ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೀಟು ಹಂಚಿಕೆ: ಕೇಜ್ರಿವಾಲ್‌ ಜತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾತುಕತೆ

Published 14 ಫೆಬ್ರುವರಿ 2024, 16:12 IST
Last Updated 14 ಫೆಬ್ರುವರಿ 2024, 16:12 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಸಂಬಂಧ ‘ಇಂಡಿಯಾ’ ಮೈತ್ರಿಕೂಟದಲ್ಲಿ ಆಗಿರುವ ಗೊಂದಲಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಜತೆ ಬುಧವಾರ ಮಾತುಕತೆ ನಡೆಸಿದರು.

ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಎಎಪಿ ಮಂಗಳವಾರ ಆರೋಪಿಸಿತ್ತು. ಮಾತ್ರವಲ್ಲ, ದೆಹಲಿಯ ಏಳು ಕ್ಷೇತ್ರಗಳ ಪೈಕಿ ಆರರಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿಯೂ ಘೋಷಿಸಿತ್ತು. ಕಾಂಗ್ರೆಸ್‌ಗೆ ಕೇವಲ ಒಂದು ಕ್ಷೇತ್ರ  ಬಿಟ್ಟುಕೊಡುವುದಾಗಿ ತಿಳಿಸಿತ್ತು.

ಈ ಬೆಳವಣಿಗೆಯಿಂದ ಮೈತ್ರಿಕೂಟಕ್ಕೆ ಹಿನ್ನಡೆ ಉಂಟಾಗಬಹುದು ಎಂಬ ಕಾರಣ ರಾಹುಲ್‌ ಅವರು ಮಧ್ಯಪ್ರವೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಜೆಡಿಯು ಮತ್ತು ಆರ್‌ಎಲ್‌ಡಿ ಮೈತ್ರಿಕೂಟದಿಂದ ಹೊರನಡೆದಿರುವುದು ಹಾಗೂ ಪಶ್ಚಿಮ ಬಂಗಾಳದ ಎಲ್ಲ 42 ಕ್ಷೇತ್ರಗಳಲ್ಲೂ ಟಿಎಂಸಿ ಸ್ಪರ್ಧಿಸಲಿದೆ ಎಂದು ಮಮತಾ ಬ್ಯಾನರ್ಜಿ ಘೋಷಿಸಿರುವುದು ವಿರೋಧ ಪಕ್ಷಗಳ ಒಗ್ಗಟ್ಟಿಗೆ ಧಕ್ಕೆ ಉಂಟುಮಾಡಿದೆ. 

ಸೀಟು ಹಂಚಿಕೆ ವಿಚಾರವಾಗಿ ಮಾತುಕತೆ ಮುಂದುವರಿಯಬೇಕು ಹಾಗೂ ಎರಡೂ ಪಕ್ಷಗಳ ನಡುವೆ ಹೊಂದಾಣಿಕೆ ಅಗತ್ಯ ಎಂದು ರಾಹುಲ್‌ ಅವರು ದೂರವಾಣಿ ಮೂಲಕ ನಡೆದ ಸಂಭಾಷಣೆಯಲ್ಲಿ ಕೇಜ್ರಿವಾಲ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಒಗ್ಗಟ್ಟಿನಿಂದ ಇದ್ದರೆ ಮಾತ್ರ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಬಹುದು. ಆದ್ದರಿಂದ ಒಗ್ಗಟ್ಟಿನಿಂದ ಉಳಿಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಇಬ್ಬರು ಚರ್ಚಿಸಿದ್ದಾರೆ.

ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬದ ಬಗ್ಗೆ ಕೇಜ್ರಿವಾಲ್‌, ಕಾಂಗ್ರೆಸ್‌ ನಾಯಕನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎಂದು ಮೂಲಗಳು ಹೇಳಿವೆ. ಅದೇ ರೀತಿ, ಗುಜರಾತ್‌ನ ಭರೂಚ್‌ ಕ್ಷೇತ್ರದಿಂದ ಸ್ಪರ್ಧಿಸುವ ಗಂಭೀರ ಚಿಂತನೆಯನ್ನು ಎಎಪಿ ಮಾಡಿದೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. 

‘ಇನ್ನೂ ಬಗೆಹರಿಯದೇ ಇರುವ ವಿಚಾರಗಳನ್ನು ಮಾತುಕತೆ ಮೂಲಕ ಬಗೆಹರಿಸಬಹುದು’ ಎಂದು ರಾಹುಲ್ ಅವರು ದೆಹಲಿ ಮುಖ್ಯಮಂತ್ರಿಗೆ ತಿಳಿಸಿದ್ದಾರೆ.

‘ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಿಗೂ ಸರಿಯಾದ ಮಾಹಿತಿ ಇಲ್ಲ’ ಎಂದು ಎಎಪಿ ಪ್ರಧಾನ ಕಾರ್ಯದರ್ಶಿ ಸಂದೀಪ್‌ ಪಾಠಕ್ ಮಂಗಳವಾರ ದೂರಿದ್ದರು. ವಿಳಂಬ ಧೋರಣೆ ಮುಂದುವರಿದರೆ ದೆಹಲಿಯ ಆರು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವುದಾಗಿಯೂ ತಿಳಿಸಿದ್ದರು.

ಕೇಜ್ರಿವಾಲ್
ಕೇಜ್ರಿವಾಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT