ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಖ್ಯಾಬಲವಿದೆ; ಸರ್ಕಾರ ನಮ್ಮದೇ’

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶರದ್‌ ಪವಾರ್‌– ಉದ್ಧವ್‌ ಠಾಕ್ರೆ ವಿಶ್ವಾಸ
Last Updated 23 ನವೆಂಬರ್ 2019, 22:12 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಶನಿವಾರ ಮುಂಜಾನೆಯ ‘ಕ್ಷಿಪ್ರಕ್ರಾಂತಿ’ಯ ನಂತರವೂ ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು, ‘ನಮ್ಮ ಬಳಿ ಸಂಖ್ಯಾಬಲವಿದೆ, ಮಹಾರಾಷ್ಟ್ರದಲ್ಲಿ ನಾವೇ ಸರ್ಕಾರ ರಚಿಸಲಿದ್ದೇವೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಿಗ್ಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಈ ನಾಯಕರು, ‘ನಾವು ಒಗ್ಗಟ್ಟಾ ಗಿದ್ದೇವೆ. ಇಂಥ ಸವಾಲುಗಳನ್ನು ಎದುರಿಸಲು ಸಮರ್ಥರಾಗಿದ್ದೇವೆ’ ಎಂದರು.

‘ಪಕ್ಷದ ಎಲ್ಲಾ ಶಾಸಕರ ಹೆಸರು, ಕ್ಷೇತ್ರದ ವಿವರ ಹಾಗೂ ಅವರ ಸಹಿಯನ್ನು ನಾವು ಸಂಗ್ರಹಿಸಿಟ್ಟಿದ್ದೆವು. ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಕಾರಣಕ್ಕೆ ಆ ದಾಖಲೆಗಳು ಅಜಿತ್‌ ಪವಾರ್‌ ಅವರ ವಶದಲ್ಲಿದ್ದವು. ಅವರು ಅದನ್ನೇ ರಾಜ್ಯಪಾಲರಿಗೆ ನೀಡಿರುವಂತೆ ಕಾಣಿಸುತ್ತದೆ. ಅದು ನಿಜವಾಗಿದ್ದರೆ, ರಾಜ್ಯಪಾಲರನ್ನು ಹಾದಿತಪ್ಪಿಸಲಾಗಿದೆ ಎಂದು ಭಾವಿಸಬೇಕಾಗುತ್ತದೆ ಎಂದು ಪವಾರ್‌ ಹೇಳಿದರು.

‘ಬಹುಮತ ಸಾಬೀತುಪಡಿಸಲು ಬಿಜೆಪಿಗೆ ಸಾಧ್ಯವಾಗಲಾರದು. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗಿದ್ದ ನಮ್ಮ ಪಕ್ಷದ ಶಾಸಕರಲ್ಲಿ ಹೆಚ್ಚಿನವರು ಮರಳಿ ಬಂದಿದ್ದಾರೆ. ಬಿಜೆಪಿಗೆ ಬೆಂಬಲ ನೀಡಲು ಮುಂದಾದ ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆ ಯಡಿ ತಮ್ಮ ಸ್ಥಾನವನ್ನು ಕಳೆದುಕೊಳ್ಳ ಬೇಕಾಗುತ್ತದೆ. ಅಂಥವರು ಮರು ಆಯ್ಕೆಯಾಗದಂತೆ ಕಾಂಗ್ರೆಸ್‌, ಶಿವಸೇನಾ ಹಾಗೂ ಎನ್‌ಸಿಪಿ ನೋಡಿಕೊಳ್ಳಲಿವೆ ಎಂದರು.

‘ಜನರ ತೀರ್ಪನ್ನು ಶಿವಸೇನಾ ಅವಮಾನಿಸಿದೆ’ ಎಂದು ಬಿಜೆಪಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದಉದ್ಧವ್‌ ಠಾಕ್ರೆ, ‘ನಾವು ಏನೇ ಮಾಡಿದ್ದರೂ ಬಹಿರಂಗವಾಗಿ ಮಾಡಿದ್ದೇವೆ. ನಮ್ಮ ನಡೆಗಳು ಮಧ್ಯರಾತ್ರಿಯ ಬೆಳವಣಿಗೆಗಳಲ್ಲ’ ಎಂದರು.

‘ಇದು ಮಹಾರಾಷ್ಟ್ರದ ಮೇಲೆ ಕೇಂದ್ರ ಸರ್ಕಾರ ನಡೆಸಿದ ‘ನಿರ್ದಿಷ್ಟ ದಾಳಿ’ (ಸರ್ಜಿಕಲ್‌ ಸ್ಟ್ರೈಕ್‌). ಜನರ ತೀರ್ಪಿಗೆ ಮಾಡಿರುವ ಅವಮಾನ. ಜನರೇ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಉದ್ಧವ್‌ ಹೇಳಿದರು.

ಮುಂಜಾನೆ ಫಡಣವೀಸ್‌ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೆಲವು ಎನ್‌ಸಿಪಿ ಶಾಸಕರು ಸಹ ಮಾಧ್ಯಮಗೋಷ್ಠಿಯಲ್ಲಿದ್ದರು. ‘ಅಜಿತ್‌ ಅವರು ಕರೆದಿದ್ದರಿಂದ ನಾವು ಹೋಗಿದ್ದೆವು. ಯಾವ ಉದ್ದೇಶಕ್ಕೆ ಕರೆದಿದ್ದಾರೆ ಎಂದು ತಿಳಿದಿರಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಪ್ರಮಾಣವಚನ ಸ್ವೀಕಾರ ನಡೆಯಿತು. ನಮಗೂ ಅದು ಅಚ್ಚರಿಯಾಗಿತ್ತು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT