ನವದೆಹಲಿ: ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಬಯಸುವ, ಸಮಾನಮನಸ್ಕ ದೇಶಗಳ ಪಾಲಿಗೆ ‘ಕ್ವಾಡ್’ ಒಕ್ಕೂಟವು ಪ್ರಮುಖ ವೇದಿಕೆಯಾಗಿ ಬೆಳೆದುನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಕ್ವಾಡ್’ ಶೃಂಗದಲ್ಲಿ ಭಾಗಿಯಾಗಲು ಮತ್ತು ವಿಶ್ವಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಅಮೆರಿಕಕ್ಕೆ ತೆರಳುವ ಮೊದಲು ಮೋದಿ ಅವರು ಈ ಮಾತು ಹೇಳಿದರು.
ಅಮೆರಿಕ ಭೇಟಿಯ ಸಂದರ್ಭದಲ್ಲಿ ಮೋದಿ ಅವರು, ಅಲ್ಲಿನ ಅಧ್ಯಕ್ಷ ಜೋ ಬೈಡನ್ ಹಾಗೂ ವಿಶ್ವದ ಇತರ ನಾಯಕರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಲಾಂಗ್ ಐಲ್ಯಾಂಡ್‌ನಲ್ಲಿ ಮೋದಿ ಅವರು ಭಾರತ ಮೂಲದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ, ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದ ಅಮೆರಿಕದ ಕಂಪನಿಗಳ ಸಿಇಒಗಳ ಜೊತೆ ಮೋದಿ ಅವರು ದುಂಡುಮೇಜಿನ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
‘ಕ್ವಾಡ್’ ಶೃಂಗವು ಬೈಡನ್ ಅವರ ಊರಾಗಿರುವ ವಿಲ್ಮಿಂಗ್ಟನ್‌ನಲ್ಲಿ ನಡೆಯಲಿದೆ. ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚಿಸಲು ಹೊಸ ಉಪಕ್ರಮಗಳನ್ನು ಘೋಷಿಸುವ, ಉಕ್ರೇನ್ ಮತ್ತು ಗಾಜಾ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಮಾರ್ಗೋಪಾಯ ಅರಸುವ ಕೆಲಸ ‘ಕ್ವಾಡ್’ ಶೃಂಗದ ಮೂಲಕ ನಡೆಯುವ ನಿರೀಕ್ಷೆ ಇದೆ.
ಕ್ಯಾನ್ಸರ್ ಪತ್ತೆ, ಚಿಕಿತ್ಸೆ, ಅದನ್ನು ತಡೆಗಟ್ಟುವುದು ಹಾಗೂ ಕ್ಯಾನ್ಸರ್‌ನ ಪರಿಣಾಮಗಳನ್ನು ಕಡಿಮೆ ಮಾಡುವ ವಿಚಾರವಾಗಿ ಬಹಳ ಮಹತ್ವದ ಯೋಜನೆಯೊಂದನ್ನು ‘ಕ್ವಾಡ್’ ದೇಶಗಳ ನಾಯಕರು ಅನಾವರಣಗೊಳಿಸಲಿದ್ದಾರೆ.
ಮೋದಿ ಅವರು ಲಾಂಗ್ ಐಲ್ಯಾಂಡ್‌ನಲ್ಲಿ ಭಾರತೀಯ ಸಮುದಾಯವರನ್ನು ಉದ್ದೇಶಿಸಿ ಭಾನುವಾರ ಮಾತನಾಡಲಿದ್ದಾರೆ. ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಸೋಮವಾರ ನಡೆಯುವ ‘ಭವಿಷ್ಯದ ಶೃಂಗ’ ಹೆಸರಿನ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.