ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್ ಕುಟುಂಬ ಸದಸ್ಯರ ಉದ್ದಿಮೆಗಳ ಮೇಲೆ ಐ.ಟಿ ದಾಳಿ

Last Updated 7 ಅಕ್ಟೋಬರ್ 2021, 12:01 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ):ತೆರಿಗೆ ವಂಚನೆ ಆರೋಪದ ಮೇಲೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಕೆಲವು ರಿಯಲ್ ಎಸ್ಟೇಟ್ ಡೆವಲಪರ್‌ಗಳ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಕೆಲವು ವ್ಯವಹಾರ ಉದ್ದಿಮೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ದಾಳಿ ನಡೆಸಿದೆ.

ಮುಂಬೈ, ಪುಣೆ, ಸತಾರಾ ಸೇರಿದಂತೆ ಮಹಾರಾಷ್ಟ್ರ ಮತ್ತು ಗೋವಾದ ಕೆಲವು ನಗರಗಳಲ್ಲಿ ಐ.ಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಡಿಬಿ ರಿಯಾಲ್ಟಿ, ಶಿವಾಲಿಕ್, ಜರಂಡೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ (ಜರಂಡೇಶ್ವರ ಎಸ್‌ಎಸ್‌ಕೆ) ಮತ್ತು ಪವಾರ್ ಸಹೋದರಿಯರ ವ್ಯವಹಾರ– ವ್ಯಾಪಾರ ಉದ್ದಿಮೆಗಳ ಗ್ರೂಪ್‌ಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಐ.ಟಿ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದೇ ಜುಲೈನಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದಲ್ಲಿ ಸತಾರಾದ ಚಿಮಾಂಗಾವ್-ಕೋರೆಗಾಂವ್‌ನಲ್ಲಿರುವ ಜರಂಡೇಶ್ವರ ಎಸ್‌ಎಸ್‌ಕೆಗೆ ಸಂಬಂಧಿಸಿದ ಸುಮಾರು ₹65 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು. ಈ ಸಕ್ಕರೆ ಕಾರ್ಖಾನೆಯು ಪವಾರ್ ಮತ್ತು ಅವರ ಕುಟುಂಬದ ಸದಸ್ಯರೊಂದಿಗೆ ಸಂಪರ್ಕ ಹೊಂದಿದೆ ಎಂದು ಇ.ಡಿ ಆಪಾದಿಸಿತ್ತು.

‘ನನ್ನ ಸಹೋದರಿಯರನ್ನು ಗುರಿಯಾಗಿಸಿರುವುದು ಸರಿಯಲ್ಲ’

‘ತನ್ನೊಂದಿಗೆ ಸಂಬಂಧ ಹೊಂದಿರುವ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿರುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ನನ್ನ ಮೂವರು ಸಹೋದರಿಯರನ್ನು ಇದರಲ್ಲಿ ಗುರಿಯಾಗಿಸಿಕೊಂಡಿರುವುದು ಸರಿಯಲ್ಲ’ ಎಂದುಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಉದ್ದಿಮೆಗಳ ಮೇಲೆ ತೆರಿಗೆ ವಂಚನೆ ಆರೋಪದ ಮೇಲೆ ಐ.ಟಿ ದಾಳಿ ನಡೆದಿರುವುದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ನಾನು ಹಣಕಾಸು ಮಂತ್ರಿಯಾಗಿರುವುದರಿಂದ, ನನಗೆ ಹಣಕಾಸು ಶಿಸ್ತಿನ ಬಗ್ಗೆ ತಿಳಿದಿದೆ. ನಾವು ಪ್ರತಿ ವರ್ಷ ತೆರಿಗೆ ಪಾವತಿಸುತ್ತೇವೆ. ನನ್ನೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಸಂಸ್ಥೆಗಳು ತೆರಿಗೆ ಪಾವತಿಸಿವೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ನನ್ನ ಸಹೋದರಿಯರ ವ್ಯವಹಾರ ಉದ್ದಿಮೆಗಳ ಮೇಲೆ ದಾಳಿ ನಡೆಸಲಾಗಿದೆ. ಅಜಿತ್ ಪವಾರ್ ಅವರ ಸಂಬಂಧಿಗಳಾಗಿ ದಾಳಿ ಮಾಡಿದ್ದರೆ, ಜನರು ಈ ಬಗ್ಗೆ ಯೋಚಿಸಬೇಕು. ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ’ ಎಂದು ಅಜಿತ್‌ ಪವಾರ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT