ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲುಗಳ ವೇಗ ಮಿತಿ ಉಲ್ಲಂಘನೆ: ಪರಿಹಾರ ಕಂಡುಕೊಳ್ಳಲು ಸಮಿತಿ ರಚಿಸಿದ ರೈಲ್ವೆ ಮಂಡಳಿ

ಲೋಕೊ ಪೈಲಟ್‌ಗಳು ವೇಗ ಮಿತಿಯನ್ನು ಏಕೆ ಉಲ್ಲಂಘಿಸುತ್ತಾರೆ ಎಂಬ ಕುರಿತು ಸತ್ಯ ಸಂಗತಿಗಳನ್ನು ಕಂಡುಕೊಳ್ಳಲು ರೈಲ್ವೆ ಮಂಡಳಿ ಸಮಿತಿಯೊಂದನ್ನು ರಚಿಸಿದೆ.
Published 16 ಜೂನ್ 2024, 10:36 IST
Last Updated 16 ಜೂನ್ 2024, 10:36 IST
ಅಕ್ಷರ ಗಾತ್ರ

ನವದೆಹಲಿ: ಲೋಕೊ ಪೈಲಟ್‌ಗಳು ವೇಗ ಮಿತಿಯನ್ನು ಏಕೆ ಉಲ್ಲಂಘಿಸುತ್ತಾರೆ? ಎಂಬ ಕುರಿತು ಸತ್ಯ ಸಂಗತಿಗಳನ್ನು ಕಂಡುಕೊಳ್ಳಲು ರೈಲ್ವೆ ಮಂಡಳಿ ಸಮಿತಿಯೊಂದನ್ನು ರಚಿಸಿದೆ.

ಈ ಸಮಿತಿಯೂ ವಿಸ್ತ್ರೃತ ಅಧ್ಯಯನವನ್ನು ಆರಂಭಿಸಿದ್ದು ಜೂನ್ 5 ರಂದು ಮೊದಲ ಸಭೆ ನಡೆಸಿದೆ.

ಇತ್ತೀಚೆಗೆ ಲೋಕೊ ಪೈಲಟ್‌ಗಳು ವೇಗ ಮಿತಿಯನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಗತಿಮಾನ್ ಎಕ್ಸ್‌ಪ್ರೆಸ್ ರೈಲು ಕಾಮಗಾರಿ ಪ್ರಗತಿಯಲ್ಲಿದ್ದ ರೈಲ್ವೆ ಬ್ರಿಡ್ಜ್ ಬಳಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚರಿಸಿತ್ತು. ಅಸಲಿಗೆ ಅಲ್ಲಿ ಆ ರೈಲಿಗೆ ಗಂಟೆಗೆ 20 ಕಿ.ಮೀ ವೇಗದ ಮಿತಿ ಇತ್ತು. ಅದೇ ರೀತಿ ಮಾಳ್ವಾ ಎಕ್ಸ್‌ಪ್ರೆಸ್‌ ರೈಲು ಕೂಡ ವೇಗದ ಮಿತಿ ಉಲ್ಲಂಘಿಸಿದೆ. ಇಂತಹ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ. ಹೀಗಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮಿತಿ ರಚಿಸಲಾಗಿದೆ.

ಈ ಕುರಿತು ರೈಲ್ವೆ ಮಂಡಳಿ ಎಲ್ಲ ರೈಲ್ವೆ ವಲಯಗಳಿಗೆ ಸುತ್ತೋಲೆ ಕಳಿಸಿದ್ದು ಲೋಕೊ ಪೈಲಟ್‌ಗಳು, ಸಹಾಯಕ ಲೋಕೊ ಪೈಲಟ್‌ಗಳು ಆನ್‌ಲೈನ್‌ನಲ್ಲಿ ನಡೆಯುವ ಸಭೆಗೆ ಹಾಜರಾಗಬೇಕಾಗುತ್ತದೆ ಎಂದು ತಿಳಿಸಿತ್ತು.

ಜೂನ್ 5ರಂದು ನಡೆದಿದ್ದ ಸಭೆಯಲ್ಲಿ 180 ಜನ ಲೋಕೊ ಪೈಲಟ್‌ಗಳು ಭಾಗವಹಿಸಿದ್ದರು. ಈ ವೇಳೆ ಅನೇಕ ಸಲಹೆಗಳನ್ನು ಅವರು ನೀಡಿದ್ದಾರೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೇಗದ ಮಿತಿ ಬಗ್ಗೆ 3 ಕಿ.ಮೀ ಮೊದಲೇ ವಾಕಿಟಾಕಿ ಮೂಲಕ ಮೇಲಿಂದ ಮೇಲೆ ಸಲಹೆ ಸೂಚನೆಗಳು ಲೋಕೊ ಪೈಲಟ್‌ಗಳಿಗೆ ಸಿಗುವಂತಾಗಬೇಕು. ತಾತ್ಕಾಲಿಕ ವೇಗ ಮಿತಿಗಿಂತ ಶಾಶ್ವತ ವೇಗ ಮಿತಿಯನ್ನು (ಪಿಎಸ್‌ಆರ್) ಅಳವಡಿಸಿಕೊಳ್ಳುವುದು ಸೇರಿದಂತೆ ಇತರೆ ಪ್ರಮುಖ ಸಲಹೆಗಳನ್ನು ಲೋಕೊ ಪೈಲಟ್‌ಗಳು ನೀಡಿದ್ದಾರೆ.

ಸಮಿತಿಯ ಅಧ್ಯಯನ ಆರಂಭಿಕ ಹಂತದಲ್ಲಿದ್ದು ಈ ಬಗ್ಗೆ ಇನ್ನೂ ಹೆಚ್ಚಿನ ಸಭೆಗಳನ್ನು ಹಾಗೂ ಕ್ಷೇತ್ರ ಭೇಟಿ ಮಾಡಬೇಕಾಗುತ್ತದೆ. ಸುರಕ್ಷತೆ ಹಾಗೂ ಸುಗಮ ಕಾರ್ಯಾಚರಣೆಗೆ ವೇಗ ಮಿತಿ ಉಲ್ಲಂಘನೆಗಳು ತೊಡಕಾಗಬಾರದು ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT