ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುರೈ ವೈದ್ಯ ಕಾಲೇಜು ವಿದ್ಯಾರ್ಥಿಗಳಿಗೆ ‘ಚರಕ‘ ಶಪಥ ವಿವಾದ: ಡೀನ್ ವರ್ಗಾವಣೆ

Last Updated 1 ಮೇ 2022, 11:30 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಮದುರೈ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯ ‘ಹಿಪೊಕ್ರಾಟಿಕ್’ ಹೆಸರಿನ ಪ್ರಮಾಣವಚನದ (ವೈದ್ಯ ವಿದ್ಯಾರ್ಥಿಗಳಿಗೆ ಬೋಧಿಸಲಾಗುವ ಪ್ರಮಾಣವಚನ) ಬದಲಿಗೆ ಸಂಸ್ಕೃತದ ಮಹರ್ಷಿ ಚರಕ ಶಪಥ ಬೋಧಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ನಿಯಮಗಳ ಉಲ್ಲಂಘನೆ ಮತ್ತು ಏಕಪಕ್ಷೀಯವಾಗಿ ಸಂಸ್ಕೃತದಲ್ಲಿ ಶಪಥ ಬೋಧಿಸಿದ ನಿರ್ಣಯದ ವಿರುದ್ಧ ರಾಜ್ಯ ಸರ್ಕಾರ ಇಲಾಖಾವಾರು ತನಿಖೆಗೆ ಆದೇಶಿಸಿದೆ.

ಅಲ್ಲದೆ, ಮದುರೈ ವೈದ್ಯಕೀಯ ಕಾಲೇಜಿನ ಡೀನ್ ಡಾ. ಎ. ರಥಿನಾವೆಲ್ ಅವರನ್ನು ಭಾನುವಾರ ವರ್ಗಾವಣೆ ಮಾಡಲಾಗಿದೆ.

ಈ ಸಂಬಂಧ ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಡೀನ್‌ಗಳಿಗೆ ಪತ್ರ ಬರೆದಿರುವ ರಾಜ್ಯ ಸರ್ಕಾರ,‘ಹಿಪೊಕ್ರಾಟಿಕ್’ ಪ್ರಮಾಣವಚನವನ್ನು ಮಾತ್ರವೇ ಬೋಧಿಸಬೇಕು ಎಂದು ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ:

ಮದುರೈ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಆಯೋಜನೆಗೊಂಡಿದ್ದ ಮೊದಲ ವರ್ಷದ ವೈದ್ಯ ವಿದ್ಯಾರ್ಥಿಗಳ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಜ್ಯದ ವಿತ್ತ ಸಚಿವ ಪಿ.ಟಿ.ಆರ್.ಪಳನಿವೇಲ್ ತ್ಯಾಗರಾಜನ್ ಮತ್ತು ವಾಣಿಜ್ಯ ತೆರಿಗೆಗಳ ಸಚಿವ ಪಿ. ಮೂರ್ತಿ ಅವರು ಭಾಗವಹಿಸಿದ್ದರು. ವೈದ್ಯ ವಿದ್ಯಾರ್ಥಿಗಳಿಗೆ 'ಹಿಪೊಕ್ರಾಟಿಕ್' ಪ್ರಮಾಣದ ಬದಲಿಗೆ ಸಂಸ್ಕೃತದ 'ಮಹರ್ಷಿ ಚರಕ ಶಪಥ' ಬೋಧಿಸಲಾಗಿತ್ತು. ಈ ವೇಳೆ ಇಬ್ಬರು ಸಚಿವರು ಮಹರ್ಷಿ ಚರಕ ಶಪಥಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಮಾ. ಸುಬ್ರಮಣಿಯನ್, 'ನೀಲಗಿರೀಸ್, ತಿರುವಳ್ಳೂರು ಸೇರಿದಂತೆ ಹಲವು ಕಾಲೇಜುಗಳಲ್ಲಿ ಮೊದಲ ವರ್ಷದ ವೈದ್ಯ ವಿದ್ಯಾರ್ಥಿಗಳು ‘ಹಿಪ್ಪೊಕ್ರಾಟಿಕ್’ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಇದು ತಮಿಳುನಾಡಿನಲ್ಲಿ ನಡೆದುಬಂದ ಪರಿಪಾಠ. ಈ ಸಂಪ್ರದಾಯವನ್ನು ಬದಲಾವಣೆ ಮಾಡುವ ಅವಕಾಶ ನೀಡಿದವರು ಯಾರು? ಹೇಗೆ ಉಚ್ಚಾರಣೆ ಮಾಡಬೇಕೆಂಬುದು ಸಹ ಗೊತ್ತಿಲ್ಲದ ಭಾಷೆಯನ್ನು ವಿದ್ಯಾರ್ಥಿಗಳು ಬಳಸಬೇಕೆಂದಾದರೆ ಹೇಗೆ?' ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಹಿಂದಿ ಅಥವಾ ಸಂಸ್ಕೃತ ರೀತಿಯ ಭಾಷಾ ಹೇರಿಕೆಯ ಯತ್ನವನ್ನು ರಾಜ್ಯ ಸರ್ಕಾರ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

ಏನಿದು ಮಹರ್ಷಿ ಚರಕ ಶಪಥ?:

ಮಹರ್ಷಿ ಚರಕ ಶಪಥವು ಭಾರತದ ಆಯುರ್ವೇದ ವ್ಯವಸ್ಥೆಯ ಸಂಸ್ಕೃತದ ಪುಸ್ತಕದ ಭಾಗವಾಗಿದೆ.ಇತ್ತೀಚೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು ವೈದ್ಯಕೀಯ ವಿದ್ಯಾರ್ಥಿಗಳಿಗೆ ‘ಹಿಪೊಕ್ರಾಟಿಕ್’ಪ್ರಮಾಣದ ಬದಲಿಗೆ ಮಹರ್ಷಿ ಚರಕ ಶಪಥ ಬೋಧಿಸಬೇಕು ಎಂದು ಶಿಫಾರಸು ಮಾಡಿತ್ತು. ಅಲ್ಲದೆ ಇದು ಕೇವಲ ವೈದ್ಯಕೀಯ ಕಾಲೇಜುಗಳ ಆಯ್ಕೆಗೆ ಬಿಟ್ಟಿದ್ದು, ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯಾ ಅವರು ಸಂಸತ್ತಿನಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT