ಕೋಲ್ಕತ್ತ: ಪಶ್ಚಿಮ ಬಂಗಾಳ ಪಂಚಾಯಿತಿ ಚುನಾವಣೆಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಭಾರಿ ಗೆಲುವು ಸಾಧಿಸಿರುವುದಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಜನರಿಗೆ ಮಂಗಳವಾರ ಧನ್ಯವಾದ ಹೇಳಿದ್ದಾರೆ.
'ಬಂಗಾಳದ ಗ್ರಾಮೀಣ ಭಾಗದಲೆಲ್ಲಾ ಟಿಎಂಸಿ ಇದೆ. ಟಿಎಂಸಿಗೆ ಇಷ್ಟು ಪ್ರೀತಿ, ವಿಶ್ವಾಸ ಮತ್ತು ಬೆಂಬಲ ನೀಡಿದ ಜನರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ರಾಜ್ಯದ ಜನರ ಹೃದಯದಲ್ಲಿರುವುದು ಟಿಎಂಸಿ ಮಾತ್ರ ಎಂಬುದನ್ನು ಈ ಚುನಾವಣೆ ಸಾಬೀತು ಮಾಡಿದೆ' ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಮತಪತ್ರಗಳ ಎಣಿಕೆ ಸದ್ಯಕ್ಕೆ ಪೂರ್ಣಗೊಂಡಿಲ್ಲ. 'ಇನ್ನೂ 2 ದಿನ ಎಣಿಕೆ ನಡೆಯಬಹುದು' ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಗಳ 63,229 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಮಂಗಳವಾರ ರಾತ್ರಿ 10.30ರ ವರೆಗಿನ ಫಲಿತಾಂಶದ ಪ್ರಕಾರ, ತೃಣಮೂಲ ಕಾಂಗ್ರೆಸ್ ಒಟ್ಟು 29,665 ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಪಡೆದಿದ್ದು, 1,527 ಕಡೆ ಮುನ್ನಡೆ ಪಡೆದಿದೆ. ಬಿಜೆಪಿ 8,021 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. 406 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಕಾಂಗ್ರೆಸ್ 2,094 ಹಾಗೂ ಎಡ (ಸಿಪಿಎಂ, ಸಿಪಿಐ, ಎಐಎಫ್‌ಬಿ, ಆರ್‌ಎಸ್‌ಪಿ) ಪಕ್ಷಗಳು 2,595 ಸ್ಥಾನಗಳನ್ನು ಪಡೆದಿವೆ. ಕಾಂಗ್ರೆಸ್ 693 ಕಡೆ ಮತ್ತು ಎಡರಂಗ 969 ಕಡೆ ಮುನ್ನಡೆಯನ್ನು ಕಾಯ್ದುಕೊಂಡಿವೆ.
ಅಲ್ಲದೆ, ಆಡಳಿತಪಕ್ಷ (ಟಿಎಂಸಿ) ಪಂಚಾಯಿತಿ ಸಮಿತಿಗಳ 2,155 ಸ್ಥಾನಗಳನ್ನು ಈವರೆಗೆ ಗೆದ್ದಿದ್ದು, 782 ಕಡೆ ಮುನ್ನಡೆಯಲ್ಲಿದೆ. ಬಿಜೆಪಿ 214 ಸ್ಥಾನ ಪಡೆದಿದ್ದು, 79 ಕಡೆ ಮುನ್ನಡೆಯಲ್ಲಿದೆ. ಸಿಪಿಎಂ 47 ಮತ್ತು ಕಾಂಗ್ರೆಸ್ 38 ಸ್ಥಾನಗಳನ್ನು ಗೆದ್ದಿವೆ. ಪಂಚಾಯಿತಿ ಸಮಿತಿಗಳ 9,728 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಟಿಎಂಸಿ ಪ್ರಾಬಲ್ಯ ಮೆರೆದಿದ್ದು, ಫಲಿತಾಂಶ ಪ್ರಕಟವಾದ ಎಲ್ಲ 18 ಸ್ಥಾನಗಳನ್ನು ಗೆದ್ದುಕೊಂಡಿದೆ. 64 ಕಡೆ ಮುನ್ನಡೆಯಲ್ಲಿದೆ. ಜಿಲ್ಲಾ ಪರಿಷತ್‌ನ 928 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಜುಲೈ 8ರಂದು ಮತದಾನ ನಡೆದಿತ್ತು. ವಿವಿಧ ಜಿಲ್ಲೆಗಳಲ್ಲಿ ಹಿಂಸಾಚಾರ ಕೃತ್ಯಗಳು ನಡೆದು ಸುಮಾರು 15 ಜನರು ಮೃತಪಟ್ಟಿದ್ದರು. ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದು, ಮುಂಜಾಗ್ರತೆಯಾಗಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.