ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಶಿಮಠ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದ ಕಂದಕ

Published 6 ಜುಲೈ 2023, 14:56 IST
Last Updated 6 ಜುಲೈ 2023, 14:56 IST
ಅಕ್ಷರ ಗಾತ್ರ

ಡೆಹ್ರಾಡೂನ್‌/ನವದೆಹಲಿ: ಭೂಕುಸಿತ ಉಂಟಾಗಿದ್ದ ಆರು ತಿಂಗಳ ಬಳಿಕ ಹಿಮಾಲಯದ ತಪ್ಪಲಿನ ಪಟ್ಟಣ ಜೋಶಿಮಠದಲ್ಲಿ, ಈಗ ಮನೆಯೊಂದರ ಸಮೀಪ ಸುಮಾರು ಆರು ಅಡಿ ಅಗಲದ ಕಂದಕ ಮೂಡಿದ್ದು, ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.

ಇಲ್ಲಿನ ಸಕ್ಲಾನಿ ಎಂಬುವರ ಮನೆ ಬಳಿ ಕಳೆದ ವಾರ ಈ ಕಂದಕ ಕಂಡುಬಂದಿದೆ. ಈ ಬೆಳವಣಿಗೆಯು ಈಗಾಗಲೇ ಭೂಕುಸಿತದಿಂದ ನಲುಗಿರುವ ಜೋಶಿಮಠ ಪಟ್ಟಣದ ನಿವಾಸಿಗಳಲ್ಲಿ ‘ಮುಂದೇನು?‘ ಎಂದು ಪ್ರಶ್ನೆಯನ್ನು ಮೂಡಿಸಿದೆ. 

ಜನವರಿ 2–3ರಂದು ಜೋಶಿಮಠದಲ್ಲಿ ಭೂಕುಸಿತದ ವರದಿಯಾಗಿತ್ತು, ಇದರ ಪರಿಣಾಮ ನೂರಾರು ಮನೆಗಳಲ್ಲಿ ಬಿರುಕು ಕಾಣಿಸಿತ್ತು. ಆತಂಕಗೊಂಡಿದ್ದ ನಿವಾಸಿಗಳು ಮನೆಗಳನ್ನು ತೆರವು ಮಾಡಿ ಹೋಟೆಲ್‌ಗಳು, ಸ್ನೇಹಿತರ ಮನೆಗಳಲ್ಲಿ ಆಶ್ರಯ ಪಡೆದಿದ್ದರು.

‘ಆರು ತಿಂಗಳ ಹಿಂದೆ ಚಳಿಗಾಲ ಇತ್ತು. ಈಗ ಮುಂಗಾರು ಆರಂಭವಾಗಿದೆ. ಆದರೆ, ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮಳೆ ಶುರುವಾದಂತೆ ಮನೆಯ ಬಳಿಕ ಸಣ್ಣ ಕಣಿವೆ ನಿರ್ಮಾಣವಾಗಿದ್ದು, ನೀರು ಇಂಗುತ್ತಿದೆ’ ಎಂದು ಅಂಜು ಸಕ್ಲಾನಿ ಅವರು ಪ್ರತಿಕ್ರಿಯಿಸಿದರು.

‘ಈಗ ಮೂಡಿರುವ ಕಂದಕವನ್ನು ಕಲ್ಲು ಹಾಗೂ ಕಟ್ಟಡ ಅವಶೇಷಗಳನ್ನು ಹಾಕಿ ಮುಚ್ಚಿದ್ದೇವೆ‘ ಎಂದು ಅಂಜು ಹೇಳಿದರು. ’ಆದರೆ, ಇದು ತಾತ್ಕಾಲಿಕ ಪರಿಹಾರವಷ್ಟೇ’ ಎಂದು ಜೋಶಿಮಠ ಬಚಾವೋ ಸಂಘರ್ಷ ಸಮಿತಿಯ (ಜೆಬಿಎಸ್‌ಎಸ್‌) ಅತುಲ್‌ ಸಾಟಿ ಪ್ರತಿಕ್ರಿಯಿಸಿದರು.

ಮನೆಗಳಲ್ಲಿ ಬಿರುಕು ಮೂಡುತ್ತಿದೆ ಎಂಬುದನ್ನು ಇದೇ ಸಕ್ಲಾನಿ ಅವರು ಮೊದಲಿಗೆ ಸೆಪ್ಟೆಂಬರ್ 2021ರಲ್ಲಿ ವರದಿ ಮಾಡಿದ್ದರು. ಜೋಶಿಮಠ ಪ್ರಮುಖ ತಾಣವಾಗಿದೆ. ಹಿಮಾಲಯದ ಹಲವು ಚಾರಣಿಗರು ಇಲ್ಲಿಂದಲೇ ಚಾರಣ ಆರಂಭಿಸಿದರೆ, ಬದ್ರಿನಾಥ್, ಹೆಮ್‌ಕುಂಡ್‌ ಸಾಹೀಬ್ ಸೇರಿದಂತೆ ವಿವಿಧೆಡೆ ಯಾತ್ರಾ ಸ್ಥಳಗಳಿಗೂ ಇಲ್ಲಿಂದಲೇ ಹಾದುಹೋಗಬೇಕಿದೆ.  

ಸಕ್ಲಾನಿ ನಿವಾಸದ ಬಳಿ ಅಲ್ಲದೆ, ಇನ್ನೂ ಹಲವು ಕಡೆ ಸಣ್ಣ ಕಂದಕ ನಿರ್ಮಾಣವಾಗಿದೆ. ಮುಂಗಾರು ಋತುವಿನ ಹಿನ್ನೆಲೆಯಲ್ಲಿ ಆದ್ಯತೆಯ ಮೇರೆಗೆ ಈ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಪರಿಸರ ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ.

ಅಧಿಕಾರಿಗಳ ಪ್ರಕಾರ, ಜೋಶಿಮಠ ರಕ್ಷಣೆಗಾಗಿ ಸರ್ಕಾರ ಈಗಾಗಲೇ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT