ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖ್ಬೀರ್‌ ಸಿಂಗ್‌ ಸಂಧು, ಜ್ಞಾನೇಶ್‌ ಕುಮಾರ್‌ ನೂತನ ಚುನಾವಣಾ ಆಯುಕ್ತರಾಗಿ ನೇಮಕ

Published 14 ಮಾರ್ಚ್ 2024, 9:13 IST
Last Updated 14 ಮಾರ್ಚ್ 2024, 9:13 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಐಎಎಸ್‌ ಅಧಿಕಾರಿಗಳಾದ ಜ್ಞಾನೇಶ್‌ ಕುಮಾರ್‌ ಮತ್ತು ಸುಖಬೀರ್‌ ಸಂಧು ಅವರು ಚುನಾವಣಾ ಆಯುಕ್ತರಾಗಿ ಗುರುವಾರ ನೇಮಕಗೊಂಡಿದ್ದಾರೆ. ಇವರ ನೇಮಕಾತಿ ಕುರಿತು ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿ ಗುರುವಾರ ಸಭೆ ನಡೆಸಿ ಈ ಇಬ್ಬರ ಹೆಸರನ್ನು ಶಿಫಾರಸು ಮಾಡಿತ್ತು. 

‘ಇಬ್ಬರು ಚುನಾವಣಾ ಆಯುಕ್ತರ ಆಯ್ಕೆಗೆ ಸಂಬಂಧಿಸಿದಂತೆ ಆರು ಹೆಸರುಗಳು ಸಮಿತಿಯ ಮುಂದೆ ಬಂದಿದ್ದವು. ಆ ಪೈಕಿ ಉನ್ನತಾಧಿಕಾರ ಸಮಿತಿಯ ಬಹುಪಾಲು ಸದಸ್ಯರು ಸಂಧು ಮತ್ತು ಜ್ಞಾನೇಶ್‌ ಅವರ ಹೆಸರನ್ನು ಅಂತಿಮಗೊಳಿಸಿದರು’ ಎಂದು ಸಮಿತಿ ಸದಸ್ಯರೂ ಆಗಿರುವ ಕಾಂಗ್ರೆಸ್‌ ಮುಖಂಡ ಅಧೀರ್‌ ರಂಜನ್‌ ಚೌಧರಿ ತಿಳಿಸಿದರು.

ಸಭೆಯ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅಂತಿಮವಾಗಿ ಆಯ್ಕೆಗೆ ಪರಿಗಣಿಸಲು ಹೆಸರಿಸಲಾಗಿದ್ದ ಆರು ಮಂದಿಗಳಲ್ಲಿ ಮಾಜಿ ಅಧಿಕಾರಿಗಳಾದ ಉತ್ಪಲ್‌ ಕುಮಾರ್ ಸಿಂಗ್‌, ಪ್ರದೀಪ್‌ ಕುಮಾರ್‌ ತ್ರಿಪಾಠಿ, ಜ್ಞಾನೇಶ್‌ ಕುಮಾರ್‌, ಇಂದೀವರ್‌ ಪಾಂಡೆ, ಸುಖಬೀರ್‌ ಸಿಂಗ್‌ ಸಂಧು, ಸುಧೀರ್‌ ಕುಮಾರ್‌ ಗಂಗಾಧರ್‌ ರಹಾಟೆ ಅವರ ಹೆಸರುಗಳು ಇದ್ದವು’ ಎಂದರು.

‘ಸರ್ಕಾರ ಬಯಸಿದವರ ಆಯ್ಕೆ ಆಗಿದೆ’:

‘ನನ್ನನ್ನು ಔಪಚಾರಿಕವಾಗಿ ಮಾತ್ರ ಸಭೆಗೆ ಕರೆಯಲಾಗಿತ್ತು ಮತ್ತು ಈ ಆಯ್ಕೆಯೂ ಔಪಚಾರಿಕವಾಗಿ ನಡೆದಿದೆ. ಅಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಇದ್ದಿದ್ದರೆ, ಪರಿಸ್ಥಿತಿಯೇ ಭಿನ್ನವಾಗಿರುತ್ತಿತ್ತು. ಆದಾಗ್ಯೂ, ನಾನು ಯಾವುದೇ ಹೆಸರನ್ನು ಸೂಚಿಸಲಿಲ್ಲ. ಸರ್ಕಾರ ತನಗೆ ಬೇಕಾದವರನ್ನು ಆಯ್ಕೆ ಮಾಡಿದೆ’ ಎಂದು ಅವರು ತಿಳಿಸಿದರು.

‘ಚುನಾವಣಾ ಆಯುಕ್ತರ ಹುದ್ದೆಗಳು ಖಾಲಿ ಇರಬಾರದು ಎಂಬ ಕಾರಣಕ್ಕೆ ನಾನು ಸಭೆಯಲ್ಲಿ ಭಾಗವಹಿಸಿದ್ದೆ. ಆಯ್ಕೆ ಸಮಿತಿಯಲ್ಲಿ ಬಹುಮತವು ಸರ್ಕಾರದ ಪರವಾಗಿದ್ದು, ಅದು ಬಯಸಿದಂತೆಯೇ ಆಗಿದೆ’ ಎಂದರು. 

ಶೋಧನಾ ಸಮಿತಿ ಮುಖ್ಯಸ್ಥರಾದ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.

ಚುನಾವಣಾ ಆಯುಕ್ತರಾಗಿದ್ದ ಅನೂಪ್‌ ಚಂದ್ರ ಪಾಂಡೆ ಫೆಬ್ರುವರಿ 14ರಂದು ನಿವೃತ್ತಿ ಹೊಂದಿದ್ದರು ಹಾಗೂ ಅರುಣ್ ಗೋಯಲ್ ಅವರು ಇತ್ತೀಚೆಗಷ್ಟೇ (ಮಾರ್ಚ್‌ 9ರಂದು) ರಾಜೀನಾಮೆ ನೀಡಿದ್ದರು. ಹೀಗಾಗಿ ಚುನಾವಣಾ ಆಯೋಗದ ಎರಡು ಆಯುಕ್ತ ಹುದ್ದೆಗಳು ಖಾಲಿಯಾಗಿದ್ದವು.

ಸುಖಬೀರ್‌ ಸಂಧು ಜ್ಞಾನೇಶ್‌ ಕುಮಾರ್‌ ಅವರು ಅದ್ಭುತ ಸೇವಾ ದಾಖಲೆಗಳನ್ನು ಹೊಂದಿದ್ದಾರೆ. ಕಠಿಣ ಜವಾಬ್ದಾರಿ ನಿರ್ವಹಿಸುವ ಅವರಿಗೆ ಶುಭವಾಗಲಿ
ಎಸ್‌.ವೈ.ಖುರೇಶಿ ಮಾಜಿ ಮುಖ್ಯ ಚುನಾವಣಾ ಆಯುಕ್ತ

1998ರ ಐಎಎಸ್‌ ತಂಡದವರು

ಚುನಾವಣಾ ಆಯುಕ್ತರ ಸ್ಥಾನಕ್ಕೆ ಆಯ್ಕೆ ಆಗಿರುವ ಜ್ಞಾನೇಶ್‌ ಕುಮಾರ್‌ ಮತ್ತು ಸುಖಬೀರ್‌ ಸಿಂಗ್‌ ಸಂಧು ಅವರು ಭಾರತೀಯ ಆಡಳಿತ ಸೇವೆಯ (ಐಎಎಸ್‌) 1988ರ ತಂಡದ ಅಧಿಕಾರಿಗಳು. ಅವರು ಕ್ರಮವಾಗಿ ಕೇರಳ ಮತ್ತು ಉತ್ತರಾಖಂಡ ವೃಂದಕ್ಕೆ ಸೇರಿದವರು. ಜ್ಞಾನೇಶ್‌ ಕುಮಾರ್‌ ಅವರು ಗೃಹ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ವಿಧಿ 370ರ ಅಡಿಯಲ್ಲಿನ ವಿಶೇಷ ಸ್ಥಾನಮಾನ ರದ್ದತಿ ಕುರಿತು ಮೇಲ್ವಿಚಾರಣೆ ನಡೆಸಿದ್ದರು. ಅಲ್ಲದೆ ಸಂಸದೀಯ ವ್ಯವಹಾರಗಳ ಸಚಿವಾಲಯ ಮತ್ತು ಸಹಕಾರ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಸುಖಬೀರ್‌ ಸಿಂಗ್‌ ಸಂಧು ಅವರು ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಯಾಗಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

‘ಬುಧವಾರ ರಾತ್ರಿ 212 ಅಭ್ಯರ್ಥಿಗಳ ಪಟ್ಟಿ’

‘ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯ ಕಾರ್ಯವಿಧಾನದ ಬಗ್ಗೆ ಕೆಲ ಪ್ರಶ್ನೆಗಳನ್ನು ಎತ್ತಿದ್ದು ಆಯ್ಕೆ ಕುರಿತು ಅಸಮ್ಮತಿ ಟಿಪ್ಪಣಿ ಸಲ್ಲಿಸಿದ್ದೇನೆ’ ಎಂದು ಚೌಧರಿ ಹೇಳಿದರು.  ‘ಆಯುಕ್ತರ ಸ್ಥಾನಕ್ಕೆ ಸಿದ್ಧಪಡಿಸಲಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ನಾನು ಕೇಳಿದ್ದೆ. ಆದರೆ ಸಭೆಯ ಹಿಂದಿನ ರಾತ್ರಿ 212 ಹೆಸರುಗಳ ಪಟ್ಟಿಯನ್ನು ಒದಗಿಸಲಾಯಿತು. ಇಷ್ಟು ಕಡಿಮೆ ಅವಧಿಯಲ್ಲಿ ಅಷ್ಟೂ ಜನರ ಪೈಕಿ ಸಮರ್ಥರನ್ನು ಗುರುತಿಸುವುದು ಭೌತಿಕವಾಗಿ ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.  ‘ಈ ಪಟ್ಟಿಯಲ್ಲಿದ್ದ ಜನರ ಹಿನ್ನೆಲೆ ಅನುಭವದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಹೀಗಾಗಿ ಸಮಿತಿಯ ಕಾರ್ಯವಿಧಾನದ ಈ ಲೋಪ ನನಗೆ ಇಷ್ಟವಾಗಲಿಲ್ಲ’ ಎಂದರು. ‘ಒಂದೆಡೆ ನನ್ನ ಬಳಿ 212 ಹೆಸರುಗಳ ಪಟ್ಟಿ ಇದ್ದರೆ ಸರ್ಕಾರ ಕೇವಲ ಆರು ಹೆಸರುಗಳ ಪ್ರಸ್ತಾವ ಸಲ್ಲಿಸಿತು. ಚುನಾವಣಾ ಆಯೋಗದ ಉನ್ನತ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳ ಹೆಸರನ್ನು 10 ನಿಮಿಷಗಳ ಮೊದಲಷ್ಟೆ ನನಗೆ ನೀಡಲಾಯಿತು; ಅದೂ ಕೇವಲ ಔಪಚಾರಿಕವಾಗಿ. ಹೀಗಾಗಿ ಇದನ್ನು ನಾನು ಒಪ್ಪದೆ ಅಸಮ್ಮತಿ ಟಿಪ್ಪಣಿ ಸಲ್ಲಿಸಿದ್ದೇನೆ’ ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT