ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಬಾದ್ಯತಾ ಸಮಿತಿ ನಡೆಗೆ ಆಕ್ಷೇಪ: ಸ್ಪೀಕರ್‌ಗೆ ಅಲಿ ಪತ್ರ

Published 1 ಡಿಸೆಂಬರ್ 2023, 16:21 IST
Last Updated 1 ಡಿಸೆಂಬರ್ 2023, 16:21 IST
ಅಕ್ಷರ ಗಾತ್ರ

ನವದೆಹಲಿ: ಕೋಮು ಸ್ವರೂಪದ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ರಮೇಶ್‌ ಬಿಧೂಢಿ ವಿರುದ್ಧ ತಾವು ದಾಖಲಿಸಿದ್ದ ದೂರು ಮತ್ತು ಬಿಧೂಢಿ ತಮ್ಮ ವಿರುದ್ಧ ದಾಖಲಿಸಿರುವ ಆಧಾರರಹಿತ ಆರೋಪವನ್ನು ಒಟ್ಟುಗೂಡಿಸಿರುವ ಲೋಕಸಭೆಯ ಹಕ್ಕುಬಾದ್ಯತಾ ಸಮಿತಿಯ ಕ್ರಮಕ್ಕೆ ಬಿಎಸ್‌ಪಿ ಸಂಸದ ಡ್ಯಾನಿಶ್‌ ಅಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಬಿಧೂಢಿ ಮತ್ತು ಡ್ಯಾನಿಶ್‌ ಅಲಿ ವಿರುದ್ಧ  ಹಲವು ಸಂಸದರು ನೀಡಿರುವ ದೂರುಗಳಿಗೆ ಸಂಬಂಧಿಸಿದಂತೆ ‘ಮೌಖಿಕ ಸಾಕ್ಷಿ’ ದಾಖಲಿಸಲು ಡಿ.7ರಂದು ವಿಚಾರಣೆಗೆ ಹಾಜರಾಗುವಂತೆ ಸಮಿತಿಯು ಅಲಿ ಅವರಿಗೆ ಸಮನ್ಸ್‌ ಜಾರಿ ಮಾಡಿದೆ. ಈ ಬೆನ್ನಲ್ಲೇ ಸ್ಪೀಕರ್‌ ಓಂ ಬಿರ್ಲಾ ಅವರಿಗೆ  ಶುಕ್ರವಾರ ಪತ್ರ ಬರೆದಿದ್ದಾರೆ.

‘ಅಧಿವೇಶನದ ಕಲಾಪದ ವಿಡಿಯೊವನ್ನು ಪಡೆದು ಸಮಿತಿಗೆ ನೀಡಿ. ಆಗ ನಿಜವಾದ ದೋಷಿ ಯಾರೆಂದು ಗುರುತಿಸಲು ಸಹಾಯವಾಗುತ್ತದೆ. ಇಲ್ಲಿ ಸಂತ್ರಸ್ತನನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಬಿಧೂಢಿ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸಮಿತಿಯು ವಿಫಲವಾದರೆ ಅದು ನ್ಯಾಯದ ಅಣಕವೇ ಸರಿ’ ಎಂದು ಅವರು ಹೇಳಿದ್ದಾರೆ.

‘ಪ್ರಕರಣ ಸಂಬಂಧ ಕಠಿಣ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ‘ಪ್ರಜಾಪ್ರಭುತ್ವದ ದೇಗುಲ’ದಲ್ಲಿ ಅವಾಚ್ಯ ಪದಗಳ ಬಳಕೆಯಾಗುವುದು ನಿಲ್ಲುತ್ತದೆ’ ಎಂದೂ ಹೇಳಿದ್ದಾರೆ.

ಲೋಕಸಭೆಯ ವಿಶೇಷ ಅಧಿವೇಶನ ಸಂದರ್ಭದಲ್ಲಿ ಕೋಮು ಸ್ವರೂಪದ ಹೇಳಿಕೆ ನೀಡಿದ ಆರೋಪದ ಮೇಲೆ ಬಿಧೂಢಿ ವಿರುದ್ಧ ವಿಪಕ್ಷಗಳ ಸಂಸದರು ಮತ್ತು ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಭಾಷೆ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಅಲಿ ವಿರುದ್ಧ  ಬಿಜೆಪಿ ಸಂಸದರು ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT