ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ಯತೀತ ಮತಗಳ ವಿಭಜನೆಯೊಂದಿಗೆ ಬಿಜೆಪಿಗೆ ನೆರವಾಗುತ್ತಿರುವ ಟಿಎಂಸಿ: ಕಾಂಗ್ರೆಸ್

Last Updated 21 ನವೆಂಬರ್ 2021, 14:20 IST
ಅಕ್ಷರ ಗಾತ್ರ

ಪಣಜಿ:ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಗೋವಾದಲ್ಲಿ ಜಾತ್ಯತೀತ ಮತಗಳನ್ನು ವಿಭಜಿಸುವುದರೊಂದಿಗೆತೃಣಮೂಲ ಕಾಂಗ್ರೆಸ್ ಪಕ್ಷವು (ಟಿಎಂಸಿ) ಆಡಳಿತಾರೂಢ ಬಿಜೆಪಿಗೆ ನೆರವು ನೀಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಗೋವಾ ಫಾರ್ವರ್ಡ್ ಪಕ್ಷದ (ಜಿಎಫ್‌ಪಿ) ನಾಯಕ ಕಿರಣ್ ಕಂಡೋಲ್ಕರ್ ಅವರು ಶನಿವಾರ ಸಂಜೆಟಿಎಂಸಿಗೆ ಸೇರ್ಪಡೆಗೊಂಡರು. ಇದರ ಬೆನ್ನಲ್ಲೇ ಥಿವಿಮ್ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಎಐಸಿಸಿ ಗೋವಾ ವಿಭಾಗದ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರು ಮಾತನಾಡಿದರು. 'ಬಿಜೆಪಿಯ ದುರಾಡಳಿತವನ್ನು ಕೊನೆಗೊಳಿಸಲು ಗೋವಾ ಜನರು ಆತಂಕದಿಂದ ಕಾಯುತ್ತಿರುವಾಗಲೇ, ಬಿಜೆಪಿ ವಿರೋಧಿ ಮತಗಳ ವಿಭಜನೆ ಯತ್ನ ನಡೆಯುತ್ತಿರುವುದು ಬೇಸರದ ಸಂಗತಿ' ಎಂದು ಹೇಳಿದ್ದಾರೆ.

'ಗೋವಾಗೆ ಕಾಲಿಟ್ಟಿರುವ ಹೊಸ ಪಕ್ಷಗಳು ಸದ್ಯ ಬಿಜೆಪಿ ವಿರುದ್ಧ ಜನರು ಹೊಂದಿರುವ ಮನಸ್ಥಿತಿ ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿರುವಂತೆ ಕಾಣುತ್ತಿಲ್ಲ.ಒಂದೇ ರೀತಿಯ ಸಿದ್ದಾಂತ ಹೊಂದಿರುವ ಪಕ್ಷಗಳು 2022ರ ಚುನಾವಣೆ ವೇಳೆಗೆ ಒಂದಾಗಬೇಕು ಎನ್ನುವಂತಹ ಜನರ ಭಾವನೆಗಳನ್ನು ಅಂದಾಜಿಸುವಲ್ಲಿಯೂ ವಿಫಲವಾಗಿವೆ' ಎಂದು ಆರೋಪಿಸಿದ್ದಾರೆ.

ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫೆಲೆರೊ ಅವರುಇತ್ತೀಚೆಗೆ ಕಾಂಗ್ರೆಸ್ ತೊರೆದು ಟಿಎಂಸಿಗೆ ಸೇರ್ಪೆಡಯಾಗಿದ್ದಾರೆ. ಟಿಎಂಸಿ, ಫೆಲೆರೊ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಇದನ್ನು ಉಲ್ಲೇಖಿಸಿ ಮಾತನಾಡಿರುವ ಗುಂಡೂರಾವ್, '2022ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಒಂದಾಗಿ ಮುನ್ನಡೆಯಲು ಪ್ರಯತ್ನಿಸುತ್ತಿರುವಾಗಲೇ, ಈ ಹೊಸ ಪಕ್ಷಗಳು ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುವ ಯೋಜನೆ ಹಾಕಿಕೊಂಡಿರುವಂತೆ ತೋರುತ್ತಿವೆ' ಎಂದು ದೂರಿದ್ದಾರೆ.

'ಈ ಪಕ್ಷಗಳು ಮೊದಲು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಆಮಿಷ ಒಡ್ಡಿ ಸೆಳೆದವು. ಇದೀಗ, ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳನ್ನು ಸೇರಿಸಿಕೊಳ್ಳುವಗುರಿ ಹಾಕಿಕೊಂಡಿವೆ. ಜನರು ಇದನ್ನು ಗಮನಿಸುತ್ತಿದ್ದಾರೆ. ಆಡಳಿತಾರೂಢ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಮತ ವಿಭಜನೆ ಮಾಡುವ ಹೊಸ ಪಕ್ಷಗಳ ಈ ರಣತಂತ್ರವನ್ನು ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧತೆ ಅವರಿಗೆ ಇದೆ‘ ಎಂದು ಎಚ್ಚರಿಸಿದ್ದಾರೆ.

40 ಸದಸ್ಯ ಬಲದ ಗೋವಾ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆ ವೇಳೆ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 13 ಸ್ಥಾನಗಳಲ್ಲಷ್ಟೇ ಜಯ ಕಂಡಿತ್ತು.

ಆದಾಗ್ಯೂ, ಪ್ರಾದೇಶಿಕ ಪಕ್ಷಗಳೊಂದಿಗೆ ಕೈ ಜೋಡಿಸಿದ ಬಿಜೆಪಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು. ತಲಾ ಮೂರು ಸ್ಥಾನಗಳಲ್ಲಿ ಜಯ ಸಾಧಿಸಿದ್ದ ಗೋವಾ ಫಾರ್ವರ್ಡ್ ಪಕ್ಷ (ಜಿಎಫ್‌ಪಿ) ಮತ್ತು ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷ (ಎಂಜಿಪಿ) ಬಿಜೆಪಿಗೆ ಬೆಂಬಲ ಸೂಚಿಸಿದ್ದವು. ಬಳಿಕ ಕಾಂಗ್ರೆಸ್ ಪಕ್ಷದ ಕೆಲ ಶಾಸಕರೂ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT