ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್‌ ಅಕ್ರಮ: ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಧರಣಿ

Published 27 ಜೂನ್ 2024, 16:35 IST
Last Updated 27 ಜೂನ್ 2024, 16:35 IST
ಅಕ್ಷರ ಗಾತ್ರ

ನವದೆಹಲಿ: ನೀಟ್ ಯುಜಿ, ಪಿಜಿ ಮತ್ತು ಯುಜಿಸಿ ನೆಟ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ‘ಎನ್‌ಟಿಎ ವಿರುದ್ಧ ಭಾರತ’ ಎಂಬ ಆಶ್ರಯದಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಎರಡನೇ ದಿನವಾದ ಗುರುವಾರವೂ ಇಲ್ಲಿನ ಜಂತರ್‌ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿಯನ್ನು ಮುಂದುವರಿಸಿದವು. 

ಕಂಜರಗಳು, ಭಿತ್ತಿಪತ್ರಗಳು, ಬ್ಯಾನರ್‌ಗಳನ್ನು ಹಿಡಿದಿದ್ದ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು, ‘ನೀಟ್‌ ಅಭ್ಯರ್ಥಿಗಳಿಗೆ ನ್ಯಾಯ ಸಿಗಲಿ’, ಎನ್‌ಟಿಎ ವೈಫಲ್ಯದಿಂದಾಗಿ ನಮ್ಮ ಭವಿಷ್ಯ ಅಪಾಯದಲ್ಲಿದೆ’ ಮತ್ತು ಎನ್‌ಟಿಎಯ ವಿಸರ್ಜನೆಯೇ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಇರುವ ಪರಿಹಾರ’ ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಸಿಪಿಐ (ಎಂಎಲ್‌) ಲಿಬರೇಷನ್‌ ಪಕ್ಷದ ಸಂಸದ ರಾಜಾ ರಾಮ್‌ ಸಿಂಗ್‌ ಸೇರಿದಂತೆ ಮೊದಲ ಬಾರಿಗೆ ಆಯ್ಕೆಯಾದ ಹಲವು ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು. 

ಎಡ ಪಕ್ಷ ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟ (ಎಐಎಸ್‌ಎ), ದೆಹಲಿ ವಿವಿಯ ಕ್ರಾಂತಿಕಾರಿ ಯುವ ಸಂಘಟನೆ (ಕೆವೈಎಸ್‌), ದಿಶಾ ವಿದ್ಯಾರ್ಥಿಗಳ ಸಂಸ್ಥೆ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಜಂಟಿಯಾಗಿ ಈ ಪ್ರತಿಭಟನೆ  ಹಮ್ಮಿಕೊಂಡಿವೆ.

ವಿದ್ಯಾರ್ಥಿಗಳು ಬುಧವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದು, ರಾತ್ರಿಯೂ ಪ್ರತಿಭಟನೆ ಮಾಡಲು ಯತ್ನಿಸಿದರು. ಆದರೆ, ಇದಕ್ಕೆ ಅವಕಾಶ ನೀಡದ ದೆಹಲಿ ಪೊಲೀಸರು, 12ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದರು. ಸಂಜೆ ಐದು ಗಂಟೆಯ ನಂತರ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡಲಿಲ್ಲ.‌

‘ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯನ್ನು ವಜಾ ಮಾಡಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ರಾಜೀನಾಮೆ ನೀಡಬೇಕು’ ಎಂದು ಪ್ರತಿಭಟನನಿರತರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT