ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾಮಲೈ, ಪಳನಿಸ್ವಾಮಿ ವಿರುದ್ಧ ಸ್ಟಾಲಿನ್ ಮಾನನಷ್ಟ ಮೊಕದ್ದಮೆ

Published 14 ಮಾರ್ಚ್ 2024, 16:00 IST
Last Updated 14 ಮಾರ್ಚ್ 2024, 16:00 IST
ಅಕ್ಷರ ಗಾತ್ರ

ಚೆನ್ನೈ: ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ತಮ್ಮ ಹೆಸರನ್ನು ಅಂತರರಾಷ್ಟ್ರೀಯ ಮಾದಕವಸ್ತು ಜಾಲದೊಂದಿಗೆ ತಳುಕುಹಾಕಲು ಯತ್ನಿಸಿದ್ದಾರೆ ಎಂದು ದೂರಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಗುರುವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಈ ಜಾಲವನ್ನು ಡಿಎಂಕೆ ಪಕ್ಷದ ಮಾಜಿ ಪದಾಧಿಕಾರಿ ಎ.ಕೆ. ಜಾಫರ್ ಸಾದಿಕ್ ಅವರು ಮುನ್ನಡೆಸಿದ್ದರು ಎಂಬ ಆರೋಪ ಇದೆ.

‍ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಚೆನ್ನೈ ನಗರ ಪಬ್ಲಿಕ್ ಪ್ರಾಸಿಕ್ಯೂಟರ್  ಎರಡು ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದಾರೆ. ಪಳನಿಸ್ವಾಮಿ ಮತ್ತು ಅಣ್ಣಾಮಲೈ ಅವರು ಉದ್ದೇಶಪೂರ್ಕವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ಮುಖ್ಯಮಂತ್ರಿಯವರಿಗೆ ಮಾನಹಾನಿ ಆಗುವಂತೆ ಮಾತನಾಡಿದ್ದಾರೆ ಎಂದು ದೂರಲಾಗಿದೆ.

ಮಾದಕ ವಸ್ತುಗಳ ಕಳ್ಳಸಾಗಣೆದಾರರಿಗೆ ನೆರವು ಒದಗಿಸುವ ಮೂಲಕ ಮುಖ್ಯಮಂತ್ರಿಯವರು, ಕಳ್ಳಮಾರ್ಗದಲ್ಲಿ ತಂದ ವಸ್ತುಗಳ ವಿತರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅಣ್ಣಾಮಲೈ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಮೂಲಕ ಅವರು ಮುಖ್ಯಮಂತ್ರಿಯವರು ಹೊಂದಿರುವ ಒಳ್ಳೆಯ ಹೆಸರಿಗೆ ಧಕ್ಕೆ ತಂದಿದ್ದಾರೆ. ನ್ಯಾಯಸಮ್ಮತವಲ್ಲದ ರೀತಿಯಲ್ಲಿ ರಾಜಕೀಯ ಲಾಭ ಪಡೆದುಕೊಳ್ಳುವ ಕೆಟ್ಟ ಉದ್ದೇಶದಿಂದ ಹೀಗೆ ಮಾಡಿದ್ದಾರೆ ಎಂದು ದೂರಲಾಗಿದೆ.

ಡಿಎಂಕೆ ಪಕ್ಷದ ಚೆನ್ನೈ ಪಶ್ಚಿಮ ವಿಭಾಗದ ಅನಿವಾಸಿ ಭಾರತೀಯ ಘಟಕದ ಸಂಚಾಲಕ ಆಗಿದ್ದ ಸಾದಿಕ್ ಅವರು ಅಂತರರಾಷ್ಟ್ರೀಯ ಮಟ್ಟದ ಮಾದಕವಸ್ತು ಜಾಲದ ಭಾಗವಾಗಿದ್ದರು ಎಂಬುದು ಎಐಎಡಿಎಂಕೆ ಮತ್ತು ಬಿಜೆಪಿಗೆ ಸ್ಟಾಲಿನ್ ಅವರನ್ನು ಹಾಗೂ ಅವರ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡು ಆರೋಪಗಳನ್ನು ಹೊರಿಸಲು ಅಸ್ತ್ರವಾಗಿ ಸಿಕ್ಕಿತ್ತು. ಎರಡೂ ಪಕ್ಷಗಳು ಈ ವಿಚಾರವಾಗಿ ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ನಡೆಸಿದ್ದವು. ಸಾದಿಕ್ ಅವರು ಈಗ ಮಾದಕವಸ್ತುಗಳ ನಿಯಂತ್ರಣ ಬ್ಯೂರೊದ ವಶದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT