 15:58 IST
ಅಕ್ಷರ ಗಾತ್ರ

ನವದೆಹಲಿ: ವಂಚನೆ ಪ್ರಕರಣದ ಆರೋಪಿ, ಐಎಎಸ್‌ ಪ್ರೊಬೇಷನರಿ ಅಧಿಕಾರಿಯಾಗಿದ್ದ ಡಾ.ಪೂಜಾ ಖೇಡ್ಕರ್ ಅವರು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿರೋಧಿಸಿರುವ ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ), ಆಯೋಗಕಷ್ಟೇ ಅಲ್ಲ, ಸಾರ್ವಜನಿಕರಿಗೂ ಪೂಜಾ ಖೇಡ್ಕರ್‌ ದ್ರೋಹ ಬಗೆದಿದ್ದಾರೆ ಎಂದು ಬುಧವಾರ ಹೇಳಿದೆ. 

ಹಿಂದುಳಿದ ವರ್ಗಕ್ಕೆ ಸೇರಿದ್ದೇನೆಂದು ಸುಳ್ಳು ಪ್ರಮಾಣಪತ್ರ ಪಡೆದಿರುವುದು ಹಾಗೂ ತಾನು ಅಂಗವಿಕಲೆ ಎಂದು ನಕಲಿ ದಾಖಲೆ ಸೃಷ್ಟಿಸಿ ಐಎಎಸ್‌ ಹುದ್ದೆ ಗಿಟ್ಟಿಸಿರುವ ಆರೋಪವನ್ನು ಪೂಜಾ ಎದುರಿಸುತ್ತಿದ್ದಾರೆ.  

ಆಕೆಗೆ ಕೋರ್ಟ್‌ ಯಾವುದೇ ರೀತಿಯ ಪರಿಹಾರ ನೀಡಿದರೆ, ‘ಆಳವಾದ ಬೇರು ಹೊಂದಿರುವ ಈ ವಂಚನೆ’ಯ ಪ್ರಕರಣದ ತನಿಖೆಗೆ ಅಡ್ಡಿಯಾಗುತ್ತದೆ. ಈ ಪ್ರಕರಣವು ಸಾರ್ವಜನಿಕ ನಂಬಿಕೆ ಮತ್ತು ನಾಗರಿಕ ಸೇವೆಗಳ ಪರೀಕ್ಷೆಯ ಸಮಗ್ರತೆಯ ಮೇಲೆ ವ್ಯಾಪಕ ಪರಿಣಾಮಗಳನ್ನು ಬೀರುತ್ತದೆ ಎಂಬ ಕಾರಣಕ್ಕಾಗಿ ದೆಹಲಿ ಪೊಲೀಸರು, ಪೂಜಾ ಸಲ್ಲಿಸಿರುವ ಬಂಧನ ಪೂರ್ವ ಜಾಮೀನು ಕೋರಿದ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದರು.  

ನ್ಯಾಯಾಲಯಕ್ಕೆ ಸಲ್ಲಿಸಿದ ಉತ್ತರದಲ್ಲಿ ಯುಪಿಎಸ್‌ಸಿ, ಖೇಡ್ಕರ್ ಅವರ ಕಸ್ಟಡಿ ವಿಚಾರಣೆಯು ವಂಚನೆಯ ಸ್ವರೂಪ ಮತ್ತು ಪ್ರಮಾಣವನ್ನು ಬಹಿರಂಗಪಡಿಸಲು ಅಗತ್ಯವಾಗಿದೆ. ಆದ್ದರಿಂದ ಆಕೆಯ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ವಜಾಗೊಳಿಸಬೇಕು ಎಂದು ಹೇಳಿದೆ.

ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರು ಇದೇ 29ಕ್ಕೆ ಅರ್ಜಿ ವಿಚಾರಣೆಗೆ ಪಟ್ಟಿಮಾಡುವಂತೆ ಸೂಚಿಸಿದರು. ಅಲ್ಲದೆ, ಪೂಜಾ ಖೇಡ್ಕರ್‌ಗೆ ನೀಡಲಾಗಿರುವ ಬಂಧನದ ವಿರುದ್ಧದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿದರು. ಯುಪಿಎಸ್‌ಸಿ ಹಾಗೂ ದೆಹಲಿ ಪೊಲೀಸರ ನಿಲುವಿಗೆ ಪ್ರತಿಕ್ರಿಯಿಸಲು ಖೇಡ್ಕರ್‌ ಅವರಿಗೆ ನ್ಯಾಯಾಲಯ ಕಾಲಾವಕಾಶ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT