ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ: ಭಾರತವರ್ಷ ಮರುನಿರ್ಮಾಣದ ಆರಂಭ– ಮೋಹನ್ ಭಾಗವತ್

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿಕೆ
Published 21 ಜನವರಿ 2024, 19:30 IST
Last Updated 22 ಜನವರಿ 2024, 2:22 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆಯಲ್ಲಿರುವ ತನ್ನ ಜನ್ಮಸ್ಥಾನಕ್ಕೆ ಬಾಲರಾಮ ಬರುತ್ತಿರುವುದು ಹಾಗೂ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರಾಣ ಪ್ರತಿಷ್ಠಾಪನೆಯು ಭಾರತವರ್ಷದ ಮರುನಿರ್ಮಾಣಕ್ಕಾಗಿನ ಅಭಿಯಾನದ ಆರಂಭ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

ಭಾರತವರ್ಷದ ಮರುನಿರ್ಮಾಣದ ಉದ್ದೇಶವು ಸಾಮರಸ್ಯ, ಏಕತೆ, ಪ್ರಗತಿ, ಶಾಂತಿ ಮತ್ತು ಎಲ್ಲರ ಒಳಿತು ಎಂದು ಅವರು ಹೇಳಿದ್ದಾರೆ. ಆರ್‌ಎಸ್‌ಎಸ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಲೇಖನದಲ್ಲಿ ಭಾಗವತ್ ಅವರು, ‘ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಹಿಂದೂ ಸಮಾಜ ನಡೆಸಿದ ನಿರಂತರ ಹೋರಾಟ’ದ ಬಗ್ಗೆ ಉಲ್ಲೇಖಿಸಿದ್ದಾರೆ. ವಿವಾದಕ್ಕೆ ಸಂಬಂಧಿಸಿದ ಸಂಘರ್ಷ ಹಾಗೂ ಕಹಿಭಾವವು ಈಗ ಕೊನೆಗೊಳ್ಳಬೇಕು ಎಂದು ಹೇಳಿದ್ದಾರೆ.

ಧಾರ್ಮಿಕ ದೃಷ್ಟಿಕೋನದಿಂದ ಶ್ರೀರಾಮನು ದೇಶದ ಬಹುಸಂಖ್ಯಾತ ಸಮುದಾಯದಲ್ಲಿ ಅತಿಹೆಚ್ಚು ಪೂಜೆಗೆ ಪಾತ್ರನಾಗಿದ್ದಾನೆ. ಇಡೀ ಸಮಾಜವು ಚಾರಿತ್ರ್ಯದ ದೃಷ್ಟಿಯಿಂದ ಶ್ರೀರಾಮನನ್ನು ಆದರ್ಶವೆಂದು ಈಗಲೂ ಪರಿಗಣಿಸುತ್ತದೆ ಎಂದು ಬರೆದಿದ್ದಾರೆ.

‘ಅಯೋಧ್ಯೆ ಅಂದರೆ ಯುದ್ಧವಿಲ್ಲದ, ಸಂಘರ್ಷಗಳಿಂದ ಮುಕ್ತವಾದ ನಗರ ಎಂದು ಅರ್ಥ’ ಎಂದು ಹೇಳಿರುವ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸಂದರ್ಭವು ‘ರಾಷ್ಟ್ರೀಯ ಅಭಿಮಾನದ ಪುನರ್ಜಾಗೃತಿಯ’ ದ್ಯೋತಕ ಎಂದು ಕೂಡ ಹೇಳಿದ್ದಾರೆ.

‘ಭಾರತವರ್ಷದ ಮರುನಿರ್ಮಾಣಕ್ಕಾಗಿನ ಅಭಿಯಾನವನ್ನು ಕಾರ್ಯರೂಪಕ್ಕೆ ತರುವವರು ನಾವು. ಜನವರಿ 22ರ ಭಕ್ತಿಯ ಆಚರಣೆಯ ಜೊತೆಯಲ್ಲಿ ನಾವೆಲ್ಲರೂ ಭಾರತದ ಮರುನಿರ್ಮಾಣಕ್ಕೆ ನಿರ್ಣಯ ಕೈಗೊಂಡಿದ್ದೇವೆ. ಆಮೂಲಕ ಇಡೀ ವಿಶ್ವದ ಮರುನಿರ್ಮಾಣಕ್ಕೆ ದಾರಿ ಮಾಡಿಕೊಡಲಿದ್ದೇವೆ’ ಎಂದು ಅವರು ಬರೆದಿದ್ದಾರೆ.

ಭಾರತದ ಇತಿಹಾಸವು, ಆಕ್ರಮಣಕಾರರ ವಿರುದ್ಧದ ಒಂದೂವರೆ ಸಹಸ್ರಮಾನದ ನಿರಂತರ ಹೋರಾಟದ ಇತಿಹಾಸ ಎಂದು ಹೇಳಿರುವ ಭಾಗವತ್, ‘ಆರಂಭಿಕ ಆಕ್ರಮಣಗಳು ಲೂಟಿಹೊಡೆಯುವ ಉದ್ದೇಶ ಹೊಂದಿದ್ದವು. ನಂತರ ಅಲೆಕ್ಸಾಂಡರ್‌ನಂಥವರು ವಸಾಹತು ಸ್ಥಾಪಿಸುವ ಉದ್ದೇಶದಿಂದ ಆಕ್ರಮಣ ನಡೆಸಿದರು’ ಎಂದಿದ್ದಾರೆ.

‘ಆದರೆ ಇಸ್ಲಾಂ ಹೆಸರಿನಲ್ಲಿ ಪಶ್ಚಿಮದಿಂದ ನಡೆದ ಆಕ್ರಮಣವು ಸಮಾಜದ ಪಾಲಿಗೆ ಸಂಪೂರ್ಣ ವಿನಾಶವನ್ನು, ಪರಾಧೀನವನ್ನು ತಂದಿತ್ತಿತು. ರಾಷ್ಟ್ರದ, ಸಮಾಜದ ಸ್ಥೈರ್ಯವನ್ನು ಹಾಳುಮಾಡಲು ಅವರ ಧಾರ್ಮಿಕ ಸ್ಥಳಗಳನ್ನು ನಾಶ ಮಾಡಬೇಕಿತ್ತು. ಹೀಗಾಗಿ, ವಿದೇಶಿ ಆಕ್ರಮಣಕಾರರು ದೇಶದ ದೇವಸ್ಥಾನಗಳನ್ನು ಕೂಡ ನಾಶ ಮಾಡಿದರು. ಇದನ್ನು ಅವರು ಹಲವು ಸಲ ಮಾಡಿದರು’ ಎಂದು ಲೇಖನದಲ್ಲಿ ಹೇಳಿದ್ದಾರೆ.

ಅವರ ಉದ್ದೇಶವು ಭಾರತೀಯ ಸಮಾಜದ ಸ್ಥೈರ್ಯವನ್ನು ಕುಗ್ಗಿಸುವುದಾಗಿತ್ತು. ದುರ್ಬಲ ಸಮಾಜವನ್ನು ಹೊಂದಿರುವ ಭಾರತವನ್ನು ಯಾವ ಅಡ್ಡಿಯೂ ಇಲ್ಲದೆ ಆಳಬಹುದು ಎಂಬುದಾಗಿತ್ತು ಎಂದು ಭಾಗವತ್ ಹೇಳಿದ್ದಾರೆ. ‘ಇದೇ ಉದ್ದೇಶದಿಂದಲೇ ಶ್ರೀರಾಮ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿತ್ತು. ಆಕ್ರಮಣಕಾರರ ಈ ನೀತಿಯು ಅಯೋಧ್ಯೆಗೆ ಮಾತ್ರ ಸೀಮಿತವಾಗಿ ಇರಲಿಲ್ಲ. ಇದು ಇಡೀ ವಿಶ್ವದಲ್ಲಿ ಅವರು ಪಾಲಿಸಿದ ಯುದ್ಧತಂತ್ರ’ ಎಂದು ವಿವರಿಸಿದ್ದಾರೆ.

‘ಆದರೆ ಭಾರತದ ಸಮಾಜವು ಬಾಗಲಿಲ್ಲ. ಅದು ಹೋರಾಟವನ್ನು ಮುಂದುವರಿಸಿತು. ಹೀಗಾಗಿ ರಾಮನ ಜನ್ಮಸ್ಥಾನದ ಮೇಲಿನ ನಿಯಂತ್ರಣವನ್ನು ಮರಳಿ ಪಡೆಯಲು, ಅಲ್ಲಿ ಮಂದಿರ ನಿರ್ಮಿಸಲು ಮತ್ತೆ ಮತ್ತೆ ಯತ್ನ ನಡೆಯಿತು. ರಾಮನಿಗಾಗಿ ಹಲವು ಸಂಘರ್ಷಗಳು, ತ್ಯಾಗಗಳು ಆಗಿವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT