ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠರಿಗೆ ಕುಂಬಿ ಜಾತಿ ಪ್ರಮಾಣಪತ್ರ ಸಿಗುವವರೆಗೆ ಹೋರಾಟ ನಿಲ್ಲದು: ಜಾರಂಗೆ

Published 12 ಸೆಪ್ಟೆಂಬರ್ 2023, 23:30 IST
Last Updated 12 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಮುಂಬೈ: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಿಂಪಡೆಯಲು ಸಿದ್ಧ. ಆದರೆ, ರಾಜ್ಯ ಸರ್ಕಾರವು ಮರಾಠಾ ಪ್ರಾಂತ್ಯದ ಮರಾಠಾ ಸಮುದಾಯಕ್ಕೆ ಕುಂಬಿ ಜಾತಿ ಪ್ರಮಾಣಪತ್ರ ನೀಡುವವರೆಗೆ ಪ್ರತಿಭಟನಾ ಸ್ಥಳವನ್ನು ತೊರೆಯುವುದಿಲ್ಲ ಎಂದು ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಮಂಗಳವಾರ ಹೇಳಿದ್ದಾರೆ.  

ಮಹಾರಾಷ್ಟ್ರ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗೆ, ಮರಾಠಾ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ನೇಮಿಸಿರುವ ಸಮಿತಿ ತನ್ನ ವರದಿಯನ್ನು ಸಿದ್ಧಪಡಿಸಲಿ ಎಂದು ಅವರು ಹೇಳಿದರು.

ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದ ಅಡಿಯಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠರಿಗೆ ಮೀಸಲಾತಿ ಕಲ್ಪಿಸಲು ಆಗ್ರಹಿಸಿ 40 ವರ್ಷ ವಯಸ್ಸಿನ ಜಾರಂಗೆ ಆಗಸ್ಟ್ 29 ರಿಂದ ಜಾಲ್ನಾ ಜಿಲ್ಲೆಯ ಅಂತರವಾಲಿ ಸಾರ್ತಿ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. 

ನಿಜಾಮರ ಕಾಲದ ದಾಖಲೆಗಳಲ್ಲಿ ಕುಂಬಿಗಳು (ಒಬಿಸಿ) ಎಂದು ನಮೂದಿಸಲಾದ ಮರಾಠ ಸಮುದಾಯಕ್ಕೆ ಜಾತಿ ಪ್ರಮಾಣಪತ್ರಗಳನ್ನು ನೀಡಲು ಪ್ರಮಾಣಿತ ಕಾರ್ಯವಿಧಾನವೂ ಸೇರಿದಂತೆ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಚೌಕಟ್ಟನ್ನು ರೂಪಿಸಲು ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಸಂದೀಪ್ ಶಿಂಧೆ ನೇತೃತ್ವದ ಐದು ಸದಸ್ಯರ ಸಮಿತಿಯನ್ನು ರಚಿಸಿದೆ. ಪ್ರಮಾಣ ಪತ್ರವಿದ್ದರೆ ಮರಾಠರು ಒಬಿಸಿ ಕೋಟಾ ಅಡಿಯಲ್ಲಿ ಮೀಸಲು ಪಡೆಯಲು ಸಾಧ್ಯವಾಗಲಿದೆ.   

ಮರಾಠವಾಡ ಪ್ರದೇಶಕ್ಕೆ ಒಟ್ಟು 8 ಜಿಲ್ಲೆಗಳು ಒಳಪಡುತ್ತವೆ. ಔರಂಗಾಬಾದ್, ಬೀಡ್, ಹಿಂಗೋಲಿ, ಜಾಲ್ನಾ, ಲಾತೂರ್, ನಾಂದೇಡ್, ಉಸ್ಮಾನಾಬಾದ್ ಮತ್ತು ಪರ್ಭಾನಿ ಜಿಲ್ಲೆಗಳನ್ನು ಮರಾಠವಾಡ ಎಂದು ಕರೆಯಲಾಗುತ್ತದೆ. 

ಮಂಗಳವಾರ ಮಧ್ಯಾಹ್ನ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಜಾರಂಗೆ, ‘ಸಮಿತಿಯು ವರದಿ ಸಿದ್ಧಪಡಿಸಲು ಒಂದು ತಿಂಗಳ ಕಾಲಾವಕಾಶ ನೀಡಲು ನಾನು ಸಿದ್ಧ.  ಸಮಿತಿ ವರದಿ ಏನಾದರೂ ಆಗಲಿ. ಆದರೆ, ಮರಾಠ ಸಮುದಾಯಕ್ಕೆ ಕುಂಬಿ ಜಾತಿ ಪ್ರಮಾಣಪತ್ರಗಳನ್ನು ನೀಡಲು ಪ್ರಾರಂಭಿಸಬೇಕು ಎಂದು ನಾನು ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದ್ದೇನೆ’ ಎಂದು ಅವರು ಹೇಳಿದರು. 

‘ನನ್ನ ಸಮುದಾಯದ ಮಾನಹಾನಿ ನಿಲ್ಲಲಿ ಎಂಬ ಕಾರಣಕ್ಕೆ ನಾನು ಎರಡು ಹೆಜ್ಜೆ ಹಿಂದೆ ಸರಿಯುತ್ತಿದ್ದೇನೆ. ಉಪವಾಸ ಹಿಂಪಡೆಯಲು ಸಿದ್ದನಿದ್ದೇನೆ. ಆದರೆ ಈ ಜಾಗ ಬಿಟ್ಟು ಕದಲುವುದಿಲ್ಲ’ ಎಂದು ಜಾರಂಗೆ ಹೇಳಿದರು. 

ಉಪವಾಸ ಅಂತ್ಯಗೊಳಿಸುವಂತೆ ಜಾರಂಗೆಗೆ ಮನವಿ ಮಾಡಲು ಸೋಮವಾರ ನಡೆದ ಸರ್ವಪಕ್ಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೇ, ಜಾರಂಗೆ ಅವರನ್ನು ಭೇಟಿಯಾಗಿರುವ ಹಲವು ನಾಯಕರು ಉಪವಾಸ ತ್ಯಜಿಸುವಂತೆ ಕೋರಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT