ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕರಣ ಹಂಚಿಕೆ: ವಕೀಲರಿಗೆ ಸಿಜೆಐ ಕಿವಿಮಾತು

Published 1 ಜನವರಿ 2024, 16:02 IST
Last Updated 1 ಜನವರಿ 2024, 16:02 IST
ಅಕ್ಷರ ಗಾತ್ರ

ನವದೆಹಲಿ: ಪ್ರಕರಣಗಳನ್ನು ನಿರ್ದಿಷ್ಟ ನ್ಯಾಯಪೀಠಗಳಿಗೆ ಹಂಚಿಕೆ ಮಾಡುವ ಪ್ರಕ್ರಿಯೆಯು ವಕೀಲರಿಂದ ಪ್ರಭಾವಿತ ಆಗದೆ ಇರುವಂತೆ ನೋಡಿಕೊಂಡರೆ, ಸುಪ್ರೀಂ ಕೋರ್ಟ್‌ಗೆ ತನ್ನ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ರಾಜಕೀಯವಾಗಿ ಸೂಕ್ಷ್ಮವಾಗಿರುವ ಕೆಲವು ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ನ ಕೆಲವು ನ್ಯಾಯಮೂರ್ತಿಗಳಿಗೆ ಮಾತ್ರ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

‘ಸುಪ್ರೀಂ ಕೋರ್ಟ್‌ನ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಬೇಕು ಎಂದಾದರೆ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳ ಹಂಚಿಕೆಯು ವಕೀಲರಿಂದ ಪ್ರಭಾವಿತವಾಗಿರಬಾರದು. ಈ ವಿಚಾರದಲ್ಲಿ ನಾನು ಬಹಳ ಸ್ಪಷ್ಟವಾದ ನಿಲುವು ಹೊಂದಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಹಂಚಿಕೆಯು ಸುಪ್ರೀಂ ಕೋರ್ಟ್‌ನಲ್ಲಿ ನಾವು ರೂಪಿಸಿರುವ ವ್ಯವಸ್ಥೆಗೆ ಅನುಗುಣವಾಗಿ ಆಗಬೇಕು. ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿಗಳಲ್ಲಿ ನಿಮಗೆ ನಂಬಿಕೆ ಇರಬೇಕು’ ಎಂದಿದ್ದಾರೆ. ಪ್ರಮುಖ ಪ್ರಕರಣಗಳನ್ನು ನ್ಯಾಯಮೂರ್ತಿಗಳಿಗೆ ಮರುಹಂಚಿಕೆ ಮಾಡಿರುವ ವಿಧಾನದ ಬಗ್ಗೆ ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ದುಶ್ಯಂತ್ ದವೆ ಅವರು ಈಚೆಗೆ ಪ್ರಶ್ನೆಗಳನ್ನು ಎತ್ತಿದ್ದರು.

‘ನನ್ನ ಪ್ರಕರಣವು ಇಂಥದ್ದೇ ನ್ಯಾಯಮೂರ್ತಿಯ ಎದುರು ವಿಚಾರಣೆಗೆ ಬರಬೇಕು ಎಂದು ಯಾವ ವಕೀಲನೂ ಆಗ್ರಹಿಸುವಂತೆ ಇಲ್ಲ’ ಎಂದು ಸಿಜೆಐ ಹೇಳಿದ್ದಾರೆ. 

‘ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು’: ಯಾವುದೇ ಪ್ರಕರಣದಲ್ಲಿ ಬರುವ ತೀರ್ಪನ್ನು ನ್ಯಾಯಮೂರ್ತಿಗಳು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿರುವ ಸಿಜೆಐ, ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂಬ ಕೋರಿಕೆ ಇದ್ದ ಅರ್ಜಿಗಳ ವಿಚಾರವಾಗಿ ನೀಡಿದ ತೀರ್ಪಿಗೆ ಸಂಬಂಧಿಸಿದಂತೆ ತಮಗೆ ವಿಷಾದ ಇಲ್ಲ ಎಂದು ಹೇಳಿದ್ದಾರೆ.

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ದೊರಕಿಸಲು, ಸಲಿಂಗ ಜೋಡಿಗಳು ಬಹಳ ಸುದೀರ್ಘವಾದ ಹೋರಾಟ ನಡೆಸಿದ್ದರು ಎಂಬುದನ್ನು ಒಪ್ಪಿಕೊಂಡಿರುವ ಸಿಜೆಐ, ಆ ಪ್ರಕರಣದಲ್ಲಿ ತೀರ್ಪು ನೀಡಿದ ನಂತರದಲ್ಲಿ ತಾವು ವಿಚಾರವನ್ನು ಅಲ್ಲಿಯೇ ಬಿಟ್ಟಿರುವುದಾಗಿ ಹೇಳಿದ್ದಾರೆ.

ಸಲಿಂಗ ಜೋಡಿಗೆ ಕಾನೂನಿನ ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಅಕ್ಟೋಬರ್ 17ರಂದು ನಿರಾಕರಿಸಿತ್ತು. ಸಿಜೆಐ ಅವರು ಆ ನ್ಯಾಯಪೀಠದಲ್ಲಿ ಇದ್ದರು.

‘ಪ್ರಕರಣವೊಂದರಲ್ಲಿ ತೀರ್ಪು ನೀಡಿದ ನಂತರದಲ್ಲಿ ನ್ಯಾಯಮೂರ್ತಿಗಳು, ಅದರಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಪ್ರಕರಣದ ಕೊನೆಯಲ್ಲಿ ಯಾವ ತೀರ್ಮಾನ ಬರುತ್ತದೆ ಎಂಬುದನ್ನು ನ್ಯಾಯಮೂರ್ತಿಗಳು ಎಂದಿಗೂ ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ’ ಎಂದು ಅವರು ಸಿಜೆಐ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT