ನವದೆಹಲಿ: ಕೋಲ್ಕತ್ತದ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸುತ್ತಿದೆ.
ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ. ಬಿ. ಪಾರ್ದೀವಾಲ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ವಿಚಾರಣೆ ಕೈಗೊಂಡಿದೆ.
ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪ್ರೋಟೋಕಾಲ್ ಅನ್ನು ರೂಪಿಸಲು ಉನ್ನತ ನ್ಯಾಯಾಲಯವು ಈ ಹಿಂದೆ 10 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ (NTF) ಅನ್ನು ರಚಿಸಿತ್ತು.
ಕಿರಿಯ ವೈದ್ಯರ ಪ್ರತಿಭಟನೆ ಅಂತ್ಯ?
ಈ ನಡುವೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಪ್ರತಿಭಟನನಿರತ ಕಿರಿಯ ವೈದ್ಯರು ಸಭೆ ನಡೆಸಿದ್ದಾರೆ. ಈ ಮಾತುಕತೆಯ ಬೆನ್ನಲೇ ಕೋಲ್ಕತ್ತ ಪೊಲೀಸ್ ಆಯುಕ್ತ ವಿನೀತ್ ಗೋಯಲ್, ಆರೋಗ್ಯ ಸೇವೆಗಳ ನಿರ್ದೇಶಕ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರನ್ನು ವಜಾಗೊಳಿಸುವುದಾಗಿ ಮಮತಾ ಸೋಮವಾರ ರಾತ್ರಿಯೇ ಘೋಷಿಸಿದ್ದಾರೆ.
‘ನಾವು ಮೌಖಿಕ ಭರವಸೆಗಳನ್ನು ಸ್ವೀಕರಿಸಿದ್ದೇವೆ. ಆಶ್ವಾಸನೆ ಜಾರಿಯಾಗುವವರೆಗೂ ಮುಷ್ಕರ, ಧರಣಿ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಸುಪ್ರೀಂ ಕೋರ್ಟ್‌ನ ವಿಚಾರಣೆಯ ನಂತರ ನಾವು ನಿರ್ಧರಿಸುತ್ತೇವೆ’ ಎಂದು ಕಿರಿಯ ವೈದ್ಯ ದೇಬೈಶ್ ಹಲ್ಡರ್ ಹೇಳಿರುವುದಾಗಿ ವರದಿಯಾಗಿದೆ.