ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜೀವ್‌ ಗಾಂಧಿಗಿಂತ ರಾಹುಲ್‌ ಬಹಳ ಬುದ್ಧಿವಂತ: ಸ್ಯಾಮ್‌ ಪಿತ್ರೋಡಾ

Published : 4 ಸೆಪ್ಟೆಂಬರ್ 2024, 14:05 IST
Last Updated : 4 ಸೆಪ್ಟೆಂಬರ್ 2024, 14:05 IST
ಫಾಲೋ ಮಾಡಿ
Comments

ನವದೆಹಲಿ: ‘ತಂದೆ ರಾಜೀವ್‌ ಗಾಂಧಿ ಅವರಿಗೆ ಹೋಲಿಸಿದರೆ, ರಾಹುಲ್‌ ಗಾಂಧಿ ಅವರು ಹೆಚ್ಚು ಬುದ್ಧಿವಂತ ಹಾಗೂ ಉತ್ತಮ ತಂತ್ರಗಾರ’ ಎಂದು ಗಾಂಧಿ ಕುಟುಂಬದ ಬಹುಕಾಲದ ಆಪ್ತ ಸ್ಯಾಮ್‌ ಪಿತ್ರೋಡಾ ಹೇಳಿದ್ದಾರೆ. 

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಈ ಮಾತು ಹೇಳಿರುವ ಪಿತ್ರೋಡಾ, ‘ಭಾರತದ ಮುಂದಿನ ಪ್ರಧಾನಿಯಾಗಲು ಬೇಕಾದ ಎಲ್ಲ ಸಾಮರ್ಥ್ಯಗಳನ್ನು ರಾಹುಲ್‌ ಗಾಂಧಿ ಹೊಂದಿದ್ದಾರೆ’ ಎಂದು ಹೇಳಿದ್ದಾರೆ.

ಪಿತ್ರೋಡಾ ಅವರು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಘಟಕದ ಅಧ್ಯಕ್ಷ. ಷಿಕಾಗೊದಿಂದ ಅವರು ಈ ಸಂದರ್ಶನ ನೀಡಿದ್ದಾರೆ.

‘ರಾಜೀವ್‌ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಲ್ಲಿ ಸಾಮ್ಯತೆಗಳು ಹಾಗೂ ವ್ಯತ್ಯಾಸಗಳೇನು’ ಎಂಬ ಪ್ರಶ್ನೆಗೆ, ‘ನಾನು ರಾಜೀವ್‌ ಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ್‌ ಸಿಂಗ್‌, ವಿ.ಪಿ.ಸಿಂಗ್‌, ಚಂದ್ರಶೇಖರ ಹಾಗೂ ಎಚ್‌.ಡಿ.ದೇವೇಗೌಡ ಸೇರಿದಂತೆ ಕೆಲ ಪ್ರಧಾನಿಗಳನ್ನು ಹತ್ತಿರದಿಂದ ಬಲ್ಲೆ. ಆದರೆ, ರಾಜೀವ್‌ ಗಾಂಧಿ ಅವರಿಗಿಂತ ರಾಹುಲ್‌ ಹೆಚ್ಚು ಬುದ್ಧಿವಂತ, ವಿಚಾರವಂತ. ಜನರ ಬಗ್ಗೆ ಇಬ್ಬರೂ ಕಳಕಳಿ ಹೊಂದಿದವರಾಗಿದ್ದು, ಪ್ರತಿಯೊಬ್ಬರಿಗಾಗಿ ಸದೃಢ ಭಾರತ ನಿರ್ಮಿಸಬೇಕು ಎಂಬ ಮಾತಿನಲ್ಲಿ ನಂಬಿಕೆ ಉಳ್ಳವರು’ ಎಂದು ಉತ್ತರಿಸಿದ್ದಾರೆ.

‘ರಾಜೀವ್‌ ಗಾಂಧಿ ರೀತಿ ರಾಹುಲ್‌ ಅವರು ಸರಳ ವ್ಯಕ್ತಿ. ಅವರ ವೈಯಕ್ತಿಕ ಅಗತ್ಯಗಳು ಕೂಡ ದೊಡ್ಡವೇನಲ್ಲ’ ಎಂದು ಹೇಳಿದ್ದಾರೆ.

‘ರಾಹುಲ್ ಅವರು ರಾಜೀವ್‌ ಗಾಂಧಿ ಅವರಿಗಿಂತ ದೊಡ್ಡ ತಂತ್ರಗಾರ. ಇಬ್ಬರ ವ್ಯಕ್ತಿತ್ವಗಳು ಬೇರೆ ಕಾಲಘಟ್ಟಗಳು, ವಿಭಿನ್ನ ಅನುಭವಗಳಿಂದ ರೂಪಿತವಾಗಿವೆ. ಅಜ್ಜಿ ಹಾಗೂ ತಂದೆಯ ಹತ್ಯೆ ಎಂಬ ದೊಡ್ಡ ಆಘಾತಗಳನ್ನು ರಾಹುಲ್‌ ಗಾಂಧಿ ಅನುಭವಿಸಿದ್ದಾರೆ. ಆದರೆ, ಇಬ್ಬರೂ ಕ್ರಮಿಸಿದ್ದ ದಾರಿಗಳು ಕೂಡ ಬೇರೆಯಾಗಿದ್ದವು’ ಎಂದು ವಿವರಿಸಿದ್ದಾರೆ.

ವಿದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಬಿಜೆಪಿ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ನಡೆಸಿದ ವಾಗ್ದಾಳಿಯಲ್ಲಿ ಯಾವುದೇ ಅರ್ಥ ಇಲ್ಲ ಎಂದೂ ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರು ಇದೇ ತಿಂಗಳು ಅಮೆರಿಕಕ್ಕೆ ಭೇಟಿ ನೀಡಲಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಲೋಕಸಭೆ ವಿರೋಧ ಪಕ್ಷದ ನಾಯಕನಾಗಿ ಅವರು ಈ ಭೇಟಿ ನೀಡುತ್ತಿಲ್ಲ. ಇದು ಅವರ ಖಾಸಗಿ ಭೇಟಿ. ಆದರೆ, ಭೇಟಿ ವೇಳೆ ಸರ್ಕಾರದ ಪ್ರಮುಖ ವ್ಯಕ್ತಿಗಳೊಂದಿಗೆ ಸಂವಾದ ನಡೆಸುವರು’ ಎಂದು ಉತ್ತರಿಸಿದ್ಧಾರೆ.

ರಾಹುಲ್‌ ಗಾಂಧಿ ಅವರು ಸೆಪ್ಟೆಂಬರ್ 8–10ರ ವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ವಾಷಿಂಗ್ಟನ್‌, ಡಲ್ಲಾಸ್‌ ನಗರಗಳಲ್ಲಿ, ಜಾರ್ಜ್‌ಟೌನ್‌ ಮತ್ತು ಟೆಕ್ಸಾಸ್‌ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.

ರಾಜೀವ್‌ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್ ಪಕ್ಷ ರೂಪಿಸಿರುವ ಭಾರತ ಎಂಬ ವಿಚಾರದ ಕಸ್ಟೋಡಿಯನ್‌ಗಳು
-ಸ್ಯಾಮ್‌ ಪಿತ್ರೋಡಾ, ಭಾರತೀಯ ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT