ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಬಾಡಿಗೆ ತಾಯ್ತನ: ಮತ್ತಷ್ಟು ಪ್ರಶ್ನೆ

ಕಠಿಣ ನಿಯಮಗಳಿಂದಾಗಿ ಕಾನೂನುಬಾಹಿರ ವ್ಯವಹಾರಗಳಿಗೆ ಕುಮ್ಮಕ್ಕು?
Last Updated 8 ಆಗಸ್ಟ್ 2022, 22:00 IST
ಅಕ್ಷರ ಗಾತ್ರ

ಸಾರ್ವಜನಿಕರ ಗಮನವನ್ನು ಅಷ್ಟಾಗಿ ಸೆಳೆಯದ, ಸಾರ್ವಜನಿಕ ಚರ್ಚೆಗೆ ವಸ್ತುವಾಗದ, ಆದರೆ ನೂರಾರು ಜನರ ವೈಯಕ್ತಿಕ ಬದುಕಿನ ಮೇಲೆ ಪ್ರಭಾವ ಬೀರುವ ಬಾಡಿಗೆ ತಾಯ್ತನದ (ಸರೊಗಸಿ) ವಿಷಯಕ್ಕೆ ಸಂಬಂಧಪಟ್ಟಂತೆ ಆಸಕ್ತಿಕರ ಪ್ರಕರಣವೊಂದು ದೆಹಲಿ ಹೈಕೋರ್ಟ್‌ನಲ್ಲಿ ಇತ್ತೀಚೆಗೆ ದಾಖಲಾಗಿದೆ. ಅದಕ್ಕೆ ಕಾರಣ, ಬಾಡಿಗೆ ತಾಯ್ತನದ ಕಾನೂನಿಗೆ ಈಚೆಗೆ ಮಾಡಿರುವ ತಿದ್ದುಪಡಿ.

ಬಾಡಿಗೆ ತಾಯ್ತನ ಎಂದರೆ ಮಹಿಳೆ ತನ್ನದಲ್ಲದ ಭ್ರೂಣವನ್ನು ತನ್ನ ಗರ್ಭದಲ್ಲಿ ಪೂರ್ಣಾವಧಿಗೆ ಇಟ್ಟುಕೊಂಡು, ಪೊರೆದು ಮಗುವನ್ನು ಹೆತ್ತು ಕೊಡುವುದು, ಎಂದರೆ, ತನ್ನ ಗರ್ಭವನ್ನು ಇತರರಿಗೆ ಬಾಡಿಗೆಗೆ ಕೊಡುವುದು. ಈ ಕೆಲಸಕ್ಕಾಗಿ ಮಹಿಳೆ ಹಣ ಪಡೆಯುವುದರಿಂದ ಇದು ‘ಬಾಡಿಗೆ ತಾಯ್ತನ’. ಒಂದಲ್ಲ ಒಂದು ಕಾರಣಕ್ಕಾಗಿ ಮಗುವನ್ನು ಪಡೆಯಲು ಅಶಕ್ತರಾದ ದಂಪತಿ, ತಮ್ಮದೇ ಮಗುವನ್ನು ಪಡೆಯಲು ಈ ಬಾಡಿಗೆ ತಾಯ್ತನದ ಆಯ್ಕೆಯು ಪರ್ಯಾಯ ಮಾರ್ಗ.

ಭಾರತದಲ್ಲಿ ಬಾಡಿಗೆ ಗರ್ಭಗಳು ಕಡಿಮೆ ಬೆಲೆಗೆ ದೊರೆಯುತ್ತವೆ ಎಂಬ ಕಾರಣಕ್ಕೆ, ಮಗುವನ್ನು ಪಡೆ ಯಲು ಇಚ್ಛಿಸುವ ವಿದೇಶಿಯರಿಗೆ ಭಾರತವು ಆಪ್ತವಾದ ಆಯ್ಕೆಯ ತಾಣವಾಯಿತು. ಪರಿಣಾಮವಾಗಿ, ಇದು ಒಂದು ವ್ಯಾಪಾರವಾಯಿತು. ಈ ವ್ಯಾಪಾರಕ್ಕೆ ದಲ್ಲಾಳಿಗಳ ಪ್ರವೇಶವಾಗಿ, ದಂಧೆಯಾಗಿ ಬೆಳೆಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಇಲ್ಲಿ ಶೋಷಣೆಗೆ ಒಳಗಾಗಿದ್ದು ಮತ್ತೆ ಮಹಿಳೆಯರೇ!

ಇಂಥ ಶೋಷಣೆಯನ್ನು ತಪ್ಪಿಸಲು, ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದಂತೆ, ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆಯನ್ನು 2019ರಲ್ಲಿ ಜಾರಿಗೆ ತರ ಲಾಯಿತು. ಇದರ ಉದ್ದೇಶವು ಬಾಡಿಗೆ ತಾಯಂದಿರ ಮೇಲಿನ ಶೋಷಣೆಯನ್ನು ತಪ್ಪಿಸುವುದು ಮತ್ತು ವಾಣಿಜ್ಯೋದ್ಯಮವಾಗಿ ಬೆಳೆದ ಬಾಡಿಗೆ ತಾಯ್ತನದ ಅನೈತಿಕ ಬಳಕೆಯನ್ನು ತಪ್ಪಿಸುವುದು. ಈ ಕಾನೂನಿಗೆ ಈಚೆಗೆ, 2021ರ ಡಿಸೆಂಬರ್‌ನಲ್ಲಿ ತಿದ್ದುಪಡಿ ಮಾಡ ಲಾಯಿತು. ಅದರಲ್ಲಿ, ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನವನ್ನು ನಿಷೇಧಿಸಲಾಯಿತು ಮತ್ತು ಅವಿವಾಹಿತ ಪುರುಷರು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುವುದನ್ನು ನಿಷೇಧಿಸಲಾಯಿತು. ಬಾಡಿಗೆ ತಾಯ್ತನ (ನಿಯಂತ್ರಣ) ಅಧಿನಿಯಮದ ಪ್ರಕಾರ, ವಿವಾಹಿತ ದಂಪತಿ ತಮ್ಮದೇ ಆದ ಮಗುವನ್ನು ಹೊಂದಿರದಿದ್ದರೆ, ವೈದ್ಯಕೀಯ ಕಾರಣಗಳಿಗಾಗಿ ಮಾತ್ರ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಅವಕಾಶವಿದೆ. ಒಬ್ಬಂಟಿ ಮಹಿಳೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಬೇಕಾದರೆ, ಆಕೆಯು ವಿಧವೆ ಅಥವಾ ವಿಚ್ಛೇದಿತೆಯಾಗಿರಬೇಕು, 35ರಿಂದ 45 ವರ್ಷದೊಳಗಿನ ವಯೋಮಾನದವಳಾಗಿರಬೇಕು. ಒಬ್ಬಂಟಿ ಪುರುಷ, ಸಲಿಂಗ ದಂಪತಿ ಮತ್ತು ಸಹಜೀವನ ನಡೆಸುತ್ತಿರುವ ಜೋಡಿಗಳು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಅನರ್ಹರಾಗುತ್ತವೆ. ಈ ತಿದ್ದುಪಡಿಯಿಂದಾಗಿ, ಬಾಡಿಗೆ ಗರ್ಭದ ಮೂಲಕ ಮಗುವನ್ನು ಪಡೆಯಲು ಇಚ್ಛಿಸುವ ಅನೇಕ ವರ್ಗದ ಜನರಿಗೆ ಅದು ಸಾಧ್ಯವಾಗುತ್ತಿಲ್ಲ.

ತನ್ನದೇ ಮಗು ಪಡೆಯಬೇಕೆಂದು ಹಂಬಲಿಸಿದ, ದೆಹಲಿ ನ್ಯಾಯಾಲಯದಲ್ಲಿ ವಕೀಲರಾಗಿರುವ ಕರಣ್ ಬಾಲ್‍ರಾಜ್ ಮೆಹತಾ ಅವರು ಕಾನೂನಿನ ನಿರ್ಬಂಧಕ್ಕೆ ಒಳಪಟ್ಟ ಇಂಥ ಒಂದು ವರ್ಗಕ್ಕೆ ಸೇರಿದವರು, ಒಬ್ಬಂಟಿ ಪುರುಷ. ಕಾನೂನಿನ ಈ ತಿದ್ದುಪಡಿ ಅವರ ಆಸೆಗೆ ತಣ್ಣೀರೆರಚಿದೆ. ‘ಮಗುವನ್ನು ಪಡೆಯುವ ಬಯಕೆಯು ಹೆಂಗಸರಿಗೆ ಮಾತ್ರ ಸೀಮಿತ ಎಂದು ಜಗತ್ತು ತಿಳಿದಂತಿದೆ. ಆದರೆ ತನ್ನದೇ ಮಗುವನ್ನು ಪಡೆಯಬೇಕೆಂಬ ಬಯಕೆಗೆ ಸ್ತ್ರೀ, ಪುರುಷರೆಂಬ ವ್ಯತ್ಯಾಸವಿಲ್ಲ’ ಎನ್ನುತ್ತಾರೆ ಇವರು. ಈ ರೀತಿ ಅನರ್ಹಗೊಳಿಸಿರುವುದು ನ್ಯಾಯಸಮ್ಮತ ಅಲ್ಲ ಎನ್ನುವ ಮೆಹತಾ, ಕಾನೂನಿನಲ್ಲಿ ಮಾಡಿರುವ ಈ ತಾರತಮ್ಯವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇ ರಿದ್ದಾರೆ. ಹಾಗೆಯೇ, ಇವರ ಜೊತೆಯಲ್ಲಿ ಎರಡನೇ ಅರ್ಜಿದಾರರಾಗಿ ಪೂಜಾ (ಹೆಸರನ್ನು ಬದಲಿಸಲಾಗಿದೆ) ಎಂಬ ಮಹಿಳೆಯೂ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈಕೆ ಎರಡನೇ ಮಗುವಿಗೆ ಗರ್ಭ ಧರಿಸಿದಾಗ ಗರ್ಭಪಾತ ವಾಗಿದ್ದು, ಬಹಳಷ್ಟು ತೊಂದರೆಗಳಿಗೆ ಒಳಗಾಗಿದ್ದರು. ಹಾಗಾಗಿ ಮತ್ತೆ ಗರ್ಭ ಧರಿಸುವುದೆಂದರೆ, ಆಕೆಗೆ ಭಯಮಿಶ್ರಿತ ಹಿಂಜರಿಕೆ. ಆದರೆ, ಇರುವ ಒಬ್ಬ ಮಗಳು ಒಬ್ಬಂಟಿಯಾಗಬಾರದು ಎಂಬ ಕಾರಣಕ್ಕೆ ಮತ್ತೊಂದು ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಪಡೆಯಬೇಕು ಎಂಬುದು ಅವರ ಆಸೆಯಾಗಿತ್ತು. ಆದರೆ ಅವರ ಆಸೆಗೆ ‘ದಂಪತಿಗೆ ಒಂದು ಮಗುವಿದ್ದರೆ, ಬಾಡಿಗೆ ಗರ್ಭದ ಮೂಲಕ ಇನ್ನೊಂದು ಮಗುವನ್ನು ಪಡೆಯಲು ಅನರ್ಹರಾಗುತ್ತಾರೆ’ ಎಂದು ಈ ಕಾನೂನಿಗೆ ಮಾಡಿರುವ ಈಚಿನ ತಿದ್ದುಪಡಿ ಅಡ್ಡಿಬಂದಿದೆ. ‘ಮಗು ಬೇಕೇ ಬೇಡವೇ ಎಂಬುದು ಮತ್ತು ಮಗುವನ್ನು ಯಾವಾಗ ಪಡೆಯಬೇಕು ಮತ್ತು ಹೇಗೆ ಪಡೆಯಬೇಕು ಎಂಬುದು ಮಹಿಳೆಯ ಆಯ್ಕೆಯಾಗಿರಬೇಕು. ಅನೇಕರಿಗೆ ತಂದೆಯಾಗುವ ಅಥವಾ ತಾಯಿಯಾಗುವ ಆಸೆ ಇರುತ್ತದೆ. ಆದರೆ, ಸಹಜ ರೀತಿಯಲ್ಲಿ ಮಗುವನ್ನು ಪಡೆಯಲು ಸಾಧ್ಯವಿರುವುದಿಲ್ಲ’ ಎಂಬುದು ಇವರ ಅಭಿಪ್ರಾಯ.

ಬಾಡಿಗೆ ತಾಯ್ತನವು ಕಾನೂನಿನ ಅಂಕೆಗೆ ಒಳಪಡುವ ಮುನ್ನ, ಬಡ ಮಹಿಳೆಯರಿಗೆ ಹಣದ ಆಮಿಷ ತೋರಿಸಿ ಬಾಡಿಗೆ ತಾಯ್ತನಕ್ಕಾಗಿ ಬಳಸಿಕೊಂಡು, ಕರಾರಿನಂತೆ ಕೊಡಬೇಕಾದ ಹಣವನ್ನೂ ಕೊಡದೆ ಅವರನ್ನು ಶೋಷಿಸಲಾಗುತ್ತಿತ್ತು. ಅದನ್ನು ತಪ್ಪಿಸುವುದಕ್ಕಾಗಿ, ಈ ತಿದ್ದುಪಡಿಯ ಮೂಲಕ, ಹಣ ಗಳಿಕೆಯ ಉದ್ದೇಶದಿಂದ ನಡೆಯುವ ಬಾಡಿಗೆ ತಾಯ್ತನವನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಈ ‘ಪರೋಪಕಾರಿ ಬಾಡಿಗೆ ತಾಯ್ತನ’ದಲ್ಲಿ (ಆಲ್‍ಟ್ರೂಯಿಸ್ಟಿಕ್ ಸರೊಗಸಿ), ಬಾಡಿಗೆ ತಾಯಿಯ ವೈದ್ಯಕೀಯ ಖರ್ಚು ಮತ್ತು ಆರೋಗ್ಯ ವಿಮಾ ಕಂತುಗಳನ್ನಷ್ಟೇ ಮಗುವನ್ನು ಪಡೆಯಲು ಇಚ್ಛಿಸುವವರು ಭರಿಸಬೇಕಾಗುತ್ತದೆ.

ಈ ಕಾನೂನಿನಲ್ಲಿ ಸೇರ್ಪಡೆಯಾಗಿರುವ ಈ ಉಪ ಬಂಧಗಳು, ವ್ಯಕ್ತಿಯ ಮೂಲಭೂತ ಹಕ್ಕನ್ನು ಕಸಿದು ಕೊಳ್ಳುತ್ತವೆ ಎಂಬುದೂ ಈ ತಿದ್ದುಪಡಿಗಳ ವಿರುದ್ಧ ವ್ಯಕ್ತವಾಗಿರುವ ಆಕ್ರೋಶಕ್ಕೆ ಕಾರಣವಾಗಿದೆ. ಆದರೂ, ಈ ಪ್ರಕರಣ ಸದ್ದು ಮಾಡದಿರುವುದಕ್ಕೆ ಕಾರಣ, ಇದು ಮಹಿಳೆಯರಿಗೆ ಸಂಬಂಧಿಸಿದುದು ಎಂಬುದೇ!

ಮಹಿಳೆಯರು ಮಾತ್ರ ಗರ್ಭ ಧರಿಸಬಲ್ಲರು. ಇದು ಪ್ರಕೃತಿಯ ನಿಯಮ. ಈ ಕಾರಣಕ್ಕೆ, ತಾಯ್ತನ, ಬಂಜೆತನ, ಬಸಿರು, ಬಾಣಂತನ ಇವೆಲ್ಲ ಮಹಿಳೆಯರಿಗಷ್ಟೇ ಸಂಬಂಧಿಸಿದವು ಎಂಬಂತೆ, ಆ ಬಗೆಗಿನ ಚರ್ಚೆಗಳಲ್ಲಿ ಪುರುಷ ವರ್ಗ ಒಂದು ರೀತಿಯ ನಿರಾಸಕ್ತಿ ತೋರು ವುದೋ ಇಲ್ಲ ನಿರುಮ್ಮಳವಾಗಿರುವುದೋ ಹೊಸದಲ್ಲ. ಇದರರ್ಥ, ಜಗತ್ತಿನ ಜನಸಂಖ್ಯೆಯ ಸರಿಸುಮಾರು ಅರ್ಧ ದಷ್ಟಿರುವ ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ವಿಷಯ ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದರ ಅರಿವು ಅವರಿಗೆ ಇಲ್ಲವೆಂದಲ್ಲ. ಆದರೂ ಒಂದು ಬಗೆಯ ನಿರ್ಲಕ್ಷ್ಯ.

ಲಂಡನ್ನಿನ ಕಿಂಗ್ಸ್ ಕಾಲೇಜಿನ ಕಾನೂನು ಮತ್ತು ನ್ಯಾಯ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಪ್ರತಿಭಾ ಕೋಟೀಶ್ವರನ್, ಭಾರತದ ಬಾಡಿಗೆ ತಾಯ್ತನದ ಕಾನೂನನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ್ದಾರೆ. ಅವರ ಪ್ರಕಾರ, ಈ ಕಾನೂನು ಅನೇಕ ತಾರತಮ್ಯ
ಗಳಿಂದ ಕೂಡಿದೆ, ಮಗುವನ್ನು ಪಡೆಯುವ ಹಂಬಲವುಳ್ಳ ಅನೇಕ ವರ್ಗದ ಜನರನ್ನು ಇದು ನಿರ್ಬಂಧಿಸಿದೆ, ಬಾಡಿಗೆ ತಾಯಂದಿರ ಸೇವೆಯ ಬೆಲೆಯನ್ನು ಕಡೆಗಣಿಸಿದೆ ಮತ್ತು ಈ ಕಾನೂನಿನ ಉಲ್ಲಂಘನೆಯನ್ನು ಅಪರಾಧವನ್ನಾಗಿಸಿದೆ. ಇದರಿಂದ, ನ್ಯಾಯಬದ್ಧವಾಗಿ ನಡೆಯುತ್ತಿದ್ದ ಬಾಡಿಗೆ ತಾಯ್ತನದ ವ್ಯವಹಾರವು ಕದ್ದುಮುಚ್ಚಿ ನಡೆಯುತ್ತದಾದ್ದರಿಂದ, ಕಾನೂನುಬಾಹಿರ ವ್ಯವಹಾರಗಳಿಗೆ ಉತ್ತೇಜನ ದೊರೆಯುತ್ತದೆ.

ಈ ಕಾನೂನಿನ ಉಪಬಂಧಗಳು, ಭಾರತದ ಸಂವಿಧಾನದ 14ನೇ ವಿಧಿ ಅಡಿಯಲ್ಲಿ ಪ್ರದತ್ತವಾದ ಸಮಾನತೆಯ ಹಕ್ಕನ್ನು ಮತ್ತು 21ನೇ ವಿಧಿ ಅಡಿಯಲ್ಲಿ ಪ್ರದತ್ತವಾದ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತವೆ. ಭಿನ್ನ ಲಿಂಗ ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಅರ್ಹರು ಎನ್ನುವುದಾದರೆ, ಅವಿವಾಹಿತ ಪುರುಷರು, ಸಹಜೀವನ ನಡೆಸುವ ದಂಪತಿ ಗಳು, ಸಲಿಂಗಿ ದಂಪತಿಗಳು ಏಕೆ ಅನರ್ಹರು ಎಂಬುದು ಇವರ ಪ್ರಶ್ನೆ.

ಡಾ. ಗೀತಾ ಕೃಷ್ಣಮೂರ್ತಿ
ಡಾ. ಗೀತಾ ಕೃಷ್ಣಮೂರ್ತಿ

ವಿವಾಹವಾಗದೇ ಉಳಿಯುವವರ ಸಂಖ್ಯೆ ಮತ್ತು ವಿವಾಹದ ನಂತರವೂ ಗರ್ಭಧಾರಣೆಯ ಕಷ್ಟದ ಅವಧಿ ಯನ್ನು ಅನುಭವಿಸಲು ತಯಾರಿಲ್ಲದ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವ ಈ ಕಾಲದಲ್ಲಿ ಈ ಪ್ರಶ್ನೆಗಳು ಹೆಚ್ಚು ಪ್ರಸ್ತುತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT