ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಠುರ ಮಾತಿನ ‘ಸ್ಪೀಕರ್‌’

ಲೋಕಸಭೆಯ ಮಾಜಿ ಅಧ್ಯಕ್ಷ ಸೋಮನಾಥ ಚಟರ್ಜಿ ನಿಧನ
Last Updated 13 ಆಗಸ್ಟ್ 2018, 14:38 IST
ಅಕ್ಷರ ಗಾತ್ರ

ಕೋಲ್ಕತ್ತ : ಅಪ್ರತಿಮ ಸಂಸದೀಯಪಟು ಸೋಮನಾಥ ಚಟರ್ಜಿ ಕಮ್ಯುನಿಸ್ಟ್‌ ಪಕ್ಷದಿಂದ ಲೋಕಸಭೆಯ ಸ್ಪೀಕರ್‌ ಆದ ಮೊದಲ ನಾಯಕ. ಲೋಕಸಭೆಯ ಅತ್ಯುತ್ತಮ ಸ್ಪೀಕರ್‌ಗಳಲ್ಲಿ ಒಬ್ಬರು ಎಂಬುದು ಅವರ ಹೆಗ್ಗಳಿಕೆ. ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ಅಂದರೆ, 2004ರಲ್ಲಿ ಸ್ಪೀಕರ್‌ ಹುದ್ದೆಗೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ತಮ್ಮ ಜೀವನದ ಬಹುಭಾಗ ಅವರು ಸಿಪಿಎಂ ಜತೆಗಿದ್ದರು. ಸಿಪಿಎಂನ ಬಹಳ ಮುಖ್ಯ ನಾಯಕ ಎಂದು ಗುರುತಿಸಿಕೊಂಡಿದ್ದ ಜ್ಯೋತಿ ಬಸು ಅವರ ಆಪ್ತರಾಗಿದ್ದರು. ಆದರೆ, ‘ಪಕ್ಷದ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡರು’ ಎಂಬ ಕಾರಣಕ್ಕೆ 2008ರಲ್ಲಿ ಅವರನ್ನು ಸಿಪಿಎಂನಿಂದ ಉಚ್ಚಾಟನೆ ಮಾಡಲಾಯಿತು.

ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಸಿಪಿಎಂ 2008ರ ಜುಲೈನಲ್ಲಿ ವಾಪಸ್‌ ಪಡೆಯಿತು. ಪರಿಣಾಮವಾಗಿ ಚಟರ್ಜಿ ಅವರು ಸ್ಪೀಕರ್‌ ಹುದ್ದೆಯಿಂದ ಕೆಳಗೆ ಇಳಿಯಬೇಕು ಎಂಬು ಸಿಪಿಎಂ ಬಯಸಿತು. ಆದರೆ ಪಕ್ಷದ ಈ ನಿರ್ದೇಶನವನ್ನು ಪಾಲಿಸಲು ಅವರು ನಿರಾಕರಿಸಿದರು. ಸ್ಪೀಕರ್‌ ಹುದ್ದೆ ರಾಜಕೀಯದಿಂದ ಹೊರತಾದುದು ಮತ್ತು ಪೂರ್ವಗ್ರಹರಹಿತವಾದುದು ಎಂಬುದು ತಮ್ಮ ಭಾವನೆ ಎಂದು ಅವರು ತಮ್ಮ ನಿಲುವಿಗೆ ಸಮರ್ಥನೆ ಕೊಟ್ಟರು.

2008ರ ಜುಲೈ 23 ತಮ್ಮ ಜೀವನದ ಅತ್ಯಂತ ದುಃಖಕರ ದಿನ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದರು. ‘ಲೋಕಸಭೆ ಮತ್ತು ಇತರ ಎಲ್ಲ ಚುನಾಯಿತ ವಿಧಾನಸಭೆಗಳ ಸ್ಪೀಕರ್‌ಗಳು ಯಾವುದೇ ರಾಜಕೀಯ ಪಕ್ಷವನ್ನು ಪ್ರತಿನಿಧಿಸುವುದು ಸಾಧ್ಯವಿಲ್ಲ ಮತ್ತು ಪ್ರತಿನಿಧಿಸಬಾರದು’ ಎಂದು ಚಟರ್ಟಿ ಹೇಳಿದ್ದರು.

ಅವರು ಹತ್ತು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. 1971ರಲ್ಲಿ ಮೊದಲ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರಿಗೆ ಸಿಪಿಎಂ ಬೆಂಬಲ ನೀಡಿತ್ತು. 1984ರಲ್ಲಿ ಒಂದು ಬಾರಿ ಮಮತಾ ಬ್ಯಾನರ್ಜಿ ಅವರು ಚಟರ್ಜಿಯವರನ್ನು ಸೋಲಿಸಿದ್ದರು. ಈ ಗೆಲುವಿನಿಂದಾಗಿ ಮಮತಾ ಅವರು ಪ್ರಸಿದ್ಧಿಗೆ ಬಂದರು. 1989ರಿಂದ 2004ರವರೆಗೆ ಚಟರ್ಜಿ ಅವರು ಲೋಕಸಭೆಯಲ್ಲಿ ಸಿಪಿಎಂನ ನಾಯಕರಾಗಿದ್ದರು.

ಚತುರೋಕ್ತಿಗಳು, ವಿನೋದದಿಂದ ಕೂಡಿದ ಅವರ ಮಾತುಗಳು ನಿಷ್ಠುರವಾಗಿರುತ್ತಿದ್ದುದೇ ಹೆಚ್ಚು. ರಾಷ್ಟ್ರೀಯ, ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಗಾಢ ತಿಳಿವಳಿಕೆ ಇದ್ದ ಅವರು ಅತ್ಯುತ್ತಮ ಚರ್ಚಾಪಟುವೂ ಆಗಿದ್ದರು. ಹಲವು ಸಂಸದೀಯ ಸಮಿತಿಗಳ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಚಟರ್ಜಿ ಅವರನ್ನು ರಾಜಕೀಯ ಮುಖಂಡರು ಪಕ್ಷಭೇದ ಮರೆತು ಇಷ್ಟಪಡುತ್ತಿದ್ದರು.

ಸುಧಾರಕ: ಲೋಕಸಭೆಯ ಶೂನ್ಯವೇಳೆಯ ಕಲಾಪದ ನೇರ ಪ್ರಸಾರ ಚಟರ್ಜಿ ಅವರು ಸ್ಪೀಕರ್‌ ಆಗಿದ್ದ ಅವಧಿಯಲ್ಲಿ ಆರಂಭವಾಯಿತು. 2004ರ ಜುಲೈ 5ರಂದು ಇದಕ್ಕೆ ಅವರು ಚಾಲನೆ ಕೊಟ್ಟರು. 24 ತಾಸು ಪ್ರಸಾರದ ಲೋಕಸಭೆ ವಾಹಿನಿ 2006ರ ಜುಲೈಯಲ್ಲಿ ಆರಂಭಗೊಂಡಿತು. ಚಟರ್ಜಿ ಅವರ ಉತ್ಸಾಹವೇ ಇದರ ಹಿಂದೆ ಇತ್ತು.


* 1929, ಜುಲೈ 25:ಅಸ್ಸಾಂನಲ್ಲಿ ತೇಜ್‌ಪುರದಲ್ಲಿ ಜನನ

*ತಂದೆ ಸಿ.ಎನ್‌. ಚಟರ್ಜಿ ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು

*ತಾಯಿ ವೀಣಾಪಾಣಿ ದೇವಿ

*ಬ್ರಿಟನ್‌ನ ವಿಶ್ವವಿದ್ಯಾಲಯವೊಂದರಿಂದ ಕಾನೂನು ಪದವಿ

*1968–2008ರವರೆಗೆ ಸಿಪಿಎಂ ಸದಸ್ಯರಾಗಿದ್ದರು

* 1971: ಮೊದಲ ಬಾರಿ ಸಂಸತ್ತಿಗೆ ಆಯ್ಕೆ

*1999ರಲ್ಲಿ ಅತ್ಯುತ್ತಮ ಸಂಸದೀಯಪಟು ಪ್ರಶಸ್ತಿಗೆ ಪಾತ್ರ

*2008ರಲ್ಲಿ ಸಿಪಿಎಂನಿಂದ ಉಚ್ಚಾಟನೆ

*2009ರಲ್ಲಿ ಸ್ಪೀಕರ್‌ ಅವಧಿ ಪೂರ್ಣಗೊಂಡ ಬಳಿಕ ರಾಜಕೀಯದಿಂದ ನಿವೃತ್ತಿ

ಮರಳಿ ಸೇರಿಸಲಾಗದ ವಿಷಾದ

2008ರಲ್ಲಿ ಪಕ್ಷದಿಂದ ಉಚ್ಚಾಟಿಸಲಾದ ಚಟರ್ಜಿ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗದ್ದಕ್ಕೆ ಸಿಪಿಎಂನ ಹಲವು ಮುಖಂಡರು ವಿಷಾದ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಸಿಪಿಎಂನ ಹಲವು ಮುಖಂಡರು ಚಟರ್ಜಿ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಮರಳಿ ಸೇರುವಂತೆ ಮನವೊಲಿಸಲು ಯತ್ನಿಸಿದ್ದರು. ಆದರೆ, ಈ ಸಮಸ್ಯೆ ಪರಿಹರಿಸಲು ಸಾಧ್ಯವಾಗಲಿಲ್ಲ ಎಂದು ಸಿಪಿಎಂ ಹಿರಿಯ ಮುಖಂಡ ನೇಪಾಲ್‌ದೇವ್‌ ಭಟ್ಟಾಚಾರ್ಯ ಹೇಳಿದ್ದಾರೆ.

‘ಅವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಕೊರಗು ನಮ್ಮ ಜೀವನಪರ್ಯಂತ ಇರಲಿದೆ. ಈಗ ನಾವು ಕ್ಲಿಷ್ಟಕರ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಅವರು ಜತೆಗೆ ಇದ್ದಿದ್ದರೆ ಬಹಳ ನೆರವಾಗುತ್ತಿತ್ತು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಉಚ್ಚಾಟನೆಯ ಬಳಿಕವೂ ಸಿಪಿಎಂ ಸದಸ್ಯರ ಜತೆಗೆ ಚಟರ್ಜಿ ಅವರ ಒಡನಾಟ ಮುಂದುವರಿದಿತ್ತು. ನಮ್ಮ ಸಂಬಂಧ ಸೌಹಾರ್ದಯುತವಾಗಿಯೇ ಇತ್ತು’ ಎಂದು ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಸುಜನ್‌ ಚಕ್ರವರ್ತಿ ಹೇಳಿದ್ದಾರೆ.

ಇನ್ನಷ್ಟು ಸುದ್ದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT