ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎಂಎಂ ನೇತೃತ್ವದ ಮೈತ್ರಿಕೂಟದ ಸಭೆ ನಾಳೆ

ಜಾರ್ಖಂಡ್‌ ಮುಖ್ಯಮಂತ್ರಿ ಭವಿಷ್ಯ ಅತಂತ್ರ?
Published 2 ಜನವರಿ 2024, 14:13 IST
Last Updated 2 ಜನವರಿ 2024, 14:13 IST
ಅಕ್ಷರ ಗಾತ್ರ

ರಾಂಚಿ (ಪಿಟಿಐ): ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರ ಪತ್ನಿಯನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗುವುದು ಎಂಬ ವದಂತಿಗಳ ನಡುವೆಯೇ ಆಡಳಿತಾರೂಢ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ)  ನೇತೃತ್ವದ ಮೈತ್ರಿಕೂಟವು ಬುಧವಾರ ತನ್ನ ಶಾಸಕರ ಸಭೆ ಕರೆದಿದೆ.

ಮುಖ್ಯಮಂತ್ರಿ ಹೇಮಂತ್  ಸೊರೇನ್‌ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಈಚೆಗೆ ಸಮನ್ಸ್‌ ನೀಡಿದ ಬಳಿಕ ಜೆಎಂಎಂನ ಗಾಂಡೆಯ್‌ ಕ್ಷೇತ್ರದ ಶಾಸಕ ಸರ್ಫರಾಜ್‌ ಅಹ್ಮದ್‌ ಅವರು ಸೋಮವಾರ ದಿಢೀರ್‌ ರಾಜೀನಾಮೆ ನೀಡಿದ್ದಾರೆ.

ಸೊರೇನ್‌ ವಿರುದ್ಧ ಜಾರಿ ನಿರ್ದೇಶನಾಲಯ ಕ್ರಮ ಕೈಗೊಂಡರೆ, ಮುಖ್ಯಮಂತ್ರಿಯವರ ಪತ್ನಿ ಕಲ್ಪನಾ ಸೊರೇನ್‌ ಅವರು ಗಾಂಡೆಯ್‌ ಸ್ಥಾನದಿಂದ ಸ್ಪರ್ಧಿಸುವ ಅವಕಾಶ ಮಾಡಿಕೊಡಲೆಂದೇ ಸರ್ಫರಾಜ್‌ ಅವರು ರಾಜೀನಾಮೆ ನೀಡುವಂತೆ ಮಾಡಲಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.

‘ಬುಧವಾರ ಸಂಜೆ 4.30ಕ್ಕೆ ಮುಖ್ಯಮಂತ್ರಿಯವರ ನಿವಾಸದಲ್ಲಿ ಮೈತ್ರಿಕೂಟದ ಪಾಲುದಾರ ಪಕ್ಷಗಳ ಶಾಸಕರ ಸಭೆ ಏರ್ಪಡಿಸಲಾಗಿದೆ. ಸಭೆಗೆ ಸಕಾಲದಲ್ಲಿ ಹಾಜರಿರಬೇಕು’ ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ವಿನೋದ್‌ ಕುಮಾರ್ ಪಾಂಡೆ ಅವರು ಸಂಬಂಧಿಸಿದ ಸಚಿವರಿಗೆ ಮತ್ತು ಶಾಸಕರಿಗೆ ಮಂಗಳವಾರ ಬರೆದ ಪತ್ರದಲ್ಲಿ ಕೋರಿದ್ದಾರೆ.

ಸೊರೇನ್ ಅವರಿಗೆ ಜಾರಿ ನಿರ್ದೇಶನಾಲಯದ ಸಮನ್ಸ್‌ ಜಾರಿ ಮಾಡಿದ ಹಿನ್ನೆಲೆಯಲ್ಲಿ ಪ್ರಸಕ್ತ ರಾಜಕೀಯ ಸನ್ನಿವೇಶದ ಬಗ್ಗೆ ಚರ್ಚಿಸಲು ಮತ್ತು ಕಾರ್ಯತಂತ್ರ ರೂಪಿಸಲು ಸಭೆ ಕರೆಯಲಾಗಿದೆ ಎಂದು ಮೂಲಗಳು ಹೇಳಿವೆ.

ಸರ್ಫರಾಜ್‌ ಅವರು ಯಾವುದೇ ಕಾರಣ ನೀಡದೆ ರಾಜೀನಾಮೆ ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ. ಸೊರೇನ್‌ ಅವರು ಅಧಿಕಾರದಿಂದ ಕೆಳಗಿಳಿದು ಪತ್ನಿ ಕಲ್ಪನಾ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬಹುದು. ಅವರು ಗಾಂಡೆಯ್‌ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಶಂಕಿಸಲಾಗಿದೆ.

ಇ.ಡಿ ನೀಡಿದ ಸಮನ್ಸ್‌ನಲ್ಲಿ, ತಮಗೆ ಅನುಕೂಲಕರವಾಗುವ ದಿನಾಂಕ, ಸ್ಥಳ ಮತ್ತು ವೇಳೆಯನ್ನು ತನಿಖಾಧಿಕಾರಿಗೆ ತಿಳಿಸಬೇಕು ಎಂದು ಸೊರೇನ್‌ ಅವರಿಗೆ ತಿಳಿಸಲಾಗಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ ಅಡಿ ಹೇಳಿಕೆ ದಾಖಲು ಮಾಡಲಾಗುವುದು.  ಜಾರ್ಖಂಡ್‌ನಲ್ಲಿ ಭೂಮಿ ಒಡೆತನವನ್ನು ಮಾಫಿಯಾಗಳು ಅಕ್ರಮವಾಗಿ ಬದಲಿಸಿರುವುದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುವುದು ಎಂದು ಇ.ಡಿ ಹೇಳಿದೆ.

ಹೇಮಂತ್ ಸೊರೇನ್‌ ಅವರಿಗೆ ಈ ಹಿಂದೆ ಆರು ಸಮನ್ಸ್‌ಗಳನ್ನು ನೀಡಿದ್ದು ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಏಳನೇ ಸಮನ್ಸ್‌ ಅನ್ನು ಡಿಸೆಂಬರ್‌ನಲ್ಲಿ ನೀಡಲಾಗಿದೆ. 

ಜಾರ್ಖಂಡ್‌ನಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಗಾಂಡೆಯ್‌ಗೆ ಈಗ ಉಪಚುನಾವಣೆ ನಡೆಸಲು ಆಗುವುದಿಲ್ಲ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ತಮ್ಮ ಅಭಿಪ್ರಾಯಕ್ಕೆ ಆಧಾರವಾಗಿ ಮುಂಬೈ ಹೈಕೋರ್ಟ್‌ ಆದೇಶವನ್ನು ಅವರು ಉಲ್ಲೇಖಿಸಿದ್ದಾರೆ.

81 ಸದಸ್ಯರ ಜಾರ್ಖಂಡ್‌ ವಿಧಾನಸಭೆಗೆ ನವೆಂಬರ್‌– ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ.  ಜಾರ್ಖಂಡ್‌ ವಿಧಾನಸಭೆಯಲ್ಲಿ ಆಡಳಿತರೂಢ ಮೈತ್ರಿಕೂಟವು 47 ಸದಸ್ಯರನ್ನು (ಜೆಎಂಎಂ– 29, ಕಾಂಗ್ರೆಸ್‌–17 ಮತ್ತು ಆರ್‌ಜೆಡಿ–1)  ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT