ನವದೆಹಲಿ: ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಭಾರತೀಯ ರೈಲ್ವೆಯು ಕಲ್ಲಿದ್ದಲು ಸಾಗಣೆ ಸಾಮರ್ಥ್ಯವನ್ನು ಸದ್ಯ ಇರುವ 660 ದಶಲಕ್ಷ ಟನ್‌ಗಳನ್ನು 2030ರ ವೇಳೆಗೆ 1,200 ದಶಲಕ್ಷ ಟನ್‌ಗಳಿಗೆ ಹೆಚ್ಚಿಸುವ ಅಗತ್ಯವಿದೆ ಎಂದು ರಾಷ್ಟ್ರೀಯ ಸಾರಿಗೆ ಸಂಸ್ಥೆ ನಡೆಸಿದ ಆಂತರಿಕ ಅಧ್ಯಯನ ವರದಿ ಹೇಳಿದೆ.
2030ರ ವೇಳೆಗೆ ದೇಶದಲ್ಲಿ ರೈಲುಗಳ ಮೂಲಕ ಕಲ್ಲಿದ್ದಲು ಸಾಗಣೆಯ ಸಂಭವನೀಯ ಪ್ರಮಾಣ ಕಂಡುಕೊಳ್ಳಲು ರೈಲ್ವೆ ನಡೆಸಿದ ಆಂತರಿಕ ಅಧ್ಯಯನವು, ಮುಂಬರುವ ದಿನಗಳಲ್ಲಿ ಹೆಚ್ಚುವ ಕಲ್ಲಿದ್ದಲು ಸಾಗಣೆಯ ಬೇಡಿಕೆಯನ್ನು ಪೂರೈಸಲು ಸರಕು ಸಾಗಣೆಯ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಾದ ತುರ್ತು ಅಗತ್ಯವನ್ನೂ ಒತ್ತಿಹೇಳಿದೆ.
ಸದ್ಯ ರೈಲ್ವೆಯ ಮೂಲಕ ಸಾಗಣೆಯಾಗುತ್ತಿರುವ ಸರಕುಗಳ ಪೈಕಿ ಶೇ 48ರಷ್ಟು ಸರಕು ಕಲ್ಲಿದ್ದಲೇ ಆಗಿದೆ. ಮುಂದಿನ 6–7 ವರ್ಷಗಳಲ್ಲಿ ಈ ನಿಗದಿತ ಗುರಿ ಸಾಧಿಸಲು, ಒಡಿಶಾ ಮತ್ತು ಛತ್ತೀಸಗಢ ಸೇರಿದಂತೆ ಕಲ್ಲಿದ್ದಲು ಉತ್ಪಾದಿಸುವ ಪ್ರಮುಖ ರಾಜ್ಯಗಳ ಮೂಲಕ ಸಂಪರ್ಕಿಸುವ ಪೂರ್ವ ಕರಾವಳಿ ಮತ್ತು ಪೂರ್ವ ಪಶ್ಚಿಮ ಸರಕು ಸಾಗಣೆ ಕಾರಿಡಾರ್‌ಗಳು ಸೇರಿದಂತೆ ಕೆಲವು ಪ್ರಮುಖ ಯೋಜನೆಗಳನ್ನು ತ್ವರಿತಗೊಳಿಸಲು ಅಧ್ಯಯನ ವರದಿಯಲ್ಲಿ ಸಲಹೆ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.