ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗಕಾಮ ಅಡ್ಡದಾರಿಯಲ್ಲ: ಸುಪ್ರೀಂ

‘ಬಹುಸಂಖ್ಯಾತರ ನೈತಿಕತೆಯನ್ನು ಎಲ್ಲರ ಮೇಲೆ ಹೇರಲಾಗದು’
Last Updated 5 ಸೆಪ್ಟೆಂಬರ್ 2018, 14:32 IST
ಅಕ್ಷರ ಗಾತ್ರ

ನವದೆಹಲಿ:ಸಮ್ಮತಿಯ ಸಲಿಂಗ ಲೈಂಗಿಕತೆಯು ಪರಿವರ್ತನೆಯೇ ಹೊರತು ಅಡ್ಡದಾರಿ ಅಲ್ಲ. ಸಲಿಂಗ ಲೈಂಗಿಕತೆಯನ್ನು ಅಪರಾಧ ಎಂದು ಪರಿಗಣಿಸುವ ಸೆಕ್ಷನ್‌ 377ರ ಸಿಂಧುತ್ವವನ್ನು ಪರಿಶೀಲಿಸುವಾಗ ಸಂವಿಧಾನವನ್ನು ಆಧಾರವಾಗಿ ಇಟ್ಟುಕೊಳ್ಳಲಾಗುವುದು. ಬಹುಸಂಖ್ಯಾತರ ನೈತಿಕ ನಿಲುವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಐಪಿಸಿಯ 377ನೇ ಸೆಕ್ಷನ್‌ ಅನ್ನು 1860ರಲ್ಲಿ ರಚಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಯಮವನ್ನು ಬದಲಾಯಿಸಿಲ್ಲ. ಆದರೆ, ಸಂವಿಧಾನವು ನೀಡಿರುವ ಮೂಲಭೂತ ಹಕ್ಕುಗಳನ್ನು ಈ ನಿಯಮ ಉಲ್ಲಂಘಿಸಿದೆ ಎಂದು ಜನರು ದೂರು ನೀಡುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

ಸಮ್ಮತಿಯ ಸಲಿಂಗಕಾಮ ಅಪರಾಧಮುಕ್ತಗೊಂಡರೆ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಮೇಲಿನ ಕಳಂಕ ಮತ್ತು ಅವರನ್ನು ತಾರತಮ್ಯದಿಂದ ನೋಡುವ ಮನೋಭಾವ ತನ್ನಿಂತಾನೆ ಬದಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಅಭಿ‍ಪ್ರಾಯಪಟ್ಟಿದೆ.

ಈ ಸಮುದಾಯವನ್ನು ತಾರತಮ್ಯದಿಂದ ನೋಡುವಂತಹ ವಾತಾವರಣವನ್ನು ಹಲವಾರು ವರ್ಷಗಳಿಂದ ಭಾರತದಲ್ಲಿ ಸೃಷ್ಟಿಸಲಾಗಿದೆ. ಈ ತಾರತಮ್ಯ ಸಮುದಾಯದ ಜನರ ಮಾನಸಿಕ ಆರೋಗ್ಯದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸಲಿಂಗಕಾಮವನ್ನು ಅಪರಾಧಮುಕ್ತಗೊಳಿಸುವುದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸಂವಿಧಾನ ಪೀಠ ಹೇಳಿದೆ.

ಇತರರಿಗೆ ದೊರೆಯುವ ಯಾವುದೇ ಸೌಲಭ್ಯವನ್ನು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ನಿರಾಕರಿಸುವಂತಹ ಕಾನೂನು, ನಿಯಮ, ನಿಬಂಧನೆ, ಉಪ‍ನಿಯಮ ಅಥವಾ ಮಾರ್ಗದರ್ಶಿ ಸೂತ್ರ ಇದೆಯೇ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಪ್ರಶ್ನಿಸಿದರು. ‘ಅಂತಹ ಯಾವುದೇ ನಿಯಮ ಇಲ್ಲ’ ಎಂದು ಅರ್ಜಿದಾರರೊಬ್ಬರ ಪರ ವಕೀಲರಾದ ಮೇನಕಾ ಗುರುಸ್ವಾಮಿ ತಿಳಿಸಿದರು.

ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಜನರನ್ನು ಅವರ ಲೈಂಗಿಕ ಒಲವುಗಳ ಆಧಾರದಲ್ಲಿ ತಾರತಮ್ಯದಿಂದ ನೋಡಬಾರದು ಎಂದು ಮಾನಸಿಕ ಆರೋಗ್ಯ ಕಾಯ್ದೆ ಕೂಡ ಹೇಳುತ್ತದೆ ಎಂಬುದರತ್ತ ಪೀಠ ಗಮನ ಸೆಳೆಯಿತು.

ಈ ಸಮುದಾಯವನ್ನು ವಿವಿಧ ವಿಚಾರಗಳಲ್ಲಿ ತಾರತಮ್ಯದಿಂದ ನೋಡಲಾಗುತ್ತಿದೆ. ಹಾಗಿರುವಾಗ ಸೆಕ್ಷನ್‌ 377 ಅನ್ನು ರದ್ದು ಮಾಡುವುದರಿಂದ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಹಿರಿಯ ವಕೀಲ ಸಿ.ಯು. ಸಿಂಗ್‌ ಪ್ರತಿಪಾದಿಸಿದರು.

‘ಪೂರ್ವಗ್ರಹದಿಂದಾಗಿ ಈ ಸಮುದಾಯದ ಜನರಿಗೆ ಸರಿಯಾದ ವೈದ್ಯಕೀಯ ಆರೈಕೆಯೂ ದೊರೆಯುವುದಿಲ್ಲ. ಇದು ಸಮುದಾಯದ ಜನರಲ್ಲಿ ಹಿಂಜರಿಕೆಯ ಭಾವನೆ ಮೂಡಿಸಿದೆ. ವೈದ್ಯರು ಕೂಡ ಈ ಜನರ ಬಗೆಗಿನ ಗೋಪ್ಯತೆ ಕಾಯ್ದುಕೊಳ್ಳುವುದಿಲ್ಲ’ ಎಂದು ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಹೇಳಿದರು.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 377 ಸಂವಿಧಾನಬದ್ಧವೇ ಎಂಬುದನ್ನು ನಿರ್ಧರಿಸುವುದು ಸುಪ್ರೀಂ ಕೋರ್ಟ್‌ನ ವಿವೇಚನೆಗೆ ಬಿಟ್ಟ ವಿಚಾರ ಎಂದು ಕೇಂದ್ರ ಸರ್ಕಾರ ಬುಧವಾರ ಪ್ರಮಾಣಪತ್ರ ಸಲ್ಲಿಸಿದೆ. ಸಲಿಂಗ ವಿವಾಹ, ದತ್ತು, ಆಸ್ತಿ ಹಕ್ಕು, ಉತ್ತರಾಧಿಕಾರ ಹಕ್ಕು ಮುಂತಾದ ವಿಚಾರಗಳನ್ನು ಪರಿಶೀಲನೆಗೆ ಒಳಪಡಿಸಬಾರದು ಎಂದೂ ತಿಳಿಸಿದೆ.

ಕೇಂದ್ರದ ಪ್ರಮಾಣಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಪೀಠ, ಸಲಿಂಗ ವಿವಾಹ ಮತ್ತು ಕೇಂದ್ರ ಸರ್ಕಾರ ಪ್ರಸ್ತಾವಿಸಿದ ಇತರ ವಿಚಾರಗಳನ್ನು ಪರಿಶೀಲನೆಗೆ ಎತ್ತಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಕಾನೂನು ಹೋರಾಟ

2009ರಲ್ಲಿ ಸಲಿಂಗ ಲೈಂಗಿಕತೆಯನ್ನು ಅಪರಾಧಮುಕ್ತಗೊಳಿಸಿ ದೆಹಲಿ ಹೈಕೋರ್ಟ್‌ ತೀರ್ಪು

ಈ ತೀರ್ಪನ್ನು 2013ರಲ್ಲಿ ರದ್ದುಪಡಿಸಿದ ಸುಪ್ರೀಂ ಕೋರ್ಟ್‌

ಇದೇ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಸೆಕ್ಷನ್‌ ವಿರುದ್ಧದ ವಾದ ಏನು?

* ಸಂವಿಧಾನದ 15ನೇ ವಿಧಿ (ಲಿಂಗಾಧಾರಿತ ತಾರತಮ್ಯ), 14ನೇ ವಿಧಿ (ಸಮಾನತೆ), 19ನೇ ವಿಧಿಯ (ಸ್ವಾತಂತ್ರ್ಯ) ಉಲ್ಲಂಘನೆ

* ಸಲಿಂಗ ಕಾಮ ಸಹಜ ಲೈಂಗಿಕ ಪ್ರವೃತ್ತಿ ಎಂದು ಅಮೆರಿಕದ ಮನಶ್ಶಾಸ್ತ್ರೀಯ ಸಮಿತಿಗಳು ಹೇಳಿವೆ

ಸೆಕ್ಷನ್‌ 377 ಏನೆನ್ನುತ್ತದೆ?

ಸೆಕ್ಷನ್‌ 377 ನಿಸರ್ಗ ವಿರೋಧಿ ಅಪರಾಧಗಳಿಗೆ ಸಂಬಂಧಿಸಿದ್ದಾಗಿದೆ. ಯಾವುದೇ ಗಂಡು, ಹೆಣ್ಣು ಅಥವಾ ಪ್ರಾಣಿಯ ಜತೆಗೆನಿಸರ್ಗ ವಿರುದ್ಧವಾಗಿ ಸ್ವಯಂಪ್ರೇರಣೆಯಿಂದ ಲೈಂಗಿಕ ಸಂಪರ್ಕ ನಡೆಸುವುದು ಅಪರಾಧ ಎಂದು ಈ ಸೆಕ್ಷನ್‌ ಹೇಳುತ್ತದೆ. ಈ ಅಪರಾಧಕ್ಕೆ 10 ವರ್ಷ ಶಿಕ್ಷೆ ಮತ್ತು ದಂಡ ವಿಧಿಸುವುದಕ್ಕೆ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT