ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಶೆ ಕಾರು ಅಪಘಾತ ಪ್ರಕರಣ: ಬಾಲಕನ ತಂದೆ, ತಾತನ ಬಂಧನ ಅವಧಿ ವಿಸ್ತರಣೆ

Published 31 ಮೇ 2024, 19:30 IST
Last Updated 31 ಮೇ 2024, 19:30 IST
ಅಕ್ಷರ ಗಾತ್ರ

ಪುಣೆ: ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಸಿಲುಕಿರುವ 17 ವರ್ಷ ವಯಸ್ಸಿನ ಬಾಲಕನ ತಂದೆ ಮತ್ತು ತಾತ ಇಬ್ಬರ ನ್ಯಾಯಾಂಗ ಬಂಧನವನ್ನು ಇನ್ನೂ 14 ದಿನಗಳಿಗೆ ವಿಸ್ತರಿಸಿ ಪುಣೆಯ ನ್ಯಾಯಾಲಯವೊಂದು ಶುಕ್ರವಾರ ಆದೇಶ ಹೊರಡಿಸಿದೆ.

ತಮ್ಮ ಕಾರಿನ ಚಾಲಕನನ್ನು ಅಪಹರಿಸಿ, ಆತನೇ ಈ ಪ್ರಕರಣದ ಆರೋಪಿ ಎಂದು ಬಿಂಬಿಸಲು ಪ್ರಯತ್ನಿಸಿದ್ದ ಆರೋಪ ಇವರಿಬ್ಬರ ಮೇಲಿದೆ.

ಪೊಲೀಸರ ಪ್ರಕಾರ, ಅಪಘಾತ ಸಂಭವಿಸಿದ ವೇಳೆ ಚಾಲಕನು ಬಾಲಕನ ಜೊತೆಯೇ ಇದ್ದ. ಆದರೆ, ಅಪಘಾತದ ಹೊಣೆಯನ್ನು ಚಾಲಕನೇ ಹೊತ್ತುಕೊಳ್ಳುವಂತೆ ಆತನ ಮೇಲೆ ತಂದೆ–ಮಗ ಬೆದರಿಕೆಯೊಡ್ಡಿದ್ದರು. ಅಲ್ಲದೇ, ಆತನನ್ನು ಅಪಹರಿಸಿ ತಮ್ಮ ಮನೆಯಲ್ಲಿ ಬಚ್ಚಿಟ್ಟಿದ್ದರು. ಚಾಲಕನ ಪತ್ನಿ ಆತನನ್ನು ಮುಕ್ತಗೊಳಿಸಿದ್ದಳು.

ಪ್ರಕರಣದ ತನಿಖೆಯಲ್ಲಿ ಪ್ರಗತಿ ಕಂಡುಬಂದಿದೆ. ಅದೂ ಅಲ್ಲದೇ ಅವರು ತನಿಖೆಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಅವರ ಬಂಧನದ ಅವಧಿ ವಿಸ್ತರಿಸುವ ಅಗತ್ಯವಿದೆ ಎಂದು ಸರ್ಕಾರಿ ವಕೀಲರು ನ್ಯಾಯಾಲಯವನ್ನು ಕೇಳಿಕೊಂಡರು. ಆದರೆ ಆರೋಪಿ ಪರ ವಕೀಲರು ಅದನ್ನು ವಿರೋಧಿಸಿದರು ಎಂದು ಪೊಲೀಸರು ಹೇಳಿದರು.

‘ಸರ್ಕಾರಿ ವಕೀಲರು ಈಗಾಗಗಲೇ ಸಾಕಷ್ಟು ಸಮಯಾವಕಾಶ ತೆಗೆದುಕೊಂಡಿದ್ದಾರೆ. ಅದೂ ಅಲ್ಲದೇ ಕಾರು, ಮೊಬೈಲ್‌ ಫೋನ್‌ ಮತ್ತು ಸಿ.ಸಿ.ಟಿ.ವಿ. ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಹೀಗಾಗಿ ಬಂಧನದ ಅವಧಿ ವಿಸ್ತರಿಸುವ ಅಗತ್ಯವಿಲ್ಲ ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದರು. ಎರಡೂ ಕಡೆಯವರ ವಾದ ಆಲಿಸಿದ ಬಳಿಕ ನ್ಯಾಯಾಧೀಶರು ಬಂಧನದ ಅವಧಿಯನ್ನು 14 ದಿನಗಳಿಗೆ ವಿಸ್ತರಿಸಿದರು’ ಎಂದು ಪೊಲೀಸರು ತಿಳಿಸಿದರು.

ಬಾಲಕನನ್ನು ಜೂನ್‌ 5ರ ವರೆಗೆ ವೀಕ್ಷಣಾ ಕೇಂದ್ರದಲ್ಲಿ ಇರಿಸಲಾಗುವುದು ಎಂದು ಈಗಾಗಲೇ ಪೊಲೀಸರು ತಿಳಿಸಿದ್ದಾರೆ. 

ಅತಿವೇಗದಲ್ಲಿ ಬಂದ ಪೋಶೆ ಕಾರು ಬೈಕ್‌ಗೆ ಗುದ್ದಿ, ಇಬ್ಬರು ಟೆಕಿಗಳು ಸಾವಿಗೀಡಾಗಿದ್ದ ಘಟನೆ ಪುಣೆಯ ಕಲ್ಯಾಣ ನಗರದಲ್ಲಿ ಮೇ 19ರಂದು ನಡೆದಿತ್ತು.  

ಬಾಲಕನನ್ನು ವಿಚಾರಣೆಗೆ ಒಳಪಡಿಸಲು ಅನುಮತಿಗೆ ಮನವಿ

ಪುಣೆ: ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಕೆಲ ಅಸಹಜ ಬೆಳವಣಿಗೆಗಳು ನಡೆದ ಹಿನ್ನೆಲೆಯಲ್ಲಿ ಕಾನೂನು ಸಂಘರ್ಷಕ್ಕೊಳಗಾಗಿರುವ ಬಾಲಕನ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ಕೋರಿ ಪುಣೆ ಪೊಲೀಸರು ಬಾಲ ನ್ಯಾಯ ಮಂಡಳಿಗೆ (ಜೆಜೆಬಿ) ಮನವಿ ಮಾಡಿದ್ದಾರೆ.

ಅಪಘಾತ ಸಂಭವಿದ ವೇಳೆ ಬಾಲಕನು ಪಾನಮತ್ತನಾಗಿದ್ದನೇ ಎಂದು ತಿಳಿಯುವ ನಿಟ್ಟಿನಲ್ಲಿ ಆತನ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ಆದರೆ ಸಂಗ್ರಹಿಸಲಾಗಿದ್ದ ರಕ್ತವು ಬಾಲಕನದ್ದಾಗಿರದೇ ಬೇರೊಬ್ಬ ಮಹಿಳೆಯದ್ದಾಗಿತ್ತು. ಈ ಬೆಳವಣಿಗೆಯ ಕಾರಣ ಆತನನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ. ಬಾಲ ನ್ಯಾಯ ಕಾಯ್ದೆ ಪ್ರಕಾರ ಅಪ್ರಾಪ್ತ ವಯಸ್ಕರ ವಿಚಾರಣೆಯನ್ನು ಅವರ ಪೋಷಕರ ಸಮ್ಮುಖದಲ್ಲೇ ನಡೆಸಬೇಕು.

ಜೆಜೆಬಿ ಸದಸ್ಯರಿಗೆ ಕಾರ್ಯಾಗಾರ

ಪೋಶೆ ಕಾರು ಅಪಘಾತದಲ್ಲಿ ಪ್ರಮುಖ ಆರೋಪಿಗೆ ಜಾಮೀನು ದೊರೆತ ಕಾರಣ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಾಲ ನ್ಯಾಯ ಮಂಡಳಿಯನ್ನು ಮತ್ತಷ್ಟು ಸಂವೇದನಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕಾರ್ಯಾಗಾರ ನಡೆಸಲು ಮುಂದಾಗಿದೆ.

‘ಪೋಶೆ ಪ್ರಕರಣ ಬಳಿಕ ಜೆಜೆಬಿ ಸದಸ್ಯರಿಗೆ ಹೊಸದಾಗಿ ಮಾರ್ಗಸೂಚಿಗಳನ್ನು ನೀಡಲಾಗಿದೆ. ಸರ್ಕಾರದಿಂದ ನೇಮಕವಾಗಿರುವ ಜೆಜೆಬಿ ಸದಸ್ಯರ ಜೊತೆ ಜೆಜೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಸಮಾಲೋಚನೆ ನಡೆಸಿದೆ’ ಎಂದು ಮಕ್ಕಳ ಅಭಿವೃದ್ಧಿ ಇಲಾಖೆ ಆಯುಕ್ತ ಡಾ. ಪ್ರಶಾಂತ್‌ ನರ್ನವಾರೆ ಅವರು ಹೇಳಿದರು. 

ಆಯುಕ್ತರ ವಿರುದ್ಧ ಕ್ರಮಕ್ಕೆ ಆಗ್ರಹ

ಪೋಶೆ ಪ್ರಕರಣಕ್ಕೆ ಸಂಬಂಧಿಸಿ ಪುಣೆ ಪೊಲೀಸ್‌ ಆಯುಕ್ತ ಅಮಿತೇಶ್‌ ಕುಮಾರ್‌ ಅವರನ್ನು ವರ್ಗಾವಣೆ ಮಾಡಬೇಕೆಂದು ಕೋರಿ ಮಾಜಿ ಅಧಿಕಾರಿಯೊಬ್ಬರು ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ.

‘ಇಬ್ಬರ ಸಾವಿಗೆ ಕಾರಣನಾದ ವ್ಯಕ್ತಿಯನ್ನು ರಕ್ಷಿಸಲು ಉನ್ನತ ಮಟ್ಟದ ಅಧಿಕಾರಿಯೇ ಸಾಕ್ಷ್ಯನಾಶದಂಥ ಕೃತ್ಯಕ್ಕೆ ಇಳಿಯುವ ಮಟ್ಟಕ್ಕೆ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮನೆಮಾಡಿದೆ. ಈ ಘಟನೆಯು ನಮ್ಮ ಅಭದ್ರತಾ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಕೂಡಲೇ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಅರುಣ್‌ ಭಾಟಿಯಾ ಪತ್ರದಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT