ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಲಿಂಗ ವಿವಾಹ: ಕೇಂದ್ರದ ಅಫಿಡವಿಟ್ ವಿರುದ್ಧ ಕಿಡಿಕಾರಿದ ಹೈಕೋರ್ಟ್

Published : 17 ಮೇ 2022, 14:00 IST
ಫಾಲೋ ಮಾಡಿ
Comments

ನವದೆಹಲಿ: ವಿವಿಧ ಕಾನೂನುಗಳ ಅಡಿಯಲ್ಲಿ ಸಲಿಂಗ ವಿವಾಹವನ್ನು ಅಂಗೀಕರಿಸುವ ಅರ್ಜಿಗಳ ಬ್ಯಾಚ್‌ನ ವಿಚಾರಣೆಗಳ ನೇರ ಪ್ರಸಾರ (ಲೈವ್ ಸ್ಟ್ರೀಮಿಂಗ್) ಕೋರಿ ಎಲ್‌ಜಿಬಿಟಿಕ್ಯು ದಂಪತಿ ಮಾಡಿದ ಮನವಿಯನ್ನು ವಿರೋಧಿಸಿ, ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡ್‌ವಿಟ್ ಬಗ್ಗೆ ದೆಹಲಿ ಹೈಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರವು ಅಫಿಡವಿಟ್‌ನಲ್ಲಿ ‘ಅತ್ಯಂತ ಆಕ್ಷೇಪಾರ್ಹ ಮತ್ತು ಅವಮಾನಕರವಾದ ಕಾಮೆಂಟ್‌ಗಳನ್ನು ಬಳಸಿದೆ’ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರದ ಪರ ಹಾಜರಿದ್ದ ವಕೀಲರು, ‘ಸರ್ಕಾರ ಅಫಿಡವಿಟ್ ಸಲ್ಲಿಸಿದ್ದರೂ ಅದು ದಾಖಲೆಯಲ್ಲಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ದಹೆಲಿ ಹೈಕೋರ್ಟ್‌ನ ಹಂಗಾಮಿ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರ ನೇತೃತ್ವದ ನ್ಯಾಯಪೀಠವು, ‘ನೀವು ಅಫಿಡವಿಟ್ ಓದಿದ್ದೀರಾ? ಅದನ್ನು ದಾಖಲೆಯಲ್ಲಿ ಇರಿಸಬೇಡಿ ಮತ್ತು ಮರು ಪರಿಶೀಲಿಸಬೇಡಿ ಎಂದು ನಾವು ನಿಮಗೆ ಸಲಹೆ ನೀಡುತ್ತೇವೆ. ನಿಮ್ಮ ಅಫಿಡವಿಟ್ ಸಚಿವಾಲಯದಿಂದ ಬರಬಾರದು ಮತ್ತು ನೀವು ಅದನ್ನು ಓದದೆ ಸಲ್ಲಿಸಬಾರದು’ ಕೇಂದ್ರವನ್ನು ಪ್ರತಿನಿಧಿಸುವ ವಕೀಲರಿಗೆ ತಿಳಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರದ ಪರ ವಕೀಲರು, ‘ಈ ಆಪಾದನೆಯನ್ನು ಸ್ವೀಕರಿಸಿ, ಉತ್ತಮವಾದ ಅಫಿಡವಿಟ್ ಅನ್ನು ಸಲ್ಲಿಸಲಾಗುವುದು’ ಎಂದರು.

ವಿಶೇಷ ವಿವಾಹ ಕಾಯ್ದೆ, ಹಿಂದೂ ವಿವಾಹ ಕಾಯ್ದೆ ಮತ್ತು ವಿದೇಶಿ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹಗಳನ್ನು ಗುರುತಿಸುವ ಘೋಷಣೆಯನ್ನು ಕೋರಿ ಹಲವಾರು ಸಲಿಂಗ ದಂಪತಿ ಸಲ್ಲಿಸಿದ ಅರ್ಜಿಗಳ ಬ್ಯಾಚ್ ಅನ್ನು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಒಟ್ಟು 8 ಅರ್ಜಿಗಳು ಸಲ್ಲಿಕೆಯಾಗಿವೆ.

ಕರ್ನಾಟಕ ಮತ್ತು ಮುಂಬೈ ನಿವಾಸಿಗಳಾದ ಅಖಿಲೇಶ್ ಗೋಡಿ, ಪ್ರಸಾದ್ ರಾಜ್ ದಾಂಡೇಕರ್ ಮತ್ತು ಶ್ರೀಪಾದ್ ರಾನಡೆ ಅವರು, ಅಭಿಜಿತ್ ಅಯ್ಯರ್ ಮಿತ್ರ ಅವರ ಬಾಕಿ ಉಳಿದಿರುವ ಅರ್ಜಿಯ ವಿಚಾರಣೆಯ ನೇರ ಪ್ರಸಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಈ ಪ್ರಕರಣದ ಅಂತಿಮ ವಾದಗಳನ್ನು ಯೂಟ್ಯೂಬ್ ಅಥವಾ ಇನ್ಯಾವುದೇ ಪ್ಲಾಟ್‌ಫಾರ್ಮ್ ಮೂಲಕ ನೇರ ಪ್ರಸಾರದ (ಲೈವ್ ಸ್ಟ್ರೀಮ್) ವ್ಯವಸ್ಥೆ ಮಾಡಲು ಹೈಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶನವನ್ನು ಕೋರಿದೆ. ಆದರೆ, ಕೇಂದ್ರ ಸರ್ಕಾರವು ಈ ನೇರಪ್ರಸಾರದ ಅರ್ಜಿಯನ್ನು ವಿರೋಧಿಸಿದ್ದು, ಈ ವಿಷಯವು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಹೊಂದಿಲ್ಲ ಮತ್ತು ಅರ್ಜಿದಾರರು ಸಹಾನುಭೂತಿ ಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT