ಡೆಹರಾಡೂನ್: ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲೇ ಹೆಣ್ಣಿನ ಮೇಲೆ ಈ ರೀತಿಯ ದೌರ್ಜನ್ಯ ನಡೆದಿರುವುದು ದುಃಖದ ಸಂಗತಿ ಎಂದು ಉತ್ತರಾಖಂಡ ವಿಧಾನಸಭೆ ಸ್ಪೀಕರ್ ರಿತು ಖಂಡೂರಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೋಲ್ಕತ್ತದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಹತ್ಯೆ ಮತ್ತು ಅತ್ಯಾಚಾರದ ಕುರಿತು ಮಾತನಾಡಿದ ಅವರು, ‘ಅಪರಾಧವನ್ನು ಖಂಡಿಸಬೇಕು, ಕಾನೂನು ಕಟ್ಟುನಿಟ್ಟಾಗಿರಬೇಕು ಅದೇ ರೀತಿ ಸಮಾಜದಲ್ಲಿ ಬದಲಾವಣೆಯಾಗಬೇಕು’ ಎಂದರು.
ಉತ್ತರಾಖಂಡದ ಮೊದಲ ಮಹಿಳಾ ಸ್ಪೀಕರ್ ರಿತು ಖಂಡೂರಿ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ‘ಈ ಹೀನ ಕೃತ್ಯದ ವಿರುದ್ಧ ಇಡೀ ದೇಶ ಧ್ವನಿಯೆತ್ತಬೇಕು, ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಾಮಾಜಿಕ ಬದಲಾವಣೆಯ ಜರೂರತ್ತಿದೆ. ಮಹಿಳೆಯರಿಗೆ ಸಮನಾದ ಹಕ್ಕಿನ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
‘ಪಶ್ಚಿಮ ಬಂಗಾಳದಂತಹ ಮಹಿಳಾ ಆಡಳಿತವಿರುವ ರಾಜ್ಯದಲ್ಲಿ, ವೈದ್ಯ ವಿದ್ಯಾರ್ಥಿನಿಯ ಮೇಲೆ ಇಂಥ ಕೃತ್ಯ ನಡೆದಿದೆ ಎಂದರೆ ಅದು ಇನ್ನೂ ದುಃಖಕರವಾಗಿದೆ. ನವರಾತ್ರಿ, ದುರ್ಗಾ ಪೂಜೆ ಆಚರಣೆಗೆ ಹೆಸರಾದ ರಾಜ್ಯದಲ್ಲಿ ಇಂತಹ ಘಟನೆ ನಡೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ’ ಖಂಡೂರಿ ವಿಷಾದಿಸಿದರು.
‘ನಿರ್ಭಯಾ ಪ್ರಕರಣದ ಬಳಿಕ ಜನರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು, ಆದರೆ ಕಾನೂನು ಮಾತ್ರ ಬದಲಾಯಿತು. ಎಲ್ಲಿ ಓಡಾಡುತ್ತಿರುವೆ?, ಯಾಕೆ ಧ್ವನಿಯೇರಿಸಿ ಮಾತನಾಡುತ್ತೀಯಾ?,ಯಾಕೆ ಜೋರಾಗಿ ನಗುತ್ತೀಯಾ? ಹೀಗೆ ಎಲ್ಲದಕ್ಕೂ ನಾವು ಹೆಣ್ಣುಮಕ್ಕಳನ್ನು ಪ್ರಶ್ನೆ ಮಾಡುತ್ತೇವೆ. ಆದರೆ ಗಂಡು ಮಕ್ಕಳಿಗೆ ಏನನ್ನೂ ಕೇಳುವುದಿಲ್ಲ. ಹೀಗಾಗಿ ಪ್ರತೀ ಕುಟುಂಬ ಯೋಚನೆಯನ್ನು ಬಲಾಯಿಸಿಕೊಳ್ಳಬೇಕು. ಗಂಡು ಮಕ್ಕಳು ತಾಯಿಯ ಬಳಿಯೇ ಜೋರು ಧ್ವನಿಯಲ್ಲಿ ಮಾತನಾಡಿದರೆ ಅಥವಾ ಸಹೋದರಿಯರನ್ನು ನಿಂದಿಸಿದರೆ ಆ ಕ್ಷಣವೇ ಅದನ್ನು ತಡೆಯಬೇಕು’ ಎಂದರು.