ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ತಾಯ್ತನ ನೀತಿಗೆ ತಿದ್ದುಪಡಿ; ದಾನಿಗಳ ಜೀವಾಣು ಬಳಸಲು ಅವಕಾಶ

Published 23 ಫೆಬ್ರುವರಿ 2024, 11:15 IST
Last Updated 23 ಫೆಬ್ರುವರಿ 2024, 11:15 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ಬಾಡಿಗೆ ತಾಯ್ತನ ನಿಯಮ–2022ಕ್ಕೆ ತಿದ್ದುಪಡಿ ತಂದಿದ್ದು, ವಿವಾಹಿತ ಜೋಡಿಯಲ್ಲಿ ಒಬ್ಬರು ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅಂತಹವರು ಮಗು ಪಡೆಯಲು ದಾನಿಯ ಅಂಡಾಣು ಅಥವಾ ವೀರ್ಯಾಣು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಸರ್ಕಾರ, 'ದಂಪತಿಯ ಪೈಕಿ ಪತಿ ಇಲ್ಲವೇ ಪತ್ನಿ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಮಗು ಪಡೆಯಲು ದಾನಿಯ ಅಂಡಾಣು ಅಥವಾ ವೀರ್ಯಾಣು ಬಳಸಿಕೊಳ್ಳುವ ಅಗತ್ಯವಿದೆ ಎಂಬುದನ್ನು ಜಿಲ್ಲಾ ವೈದ್ಯಕೀಯ ಮಂಡಳಿ ಪ್ರಮಾಣಿಕರಿಸಬೇಕು. ನಂತರವಷ್ಟೇ ಬಾಡಿಗೆ ತಾಯ್ತನ ಪ್ರಕ್ರಿಯೆಯಲ್ಲಿ ಮುಂದುವರಿಯಲು ಅವಕಾಶವಿರುತ್ತದೆ' ಎಂದು ಸ್ಪಷ್ಟವಾಗಿ ತಿಳಿಸಿದೆ.

ದಂಪತಿಯಲ್ಲಿ ಕನಿಷ್ಠ ಒಬ್ಬರ ವಂಶವಾಹಿ, ಬಾಡಿಗೆ ತಾಯ್ತನದ ಮೂಲಕ ಜನಿಸುವ ಮಗುವಿನಲ್ಲಿ ಇರಬೇಕು ಎಂಬ ನಿಯಮದ ಆಧಾರದಲ್ಲಿ ಬಾಡಿಗೆ ತಾಯ್ತನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಪತಿ ಹಾಗೂ ಪತ್ನಿ ಇಬ್ಬರೂ ವೈದ್ಯಕೀಯ ಸಮಸ್ಯೆ ಹೊಂದಿದ್ದರೆ ಅಥವಾ ತಮ್ಮದೇ ವಂಶವಾಹಿ ಉತ್ಪಾದಿಸುವ ಸಾಮರ್ಥ್ಯ ಹೊಂದಿಲ್ಲದಿದ್ದರೆ, ಅವರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಸಾಧ್ಯವಿಲ್ಲ.

'ಏಕ ಪೋಷಕ ಮಹಿಳೆಯು (ವಿಧವೆ ಅಥವಾ ವಿಚ್ಛೇದಿತೆ) ಬಾಡಿಗೆ ತಾಯ್ತನ ಪ್ರಕ್ರಿಯೆ ಮೂಲಕ ಮಗು ಪಡೆಯಲಿಚ್ಛಿಸಿದರೆ ತಮ್ಮದೇ ಅಂಡಾಣು ಬಳಸುವುದು ಅಗತ್ಯ' ಎಂದೂ ತಿಳಿಸಲಾಗಿದೆ.

ಕೇಂದ್ರ ಸರ್ಕಾರವು, ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲಿಚ್ಛಿಸುವ ದಂಪತಿಯು ದಾನಿಗಳ ಜೀವಾಣು ಪಡೆಯುವುದನ್ನು ನಿಷೇಧಿಸಿ 2023ರ ಮಾರ್ಚ್‌ನಲ್ಲಿ ಆದೇಶಿಸಿತ್ತು.

ಹುಟ್ಟಿನಿಂದಲೇ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ದಾನಿಗಳ ಜೀವಾಣು ಮೂಲಕ ಮಗು ಪಡೆಯಲು ಅವಕಾಶ ಕಲ್ಪಿಸುವಂತೆ ಕೋರಿ ದೇಶದಾದ್ಯಂತ ಸಾಕಷ್ಟು ಮಹಿಳೆಯರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಕೋರ್ಟ್ ನೀಡಿದ ಸೂಚನೆ ಅನುಸಾರ ನಿಯಮಕ್ಕೆ ತಿದ್ದುಪಡಿ ತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT