ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುನೊ ಉದ್ಯಾನದಿಂದ ಚೀತಾ ಬೇರೆಡೆ ಸ್ಥಳಾಂತರಿಸಿ: ಕೇಂದ್ರಕ್ಕೆ ಮಧ್ಯಪ್ರದೇಶ ಪತ್ರ

Published 24 ಏಪ್ರಿಲ್ 2023, 18:00 IST
Last Updated 24 ಏಪ್ರಿಲ್ 2023, 18:00 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯಪ್ರದೇಶದ ಕುನೊ ಉದ್ಯಾನದಲ್ಲಿರುವ ಚೀತಾಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಕೋರಿ ಮಧ್ಯ ಪ್ರದೇಶದ ಅರಣ್ಯ ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಕುನೊ ಉದ್ಯಾನದಲ್ಲಿ ಕಳೆದ ಒಂದು ತಿಂಗಳ ಅಂತರದಲ್ಲೇ ಎರಡು ಚೀತಾ ಮೃತಪಟ್ಟಿವೆ. ಹೀಗಾಗಿ ಚೀತಾಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಇಲಾಖೆ ಕೇಳಿಕೊಂಡಿದೆ. ಕಳೆದ ವರ್ಷ ನಮೀಬಿಯಾ, ದಕ್ಷಿಣ ಆಫ್ರಿಕಾದಿಂದ ‘ಪ್ರಾಜೆಕ್ಟ್‌ ಚೀತಾ’ ಅಡಿಯಲ್ಲಿ ಒಟ್ಟು 20 ಚೀತಾಗಳನ್ನು ಕುನೊ ಉದ್ಯಾನಕ್ಕೆ ಕರೆತರಲಾಗಿತ್ತು. ಎರಡು ತಂಡಗಳಲ್ಲಿ ನಮೀಬಿಯಾ (8) ಹಾಗೂ ದಕ್ಷಿಣ ಆಫ್ರಿಕಾದಿಂದ (12) ಚೀತಾಗಳನ್ನು ಕರೆತರಲಾಗಿತ್ತು. ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ (ಸೆ.17) ದಿನದಂದು ಮೊದಲ ತಂಡದಲ್ಲಿ ಚೀತಾಗಳು ಭಾರತಕ್ಕೆ ಬಂದಿದ್ದವು.

‘ಕುನೊ ಉದ್ಯಾನದಲ್ಲಿ ಚೀತಾಗಳಿಗೆ ಅಗತ್ಯವಾಗಿರುವ ಸೌಲಭ್ಯಗಳು ಇಲ್ಲ. ಚೀತಾಗಳ ಮೇಲೆ ನಿಗಾ ವಹಿಸಲು ಇಲ್ಲಿ ಸಿಬ್ಬಂದಿ ಕೊರತೆ ಇದೆ. ಚೀತಾಗಳಿಗೆ ಓಡಾಡಲು ಬೇಕಾದಷ್ಟು ಜಾಗವೂ ಇಲ್ಲ’ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರಕ್ಕೆ ಚೀತಾ ಗಳನ್ನು ಸ್ಥಳಾಂತರಿಸುವ ಬಗ್ಗೆ ಪತ್ರ ಬರೆಯಲಾಗಿದೆ ಎಂದು ಮಧ್ಯ ಪ್ರದೇಶದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಜೆ.ಎಸ್. ಚೌಹಾಣ್‌ ತಿಳಿಸಿದರು. 

‘ಕುನೊ ಉದ್ಯಾನವನಕ್ಕೆ ಚೀತಾಗಳು ಹೊಂದಿಕೊಳ್ಳದಿದ್ದರೆ ಅವುಗಳನ್ನು ರಾಜಸ್ಥಾನದ ಮುಕುಂದರಾ ಹಿಲ್ಸ್‌ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಮಾಡಲಾಗಿತ್ತು’ ಎಂದು ಪತ್ರದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT