ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸಂಪುಟ: ಅಮಿತ್‌ ಶಾ ಗೃಹ ಸಚಿವ

ರಕ್ಷಣೆಗೆ ರಾಜನಾಥ್‌, ನಿರ್ಮಲಾಗೆ ಹಣಕಾಸು ಹೊಣೆ l ಮೊದಲ ಸಂಪುಟ ಸಭೆ: 2 ಕೋಟಿ ರೈತರಿಗೆ ಸೌಲಭ್ಯ ವಿಸ್ತರಣೆ
Last Updated 31 ಮೇ 2019, 20:31 IST
ಅಕ್ಷರ ಗಾತ್ರ

ನವದೆಹಲಿ: ಗುರುವಾರ ರಾತ್ರಿ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಶುಕ್ರವಾರ ಖಾತೆಗಳ ಹಂಚಿಕೆ ಮಾಡಲಾಗಿದೆ. ಕೆಂದ್ರದಲ್ಲಿ ಮೊದಲ ಬಾರಿ ಸಚಿವರಾಗಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಗೃಹ ಖಾತೆಯ ದೊಡ್ಡ ಹೊಣೆಯನ್ನು ವಹಿಸಲಾಗಿದೆ.

ನರೇಂದ್ರ ಮೋದಿ ನೇತೃತ್ವದ ಹಿಂದಿನ ಸರ್ಕಾರದಲ್ಲಿ ಗೃಹ ಖಾತೆಯ ಜವಾಬ್ದಾರಿ ಹೊತ್ತಿದ್ದ ರಾಜನಾಥ್‌ ಸಿಂಗ್‌ ಅವರಿಗೆ ಈ ಬಾರಿ ರಕ್ಷಣಾ ಖಾತೆ ನೀಡಲಾಗಿದೆ. ಎರಡನೇ ಬಾರಿಗೆ ಮೋದಿ ಸಂಪುಟಕ್ಕೆ ಆಯ್ಕೆಯಾದವರಲ್ಲಿ ಕೆಲವರನ್ನು ಈ ಹಿಂದೆ ಹೊಂದಿದ್ದ ಖಾತೆಯಲ್ಲೇ ಮುಂದುವರಿಸಲಾಗಿದೆ. ನಿತಿನ್‌ ಗಡ್ಕರಿ, ರವಿಶಂಕರ್‌ ಪ್ರಸಾದ್‌ ಅವರ ಖಾತೆ ಬದಲಾಗಿಲ್ಲ. ಜೊತೆಗೆ ಅವರಿಗೆ ಇನ್ನೂ ಕೆಲವು ಖಾತೆಗಳ ಹೊಣೆಯನ್ನು ವಹಿಸಲಾಗಿದೆ.

ರಾಮ್‌ವಿಲಾಸ್‌ ಪಾಸ್ವಾನ್‌, ಹರ್‌ಸಿಮ್ರತ್‌ ಕೌರ್‌ ಮತ್ತು ತಾವರ್‌ಚಂದ್‌ ಗೆಹ್ಲೋಟ್‌ ಅವರನ್ನೂ ಹಳೆಯ ಖಾತೆಯಲ್ಲೇ ಮುಂದುವರಿಸಲಾಗಿದೆ.

ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿದ್ದು, ಸಂಪುಟ ಸಚಿವರಾಗಿರುವ ಸುಬ್ರಮಣ್ಯಮ್‌ ಜೈಶಂಕರ್‌ ಅವರಿಗೆ ನಿರೀಕ್ಷೆಯಂತೆ ವಿದೇಶಾಂಗ ವ್ಯವಹಾರಗಳ ಖಾತೆ ನೀಡಲಾಗಿದೆ. ಆ ಮೂಲಕ ಜೈಶಂಕರ್‌ ಅವರು ಇಲಾಖೆಯ ಕಾರ್ಯದರ್ಶಿಯಾಗಿ ಅದೇ ಖಾತೆಯ ಸಚಿವರೂ ಆದ ಮೊದಲ ಅಧಿಕಾರಿ ಎನಿಸಿಕೊಂಡಿದ್ದಾರೆ.

ಅನಾರೋಗ್ಯದ ಕಾರಣದಿಂದ ಅರುಣ್‌ ಜೇಟ್ಲಿ ಅವರು ಸಂಪುಟದಿಂದ ಹೊರಗುಳಿಯಲು ನಿರ್ಧರಿಸಿದ್ದರಿಂದ ಕಳೆದ ಬಾರಿ ಹಣಕಾಸು ಖಾತೆಯ ಸಹಾಯಕ ಸಚಿವರಾಗಿದ್ದ ಪೀಯೂಷ್‌ ಗೋಯಲ್‌ಗೆ ಈ ಬಾರಿ ಆ ಖಾತೆ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಆ ಖಾತೆ ನಿರ್ಮಲಾ ಸೀತಾರಾಮನ್‌ ಪಾಲಾಗಿದ್ದು, ಪೀಯೂಷ್‌ ಅವರಿಗೆ ರೈಲ್ವೆ ಮತ್ತು ಸ್ಮೃತಿ ಇರಾನಿ ಅವರಿಗೆ ಹಿಂದೆ ನಿರ್ವಹಿಸಿದ್ದ ಜವಳಿ ಖಾತೆಯ ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಹೊಣೆಯನ್ನೂ ನೀಡಲಾಗಿದೆ. ಈ ಹಿಂದಿನ ಸರ್ಕಾರದಲ್ಲಿ ಮೇನಕಾ ಗಾಂಧಿ ಈ ಖಾತೆ ನಿರ್ವಹಿಸಿದ್ದರು.

ಜೋಶಿಗೆ ಸಂಸದೀಯ ವ್ಯವಹಾರಗಳ ಖಾತೆ
ರಾಜ್ಯದಿಂದ ಸಂಪುಟಕ್ಕೆ ಆಯ್ಕೆಯಾದ ಪ್ರಹ್ಲಾದ ಜೋಶಿ ಅವರಿಗೆ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆಯ ಹೊಣೆ ನೀಡಲಾಗಿದೆ. ಹಿಂದಿನ ಸರ್ಕಾರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಹೊಣೆಹೊತ್ತಿದ್ದ ಅನಂತ ಕುಮಾರ್‌ ಅವರು ನಿಧನರಾದ ಬಳಿಕ ಆ ಖಾತೆಯ ಹೊಣೆಯನ್ನು ಡಿ.ವಿ. ಸದಾನಂದ ಗೌಡ ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿತ್ತು. ಈ ಬಾರಿ ಸದಾನಂದ ಗೌಡ ಅವರಿಗೆ ಆ ಖಾತೆಯನ್ನೇ ನೀಡಲಾಗಿದೆ. ಬೆಳಗಾವಿಯ ಸಂಸದ ಸುರೇಶ್‌ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ.

‘ಜಲಶಕ್ತಿ’ ಸಚಿವಾಲಯ
ಜಲಸಂಪನ್ಮೂಲ ಮತ್ತು ಕುಡಿಯುವ ನೀರು ಮತ್ತು ಒಳಚರಂಡಿ ಸಚಿವಾಲಯಗಳನ್ನು ವಿಲೀನಗೊಳಿಸಿ ಕೇಂದ್ರ ಸರ್ಕಾರ ‘ಜಲಶಕ್ತಿ’ ಖಾತೆಯನ್ನು ಆರಂಭಿಸಿದೆ. ಗಜೇಂದ್ರಸಿಂಗ್‌ ಶೇಖಾವತ್‌ ಅವರಿಗೆ ಈ ಖಾತೆಯ ಹೊಣೆ ನೀಡಲಾಗಿದೆ.

‘ನೀರಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನೂ ಒಂದೇ ಸಚಿವಾಲಯದಡಿ ತರುವುದಾಗಿ ಚುನಾವಣೆಗೂ ಮುನ್ನ ಮೋದಿ ಅವರು ಭರವಸೆ ನೀಡಿದ್ದರು. ಅದರಂತೆ ಜಲಶಕ್ತಿ ಸಚಿವಾಲಯ ಆರಂಭಿಸಲಾಗಿದೆ’ ಎಂದು ಅಧಿಕಾರ ಸ್ವೀಕರಿಸಿದ ಬಳಿಕ ಶೇಖಾವತ್‌ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮತ್ತು ಅಂತರರಾಜ್ಯ ಜಲ ವಿವಾದಗಳು, ಗಂಗಾ ಶುದ್ಧೀಕರಣಕ್ಕಾಗಿ ರೂಪಿಸಿರುವ ‘ನಮಾಮಿ ಗಂಗೆ’ ಯೋಜನೆ, ಕುಡಿಯುವ ಶುದ್ಧ ನೀರು ಸರಬರಾಜು ಮುಂತಾದ ಜವಾಬ್ದಾರಿಗಳನ್ನು ಈ ಸಚಿವಾಲಯ ನಿರ್ವಹಿಸಲಿದೆ.

17ರಿಂದ ಅಧಿವೇಶನ
17ನೇ ಲೋಕಸಭೆಯ ಮೊದಲ ಅಧಿವೇಶನವು ಜೂನ್‌ 17ರಿಂದ ಜುಲೈ 26ರವರೆಗೆ ನಡೆಯಲಿದೆ.

ಮೊದಲ ದಿನ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುವರು. ಹಂಗಾಮಿ ಸ್ಪೀಕರ್‌ ಆಗಿ ನಿಯುಕ್ತಿಗೊಂಡಿರುವ ಮೇನಕಾ ಗಾಂಧಿ ಅವರು ಹೊಸ ಸಂಸದರಿಗೆ ಪ್ರಮಾಣವಚನ ಬೋಧಿಸುವರು. ಜೂನ್‌ 19ರಂದು ನೂತನ ಸ್ಪೀಕರ್‌ ಆಯ್ಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT