ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದಲ್ಲಿ ಮರ್ಯಾದೆಗೇಡು ಹತ್ಯೆ: ಏಳು ಮಂದಿ ಆರೋಪಿಗಳ ಬಂಧನ

Last Updated 18 ಸೆಪ್ಟೆಂಬರ್ 2018, 14:10 IST
ಅಕ್ಷರ ಗಾತ್ರ

ನಲ್ಗೊಂಡಾ: ತೆಲಂಗಾಣದ ಮಿರಯಲಗುಡದಲ್ಲಿ ಕಳೆದ ಶುಕ್ರವಾರ ನಡೆದಿದ್ದ 24 ವರ್ಷದ ಯುವಕ ಪ್ರಣಯ್‌ ಕುಮಾರ್‌ ಮರ್ಯಾದೆಗೇಡು ಹತ್ಯೆ ಪ್ರಕರಣ ಸಂಬಂಧ ಏಳು ಮಂದಿ ಆರೋಪಿಗಳನ್ನು ಬಿಹಾರದಲ್ಲಿತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಗುಂಪು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ (ಐಎನ್‌ಐ) ಜೊತೆ ಸಂಪರ್ಕ ಹೊಂದಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಪರಿಶಿಷ್ಟ ಜಾತಿಗೆ ಸೇರಿದ ಪ್ರಣಯ್‌ ತನ್ನ ಪತ್ನಿ 5 ತಿಂಗಳ ಗರ್ಭಿಣಿ ಅಮೃತಾಳನ್ನು ಸ್ಥಳೀಯ ಆಸ್ಪತ್ರೆಯಿಂದ ತಪಾಸಣೆ ನಡೆಸಿ ಕರೆತರುವ ವೇಳೆ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು.

ಪ್ರಕರಣ ಸಂಬಂಧ ಅಮೃತಾ ಅವರ ತಂದೆ ಮಾರುತಿ ರಾವ್‌, ಬಂಧಿತ ಆರೋಪಿಗಳಿಗೆ₹1 ಕೋಟಿಗೆ ಸುಫಾರಿ ನೀಡಿರುವುದು ಬೆಳಕಿಗೆ ಬಂದಿದೆ.

ಹತ್ಯೆಯ ದೃಶ್ಯಾವಳಿಗಳು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.ಅಮೃತಾ ಅವರ ತಂದೆ ಮಾರುತಿ ರಾವ್‌ ಮತ್ತು ಚಿಕ್ಕಪ್ಪ ಶ್ರಾವಣ ರಾವ್‌ ಪ್ರಕರಣದ ಪ್ರಮುಖ ಆರೋಪಿಗಳುಎಂದು ಪೊಲೀಸರು ತಿಳಿಸಿದ್ದಾರೆ.

‘ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ಮಾರುತಿ ರಾವ್‌, ಸ್ಥಳೀಯ ಮಟ್ಟದಲ್ಲಿ ಅತ್ಯಂತ ಶ್ರೀಮಂತ ಮತ್ತು ಪ್ರಭಾವಶಾಲಿಯಾಗಿದ್ದಾರೆ. ಮಗಳು ಅಮೃತಾ ಪರಿಶಿಷ್ಟ ಜಾತಿಗೆ ಸೇರಿದ ಪ್ರಣಯ್‌ ಜತೆ ಮದುವೆಯಾಗಿದ್ದು ಅವರಿಗೆ ಇಷ್ಟವಿರಲಿಲ್ಲ’ ಎಂದು ಪೊಲೀಸರುಹೇಳಿದ್ದಾರೆ.

‘ನನ್ನ ಕುಟುಂಬದ ಕಡೆಯಿಂದ ನಮಗೆ ಜೀವ ಬೆದರಿಕೆ ಇತ್ತು. ಆದ್ದರಿಂದ ಕೆಲ ಕಾಲ ನಾವು ಅಡಗಿಕೊಂಡಿದ್ದೇವೆ. ಆದರೆ, ಕೊಲೆ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ’ ಎಂದು ಅಮೃತಾ ಹೇಳಿದ್ದಾರೆ.

ಪೋಷಕರ ವಿರೋಧದ ನಡುವೆ ಪ್ರಣಯ್‌ ಮತ್ತು ಅಮೃತಾ ಜನವರಿಯಲ್ಲಿ ವಿವಾಹವಾಗಿದ್ದರು. ಬಳಿಕ ಮೇ ತಿಂಗಳಲ್ಲಿ ಪ್ರಣಯ್‌ ಮನೆಯವರು ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಕಾರ್ಯಕ್ರಮದ ಫೋಟೊಗಳನ್ನು ನೋಡಿದ್ದ ಮಾರುತಿ ರಾವ್‌ ಕೋಪಗೊಂಡಿದ್ದರು.

‘ಗರ್ಭಪಾತ ಮಾಡಿಸಿಕೊಳ್ಳುವಂತೆ ನಮ್ಮ ತಂದೆ ಒತ್ತಾಯಿಸಿದ್ದರು. ಗರ್ಭಪಾತ ಮಾಡಿಸಿಕೊಳ್ಳುವ ಉದ್ದೇಶ ನನಗೆ ಇಲ್ಲ. ಪ್ರಣಯ್‌ನ ಮಗುವೇ ನನ್ನ ಭವಿಷ್ಯ. ಅವರು ಉತ್ತಮ ವ್ಯಕ್ತಿಯಾಗಿದ್ದು, ನಾನು ಗರ್ಭಿಣಿಯಾದ ಬಳಿಕ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದರು’ ಎಂದು 22 ವರ್ಷದ ಅಮೃತಾ ಹೇಳಿದ್ದಾರೆ.

ಪ್ರಣಯ್‌ ಹತ್ಯೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಕಳವಳ ವ್ಯಕ್ತಪಡಿಸಿದ್ದು, ಅವರ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT