ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗಸೂಚಿ ಉಲ್ಲಂಘಿಸಿ ಧರಣಿ: ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಧನ

Last Updated 3 ಜನವರಿ 2022, 18:40 IST
ಅಕ್ಷರ ಗಾತ್ರ

ಹೈದರಾಬಾದ್‌: ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರನ್ನು ಬೆಂಬಲಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಸಂಸದ, ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್‌ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತ ಸಂಸದರನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, ಕೋರ್ಟ್‌ 14 ದಿನದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಕೋವಿಡ್‌ ಮಾರ್ಗಸೂಚಿಗಳ ಉಲ್ಲಂಘನೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಸೇರಿ ವಿವಿಧ ಆರೋಪದಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಉದ್ಯೋಗ ಹಂಚಿಕೆಯಲ್ಲಿ ವಲಯವಾರು ವ್ಯವಸ್ಥೆ ಜಾರಿಗೊಳಿಸುವ ಸರ್ಕಾರದ ಆದೇಶವನ್ನು ವಿರೋಧಿಸಿ, ಕರೀಂನಗರದಲ್ಲಿನ ತಮ್ಮ ಕಚೇರಿಯ ಬಳಿ ಪ್ರತಿಭಟನೆಗೆ ಸಂಸದರು ಮುಂದಾಗಿದ್ದರು.

ಸರ್ಕಾರದ ಈ ಆದೇಶದಿಂದ ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರಿಗೆ ವರ್ಗಾವಣೆಯ ವೇಳೆ ಸಾಕಷ್ಟು ಸಮಸ್ಯೆಯಾಗಲಿದೆ. ಇದನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದ್ದರು.

ಭಾನುವಾರ ರಾತ್ರಿ ಪೊಲೀಸರು ಬಲವಂತದಿಂದ, ಕಚೇರಿಯ ಬಾಗಿಲು ತೆರೆಸಿ ಒಳನುಗಿದ್ದರು. ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ತೀವ್ರವಾಗಿ ವಿರೋಧಿಸಿದ್ದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

‘ಧರಣಿ ನಡೆಸಲು ಪೂರ್ವಾನುಮತಿಯನ್ನು ಪಡೆದಿರಲಿಲ್ಲ. ಧರಣಿ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದು, ಇದು ಕೋವಿಡ್‌ ಮಾರ್ಗಸೂಚಿಯ ಉಲ್ಲಂಘನೆಯಾಗಿತ್ತು’ ಎಂದು ಪೊಲೀಸರು ತಿಳಿಸಿದರು.

ಆದರೆ, ’ಶಾಂತಿಯುತವಾಗಿ, ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಪಾಲಿಸುತ್ತಲೇ ಧರಣಿಗೆ ಮುಂದಾಗಿದ್ದೆವು. ತೆಲಂಗಾಣ ಸರ್ಕಾರದ ಸೂಚನೆಯಂತೆ ಪೊಲೀಸರು ಕ್ರಮಜರುಗಿಸಿದ್ದಾರೆ’ ಎಂದು ಸಂಸದರು ಆರೋಪಿಸಿದರು.

ಟಿಆರ್‌ಎಸ್‌ ನಾಯಕರು ಪಾಲ್ಗೊಳ್ಳುವ ಕಾರ್ಯಕ್ರಮಗಳಿಗೆ ಏಕೆ ಕೋವಿಡ್ ಮಾರ್ಗಸೂಚಿಗಳು ಅನ್ವಯವಾಗುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.

ಪ್ರಜಾಪ್ರಭುತ್ವದ ಕೊಲೆ –ನಡ್ಡಾ ವಾಗ್ದಾಳಿ

ನವದೆಹಲಿ: ‘ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷರನ್ನು ಬಂಧಿಸಿರುವ ತೆಲಂಗಾಣ ಸರ್ಕಾರದ ಕ್ರಮವು ಅಸಾಂವಿಧಾನಿಕ, ಅಮಾನವೀಯ ಮತ್ತು ಪ್ರಜಾಪ್ರಭುತ್ವದ ಕೊಲೆ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಾಗ್ದಾಳಿ ನಡೆಸಿದ್ದಾರೆ.

ತೆಲಂಗಾಣದಲ್ಲಿ ಈಚೆಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. ಇದರಿಂದ ರಾಜ್ಯದ ಮುಖ್ಯಮಂತ್ರಿ ಭ್ರಮನಿರಸನಗೊಂಡಿದ್ದಾರೆ. ಬಿಜೆಪಿ ಜನಪ್ರಿಯತೆ ಸಹಿಸಲಾಗದೇ ಕ್ರಮಕ್ಕೆ ಸೂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

‘ಬಿಜೆಪಿಯ ಶಾಂತಿಯುತ ಪ್ರತಿಭಟನೆ ರಾಜ್ಯ ಸರ್ಕಾರವನ್ನು ಕಂಗೆಡಿಸುತ್ತಿದೆ. ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಮೇಲೆ ನಡೆದಿರುವ ಈ ದೌರ್ಜನ್ಯವನ್ನು ಬಿಜೆಪಿ ಕಟುವಾಗಿ ಖಂಡಿಸಲಿದೆ‘ ಎಂದು ಹೇಳಿದ್ದಾರೆ.

‘ಪ್ರತಿಭಟನಾನಿರತ ಬಂಡಿ ಸಂಜಯಕುಮಾರ್ ಮತ್ತು ಕಾರ್ಯಕರ್ತರ ಜೊತೆತೆಲಂಗಾಣ ಸರ್ಕಾರ ಅನುಚಿತವಾಗಿ ನಡೆದುಕೊಂಡಿದೆ. ವಶಕ್ಕೆ ಪಡೆಯುವ ಮೊದಲುಪೊಲೀಸರು ಹಲ್ಲೆ ನಡೆಸಿದ್ದಾರೆ’ ಎಂದು ನಡ್ಡಾ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT