ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಿಭಕ್ತ ಕುಟುಂಬ ನಿರ್ವಾಹಕನಿಗೆ ಆಸ್ತಿ ಮಾರಾಟದ ಹಕ್ಕಿದೆ: ಸುಪ್ರೀಂ ಕೋರ್ಟ್‌

Last Updated 14 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ನವದೆಹಲಿ: ಹಿಂದೂ ಅವಿಭಕ್ತ ಕುಟುಂಬದ ನಿರ್ವಹಣೆಯ ಹೊಣೆ ಹೊತ್ತಿರುವ ವ್ಯಕ್ತಿಯುಕುಟುಂಬದ ಆಸ್ತಿಯನ್ನು ಮಾರಾಟ ಮಾಡಲು ಕರಾರು ಮಾಡಿಕೊಳ್ಳುವುದಕ್ಕೆ ಕುಟುಂಬದ ಇತರರು (ಕುಟುಂಬದ ಆಸ್ತಿಯಲ್ಲಿ ಸಮಪಾಲು ಹೊಂದಿರುವ ಇತರರು) ತಡೆ ಒಡ್ಡುವಂತಿಲ್ಲ ಎಂದುಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಹಿಂದೂ ಅವಿಭಕ್ತ ಕುಟುಂಬದ ನಿರ್ವಹಣೆ ಮಾಡುವ ವಯಸ್ಕ ವ್ಯಕ್ತಿಯು ಕುಟುಂಬದ ಆಸ್ತಿಯ ನಿರ್ವಹಣೆಯ ಹಕ್ಕು ಹೊಂದಿದ್ದಾರೆ ಎಂಬುದನ್ನು ಈ ಹಿಂದೆಯೂ ಹಲವು ಬಾರಿ ಹೇಳಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎಂ.ಆರ್‌. ಶಾ ಮತ್ತು ಸಂಜೀವ್‌ ಕುಮಾರ್‌ ಅವರ ಪೀಠವು ಹೇಳಿದೆ.

ಕುಟುಂಬದ ಆಸ್ತಿಯನ್ನು ಮಾರಾಟ ಮಾಡುವ ಕರಾರು ಮಾಡಿಕೊಳ್ಳಲು ಕುಟುಂಬದ ನಿರ್ವಾಹಕರಿಗೆ ಹಕ್ಕು ಇದೆ ಎಂಬುದು ಹಿಂದೆಯೇ ಸಾಬೀತಾಗಿದೆ. ಈ ವಿಚಾರದಲ್ಲಿ ಮತ್ತೆ ತಕರಾರಿಗೆ ಅವಕಾಶ ಇಲ್ಲ. ಆದರೆ, ಮಾರಾಟದ ನಂತರ, ಮಾರಾಟವು ಕಾನೂನುಬದ್ಧ ಅಗತ್ಯಕ್ಕಾಗಿ ನಡೆದಿಲ್ಲ ಅಥವಾ ಕುಟುಂಬದ ಹಿತಕ್ಕಾಗಿ ನಡೆದಿಲ್ಲದಿದ್ದರೆ ಅದನ್ನು ಪ್ರಶ್ನಿಸುವುದಕ್ಕೆ ಅವಕಾಶ ಇದೆ ಎಂದು ಪೀಠವು ಹೇಳಿದೆ.

ಕಾನೂನುಬದ್ಧ ಕಾರಣಕ್ಕೆ ಅಥವಾ ಇಡೀ ಕುಟುಂಬದ ಹಿತದ ಕಾರಣಕ್ಕೆ ಕೈಗೊಳ್ಳುವ ನಿರ್ಧಾರವು ಕುಟುಂಬದಲ್ಲಿ ಇರುವ ಅಪ್ರಾಪ್ತ ವಯಸ್ಸಿನವರು ಮತ್ತು ವಿಧವೆಯವರು ಸೇರಿದಂತೆ ಅವಿಭಜಿತ ಕುಟುಂಬದ ಎಲ್ಲರ ಹಿತಾಸಕ್ತಿಯನ್ನೂ ಒಳಗೊಂಡಿರುತ್ತದೆ ಎಂದು ಪೀಠ ಹೇಳಿದೆ.

‘ಕಾನೂನುಬದ್ಧ ಅಗತ್ಯ ಎಂಬುದನ್ನು ಸ್ಥಾಪಿಸಲು ನಿರ್ದಿಷ್ಟ ನೆಲೆಗಳೇನೂ ಇಲ್ಲ. ಕಾನೂನುಬದ್ಧ ಅಗತ್ಯ ಎಂಬುದು ಆಯಾ ಪ್ರಕರಣದ ಸತ್ಯಾಂಶಗಳ ಮೇಲೆ ಅವಲಂಬಿಸಿರುತ್ತದೆ. ಕಾನೂನುಬದ್ಧ ಅಗತ್ಯವೇ ಎಂಬುದನ್ನು ನಿರ್ಧರಿಸುವಲ್ಲಿ ಮತ್ತು ಅದನ್ನು ಹೇಗೆ ಈಡೇರಿಸಬೇಕು ಎಂಬುದರಲ್ಲಿ ಕುಟುಂಬದ ನಿರ್ವಾಹಕನಿಗೆ ವ್ಯಾಪಕವಾದ ವಿವೇಚನಾಧಿಕಾರ ಇರುತ್ತದೆ. ಕಾನೂನುಬದ್ಧ ಅಗತ್ಯ ಅಥವಾ ಇಡೀ ಪರಿವಾರದ ಹಿತಕ್ಕಾಗಿ ನಿರ್ಧಾರ ಕೈಗೊಳ್ಳುವ ನಿರ್ವಾಹಕರ ಅಧಿಕಾರವು ಸಿಂಧುವಾದುದು ಮತ್ತು ಇತರ ಪಾಲುದಾರರು ಈ ಅಧಿಕಾರಕ್ಕೆ ಬದ್ಧರಾಗಿರಬೇಕು’ ಎಂದು ಪೀಠವು ವಿವರಿಸಿದೆ.

ಮಗನಿಗೆ ಪ್ರಶ್ನಿಸುವ ಹಕ್ಕಿಲ್ಲ
ಹಿರಿಯೂರು ತಾಲ್ಲೂಕಿನ ಬಗ್ಗನಾಡು ಕಾವಲ್‌ ಗ್ರಾಮದಲ್ಲಿದ್ದ ಕೃಷಿ ಜಮೀನನ್ನು ಮಾರಾಟ ಮಾಡಲು ಅವಿಭಕ್ತ ಕುಟುಂಬದ ನಿರ್ವಾಹಕ ಕೆ. ವೇಲುಸ್ವಾಮಿ ಅವರುಬೀರೆಡ್ಡಿ ದಶರಥರಾಮಿ ರೆಡ್ಡಿ ಅವರ ಜತೆ 2006ರ ಡಿಸೆಂಬರ್‌ 8ರಂದು ಕರಾರು ಮಾಡಿಕೊಂಡಿದ್ದರು. ₹29 ಲಕ್ಷಕ್ಕೆ ಜಮೀನು ಮಾರಲು ಒಪ್ಪಂದ ಆಗಿತ್ತು. ₹4 ಲಕ್ಷ ಮುಂಗಡವನ್ನೂ ವೇಲುಸ್ವಾಮಿ ಪಡೆದುಕೊಂಡಿದ್ದರು.

ವೇಲುಸ್ವಾಮಿ ಅವರ ಮಗ ಮಂಜುನಾಥ್‌ ಅವರು ಮಾರಾಟ ಕರಾರಿನ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದರು. ಮಾರಾಟಕ್ಕೆ ತಮ್ಮ ಒಪ್ಪಿಗೆ ಅಗತ್ಯ ಎಂದು ಅವರು ವಾದಿಸಿದ್ದರು. ಅವಿಭಕ್ತ ಕುಟುಂಬದ ನಿರ್ವಾಹಕರಾಗಿರುವ ವೇಲುಸ್ವಾಮಿಗೆ ಮಾರಾಟದ ಹಕ್ಕು ಇದೆ ಎಂದು ಸ್ಥಳೀಯ ನ್ಯಾಯಾಲಯ ಹೇಳಿತ್ತು. ಅದರ ವಿರುದ್ಧ ಮಂಜುನಾಥ್‌ ಅವರು ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವೇಲುಸ್ವಾಮಿ ಮಾಡಿಕೊಂಡಿರುವ ಕರಾರು ಜಾರಿ ಸಾಧ್ಯವಿಲ್ಲ ಎಂದು‍ ಹೈಕೋರ್ಟ್‌ ಹೇಳಿತ್ತು. ಆದರೆ, ಕುಟುಂಬದ ನಿರ್ವಾಹಕರಾಗಿರುವ ವೇಲುಸ್ವಾಮಿಗೆ ಜಮೀನು ಮಾರಲು ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್‌ ಈಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT