ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಭವ್‌ ಕುಮಾರ್ ಜಾಮೀನು ಅರ್ಜಿ ವಜಾ

ಎಎಪಿ ರಾಜ್ಯಸಭಾ ಸದಸ್ಯೆ ಮಾಲಿವಾಲ್‌ ಮೇಲೆ ಹಲ್ಲೆ ಪ್ರಕರಣ
Published 7 ಜೂನ್ 2024, 16:11 IST
Last Updated 7 ಜೂನ್ 2024, 16:11 IST
ಅಕ್ಷರ ಗಾತ್ರ

ನವದೆಹಲಿ: ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್‌ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಪ್ರಕರಣದಲ್ಲಿ, ಜಾಮೀನು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ಸೆಷನ್ಸ್‌ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.

ಆರೋಪಿಯು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನ್ಯಾಯಾಲಯ, ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಜಾಮೀನು ಕೋರಿ ಬಿಭವ್‌ ಕುಮಾರ್‌ ಎರಡನೇ ಬಾರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಏಕ್ತಾ ಗೌಬಾ ಮಾನ್‌, ‘ಪ್ರಕರಣ ಕುರಿತ ತನಿಖೆ ಆರಂಭಿಕ ಹಂತದಲ್ಲಿದೆ. ಸಂತ್ರಸ್ತೆಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದು, ತನ್ನ ಹಾಗೂ ತನ್ನ ಕುಟುಂಬದ ಸದಸ್ಯರ ಸುರಕ್ಷತೆ ಬಗ್ಗೆ ಆಕೆಗೆ ಭಯವಿದೆ. ಅಲ್ಲದೇ, ಆರೋಪಿ ಅಥವಾ ಮೇಲ್ಮನವಿದಾರನೂ ಆಗಿರುವ ಬಿಭವ್‌ ಕುಮಾರ್‌ ಅವರನ್ನು ಜಾಮೀನಿನ ಬಿಡುಗಡೆ ಮಾಡಿದಲ್ಲಿ, ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಆತಂಕವೂ ಇದೆ’ ಎಂದು ಹೇಳಿದರು.

ಮೇ 13ರಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನಿವಾಸದಲ್ಲಿ ಮಾಲಿವಾಲ್‌ ಅವರ ಮೇಲೆ ಬಿಭವ್‌ ಕುಮಾರ್‌ ಹಲ್ಲೆ ನಡೆಸಿದ್ದರು ಎಂದು ಹೇಳಲಾಗಿದೆ. ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯವು ಮೇ 31ರಂದು ಆದೇಶಿಸಿತ್ತು.

ಇನ್ನೊಂದೆಡೆ, ಈ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಬಿಭವ್‌ ಕುಮಾರ್‌, ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಸಮರ್ಥನೀಯತೆ ಕುರಿತ ತನ್ನ ಆದೇಶವನ್ನು ಹೈಕೋರ್ಟ್‌ ಕಾಯ್ದಿರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT