ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯಬಲ್ಲ ಸಂಗಾತಿಗೆ ಕೊಡುವ ಜೀವನಾಂಶ ಪತಿಗೆ ಹೊರೆಯಾಗಬಾರದು: HC ಮಹತ್ವದ ತೀರ್ಪು

Published 22 ನವೆಂಬರ್ 2023, 16:12 IST
Last Updated 22 ನವೆಂಬರ್ 2023, 16:12 IST
ಅಕ್ಷರ ಗಾತ್ರ

ನವದೆಹಲಿ: ದುಡಿಯುವ ಶಕ್ತಿ ಇದ್ದರೂ ಸೂಕ್ತ ಕಾರಣವಿಲ್ಲದೆ ನಿರುದ್ಯೋಗಿಯಾಗಿರುವ ವ್ಯಕ್ತಿಯು ತನ್ನ ಸಂಗಾತಿಯ ಪಾಲಿಗೆ ಹೊರೆಯಾಗಲು ಅವಕಾಶ ಕೊಡಲಾಗದು ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಹಿಂದೂ ವಿವಾಹ ಕಾಯ್ದೆ ಪ್ರಕಾರ ವಿಚ್ಛೇದಿತ ಹೆಂಡತಿಗೆ ಪುರುಷನು ನೀಡುತ್ತಿದ್ದ ಮಾಸಿಕ ಜೀವನಾಂಶವನ್ನು ₹30 ಸಾವಿರದಿಂದ ₹21 ಸಾವಿರಕ್ಕೆ ಇಳಿಸುವಾಗ ಈ ಸೂಚನೆ ನೀಡಿದೆ.

ವಿಚ್ಛೇದಿತ ಪತ್ನಿಗೆ ಮಾಸಿಕ ₹30 ಸಾವಿರ ಜೀವನಾಂಶ ಮತ್ತು ₹51ಸಾವಿರ ವ್ಯಾಜ್ಯ ವೆಚ್ಚವನ್ನು ನೀಡುವಂತೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸುವ ವೇಳೆ, ಮಹಿಳೆಯ ಆದಾಯಕ್ಕೆ ಸ್ವತಂತ್ರ ಮೂಲವಿಲ್ಲ. ಆದರೆ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆಯುವ ಮೂಲಕ ಶಿಕ್ಷಿತರಾಗಿದ್ದಾರೆ ಹೀಗಾಗಿ ಹೆಚ್ಚಿನ ಜೀವನಾಂಶ ಕೇಳುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ.

‘ಹಣ ಸಂಪಾದಿಸಲು ಸೂಕ್ತವಾದ ಸಾಮರ್ಥ್ಯ ಇದ್ದರೂ ಸರಿಯಾದ ವಿವರಣೆ ನೀಡದೆ ನಿರುದ್ಯೋಗಿಯಾಗಿ ಇರಲು ಬಯಸುವ ಸಂಗಾತಿಯ ಖರ್ಚುಗಳನ್ನು ಇನ್ನೊಬ್ಬ ಸಂಗಾತಿಯ ಮೇಲೆ ಏಕಪಕ್ಷೀಯವಾಗಿ ಹೊರಿಸಲು ಅವಕಾಶ ಕೊಡಬಾರದು’ ಎಂದು ನ್ಯಾಯಮೂರ್ತಿಗಳಾದ ವಿ. ಕಾಮೇಶ್ವರ ರಾವ್ ಮತ್ತು ಅನೂಪ್ ಕುಮಾರ್ ಮೆಂದೀರತ್ತಾ ಅವರು ಇದ್ದ ನ್ಯಾಯಪೀಠ ಹೇಳಿದೆ.

ಮನೆ ಬಿಟ್ಟು ಹೋಗಿರುವ ಪತ್ನಿಗೆ ತಿಂಗಳಿಗೆ ₹30 ಸಾವಿರ ಜೀವನಾಂಶ ಹಾಗೂ ಕೋರ್ಟ್ ವೆಚ್ಚವಾಗಿ ₹51 ಸಾವಿರ ಪಾವತಿಸಬೇಕು ಎಂದು ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶವನ್ನು ಪತಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ವಿಚಾರಣಾ ನ್ಯಾಯಾಲಯವು ಈ ಮೊದಲು ₹21 ಸಾವಿರ ಜೀವನಾಂಶ ನೀಡಬೇಕು ಎಂದು ಆದೇಶಿಸಿತ್ತು. ಆದರೆ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗದಿದ್ದರೂ, ಮೊತ್ತವನ್ನು ₹30 ಸಾವಿರಕ್ಕೆ ಹೆಚ್ಚಿಸಿತು ಎಂದು ಪತಿ ದೂರಿದ್ದಾರೆ.

‘ವಾಸ್ತವಾಂಶಗಳನ್ನು ಹಾಗೂ ಪರಿಸ್ಥಿತಿಯನ್ನು ಗಮನಿಸಿ, ಜೀವನಾಂಶದ ಮೊತ್ತವನ್ನು ಪರಿಗಣಿಸುವಾಗ ಪತಿಗೆ ಇರುವ ಹೊಣೆಗಾರಿಕೆ ಹಾಗೂ ಕುಟುಂಬದ ಇತರ ಸದಸ್ಯರ ವಿಚಾರವಾಗಿ ಇರುವ ಕರ್ತವ್ಯಗಳನ್ನು ಕಡೆಗಣಿಸಲಾಗದು’ ಎಂದು ಪೀಠ ಹೇಳಿದೆ. ವಿಚಾರಣಾ ನ್ಯಾಯಾಲಯದಲ್ಲಿನ ಪ್ರಕರಣ ಇತ್ಯರ್ಥ ಆಗುವವರೆಗೆ ಮಹಿಳೆಗೆ ₹21 ಸಾವಿರ ಜೀವನಾಂಶ ಸಾಕು ಎಂದು ಹೇಳಿದೆ. ವಿಚ್ಛೇದನ ಆಗುವವರೆಗೆ ಜೀವನಾಂಶದ ಮೊತ್ತವನ್ನು ವರ್ಷಕ್ಕೆ ₹1,500ರಷ್ಟು ಹೆಚ್ಚಿಸಬೇಕು ಎಂದು ಸೂಚಿಸಿದೆ.

ದಂಪತಿ 2018ರಲ್ಲಿ ಮದುವೆಯಾಗಿದ್ದರು. 2020ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT