ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಗನ ಗುರಾಣಿ’ ಖರೀದಿಗೆ ಒಪ್ಪಂದ

ಎಸ್‌–400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಅಡ್ಡಿಯಾಗದ ಅಮೆರಿಕದ ಎಚ್ಚರಿಕೆ
Last Updated 5 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ತೀವ್ರ ವಿರೋಧದ ಮಧ್ಯೆಯೂ ರಷ್ಯಾದಿಂದ ಎಸ್‌–400 ಟ್ರಯಂಫ್‌ ವಾಯುದಾಳಿ ನಿರೋಧಕ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವ ಒಪ್ಪಂದಕ್ಕೆ ಭಾರತವು ಶುಕ್ರವಾರ ಸಹಿ ಹಾಕಿದೆ.

ಅಮೆರಿಕದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ ರಷ್ಯಾದ ಜತೆ ಯಾರೂ ಇಂಧನ, ಅಣುವಿದ್ಯುತ್ ಮತ್ತು ಶಸ್ತ್ರಾಸ್ತ್ರ ಖರೀದಿ ವ್ಯವಹಾರ ನಡೆಸಬಾರದು. ರಷ್ಯಾದೊಂದಿಗೆ ಅಂತಹ ವ್ಯವಹಾರ ನಡೆಸಿದ ಪ್ರತಿ ರಾಷ್ಟ್ರದ ಮೇಲೂ ಅಮೆರಿಕ ಆರ್ಥಿಕ ನಿರ್ಬಂಧ ಹೇರುತ್ತಿದೆ. ಇದಕ್ಕಾಗಿ ಅಮೆರಿಕವುಕಾಟ್ಸಾ ಎನ್ನುವ (CAATSA– Countering America’s Adversaries Through Sanctions) ಕಾಯ್ದೆ ರೂಪಿಸಿದೆ.

ಎಸ್‌–400 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಿದರೆ ಭಾರತದ ಮೇಲೂ ಆರ್ಥಿಕ ನಿರ್ಬಂಧ ಹೇರುಬೇಕಾಗುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಚೇರಿ ಗುರುವಾರ ಎಚ್ಚರಿಕೆ ನೀಡಿತ್ತು. ಇದೇ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಿರುವ ಚೀನಾ ಮೇಲೆ ಸೆಪ್ಟೆಂಬರ್‌ನಲ್ಲಷ್ಟೇ ಅಮೆರಿಕ ಆರ್ಥಿಕ ನಿರ್ಬಂಧ ಹೇರಿತ್ತು.

ಈ ಎಚ್ಚರಿಕೆಗೆ ಸೊಪ್ಪು ಹಾಕದೆ ಭಾರತವು ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಭಾರತದಲ್ಲಿ ನಡೆಯುತ್ತಿರುವ ನಾಲ್ಕನೇ ರಷ್ಯಾ–ಭಾರತ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ. ಇದರ ಜತೆಯಲ್ಲೇ ಇನ್ನೂ ಏಳು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ರಾಗ ಬದಲಿಸಿದ ಅಮೆರಿಕ:ರಷ್ಯಾ–ಭಾರತ ಮಧ್ಯೆ ಒಪ್ಪಂದ ಅಂತಿಮಗೊಂಡ ಬೆನ್ನಲ್ಲೇ ಅಮೆರಿಕ ರಾಗ ಬದಲಿಸಿದೆ.

‘ರಷ್ಯಾ ಮೇಲೆ ಒತ್ತಡ ಹೇರುವುದಷ್ಟೇ ನಮ್ಮ ಈ ನಿರ್ಬಂಧದ ಉದ್ದೇಶವೇ ಹೊರತು ನಮ್ಮ ಮಿತ್ರರಾಷ್ಟ್ರಗಳ ಸೇನಾ ಸಾಮರ್ಥ್ಯಕ್ಕೆ ಧಕ್ಕೆ ತರುವುದಲ್ಲ.ಕಾಯ್ದೆಯಲ್ಲಿ ವಿನಾಯಿತಿಗೂ ಅವಕಾಶವಿದೆ. ಭಾರತಕ್ಕೆ ಕಾಟ್ಸಾ ಕಾಯ್ದೆಯಿಂದ ವಿನಾಯಿತಿ ನೀಡುವ ಬಗ್ಗೆ ತಜ್ಞರು ಪರಿಶೀಲನೆ ನಡೆಸಲಿದ್ದಾರೆ’ ಎಂದು ನವದೆಹಲಿಯಲ್ಲಿನ ಅಮೆರಿಕ ರಾಯಭಾರ ಕಚೇರಿಯ ವಕ್ತಾರ ತಿಳಿಸಿದ್ದಾರೆ.

ಈ ಮೂಲಕ ಅಮೆರಿಕದ ಆರ್ಥಿಕ ನಿರ್ಬಂಧದ ಆತಂಕ ದೂರವಾದಂತಾಗಿದೆ.

ಮುಕ್ತ ವಾಣಿಜ್ಯ ವ್ಯವಸ್ಥೆಗೆ ಕರೆ

‘ಮುಕ್ತ, ಪಾರದರ್ಶಕ, ತಾರತಮ್ಯವಿಲ್ಲದ, ಎಲ್ಲರನ್ನೂ ಒಳಗೊಳ್ಳುವ ಮತ್ತು ನಿಯಮಗಳ ಆಧರಿತ ಬಹುರಾಷ್ಟ್ರೀಯ ವಾಣಿಜ್ಯ ವ್ಯವಸ್ಥೆಯನ್ನು ಬಲಪಡಿಸಬೇಕಿದೆ. ಜಾಗತಿಕ ವಾಣಿಜ್ಯ ಸಂಬಂಧಗಳಲ್ಲಿ ಉಂಟಾಗುವ ಸಂಘರ್ಷವನ್ನು ತಡೆಯುವ ಅಗತ್ಯವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಂಟಿ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.

ಎಂಟು ಒಪ್ಪಂದಗಳಿಗೆ ಸಹಿ

* 5 ಎಸ್‌–400 ಟ್ರಯಂಪ್ ಕ್ಷಿಪಣಿ ವ್ಯವಸ್ಥೆಗಳ ಖರೀದಿಗೆ ಒಪ್ಪಂದ

* ₹ 40,000 ಕೋಟಿ ಒಪ್ಪಂದ ಮೊತ್ತ (ಶುಕ್ರವಾರದ ಡಾಲರ್ ವಿನಿಮಯ ದರ ಆಧರಿಸಿ)

* ಭಾರತದ ಗಗನಯಾನಿಗಳಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತರಬೇತಿ ನೀಡಲು ರಷ್ಯಾ ಒಪ್ಪಿಕೊಂಡಿದೆ

* ನಾಗರಿಕ ಪರಮಾಣು ಸಹಕಾರಕ್ಕೆ ಬಲ. ರಷ್ಯಾವು ಕೂಡಂಕುಳಂನಲ್ಲಿನ ಅಣುವಿದ್ಯುತ್ ಸ್ಥಾವರಗಳ ನಿರ್ಮಾಣ ಪೂರ್ಣಗೊಂಡ ನಂತರ ಇನ್ನೊಂದು ಸ್ಥಾವರ ಅಭಿವೃದ್ಧಿಗೆ ಜಾಗ ನೀಡಲು ಭಾರತದ ಒಪ್ಪಿಗೆ

* ನಾಲ್ಕು ಯುದ್ಧನೌಕೆಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಲ್ಲಿ ಎರಡು ರಷ್ಯಾದಲ್ಲೇ ತಯಾರಾಗಲಿವೆ. ಉಳಿದ ಎರಡು ಭಾರತದಲ್ಲಿ ತಯಾರಾಗಲಿವೆ

* ರಷ್ಯಾದ ಕಮೋವ್ ಕದನ ಹೆಲಿಕಾಪ್ಟರ್‌ಗಳನ್ನು ಭಾರತವು ಖರೀದಿಸಲಿದೆ. ತಂತ್ರಜ್ಞಾನ ವರ್ಗಾವಣೆ ಆಧಾರದಲ್ಲಿ ಈ ಹೆಲಿಕಾಪ್ಟರ್‌ಗಳನ್ನು ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ನಿರ್ಮಿಸಲಿದೆ

* ರೈಲ್ವೆ ಮತ್ತು ಸಾರಿಗೆ ಕ್ಷೇತ್ರದಲ್ಲಿ ಸಹಕಾರ

* ಕೃಷಿ ಕ್ಷೇತ್ರದಲ್ಲಿ ಸಹಕಾರ

* ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT