ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಹಾರ: ನಿರ್ಮಾಣ ಹಂತದ ಇನ್ನೊಂದು ಸೇತುವೆ ಕುಸಿತ

Published 23 ಜೂನ್ 2024, 16:33 IST
Last Updated 23 ಜೂನ್ 2024, 16:33 IST
ಅಕ್ಷರ ಗಾತ್ರ

ಮೋತಿಹಾರಿ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಭಾನುವಾರ ಕುಸಿದುಬಿದ್ದಿದೆ. ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಬಿಹಾರದಲ್ಲಿ, ನಿರ್ಮಾಣ ಹಂತದ ಸೇತುವೆ ಮುರಿದುಬಿದ್ದ ಮೂರನೆಯ ಪ್ರಕರಣ ಇದು.

ಮೋತಿಹಾರಿಯ ಘೋಡಾಸಹಾನ್‌ನಲ್ಲಿ ನಡೆದಿರುವ ಈ ಘಟನೆಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 16 ಮೀಟರ್ ಉದ್ದದ ಈ ಸೇತುವೆಯನ್ನು ಕಾಲುವೆಯೊಂದರ ಮೇಲೆ ನಿರ್ಮಿಸಲಾಗುತ್ತಿತ್ತು. ರಾಜ್ಯ ಸರ್ಕಾರದ ಗ್ರಾಮೀಣ ಕಾಮಗಾರಿ ವಿಭಾಗವು ₹1.5 ಕೋಟಿ ವೆಚ್ಚದ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು. 

‘ಸೇತುವೆ ಕುಸಿದು ಬೀಳುವುದಕ್ಕೆ ಕಾರಣ ಏನು ಎಂಬುದು ಖಚಿತವಾಗಿಲ್ಲ. ಆದರೆ ಇದು ಗಂಭೀರ ವಿಚಾರ. ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ತಪ್ಪು ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಗ್ರಾಮೀಣ ಕಾಮಗಾರಿ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಸಿಂಗ್ ಹೇಳಿದ್ದಾರೆ.

‘ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ವಿಸ್ತೃತ ವರದಿ ಬರಬೇಕಿದೆ’ ಎಂದು ಅವರು ಹೇಳಿದ್ದಾರೆ.

‘ಸೇತುವೆಯ ಕೆಲವು ಕಂಬಗಳ ನಿರ್ಮಾಣಕ್ಕೆ ಸ್ಥಳೀಯರ ಪೈಕಿ ಕೆಲವರು ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿಗಳಿವೆ. ಈ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ’ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸೌರಭ್ ಜೊರ್ವಾಲ್ ತಿಳಿಸಿದ್ದಾರೆ.

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಸೇತುವೆಯೊಂದು ಶನಿವಾರ ಕುಸಿದಿತ್ತು. ಇದನ್ನು ಒಂದು ಕಾಲುವೆಗೆ ಅಡ್ಡವಾಗಿ ನಿರ್ಮಿಸಲಾಗುತ್ತಿತ್ತು. ಮಂಗಳವಾರ ಅರರಿಯಾ ಜಿಲ್ಲೆಯಲ್ಲಿ 180 ಮೀಟರ್‌ ಉದ್ದದ, ಹೊಸದಾಗಿ ನಿರ್ಮಿಸಿದ್ದ ಸೇತುವೆಯೊಂದು ಕುಸಿದುಬಿದ್ದಿತ್ತು.

ಸೇತುವೆ ಕುಸಿತದ ಹಲವು ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಈ ಘಟನೆಗಳಲ್ಲಿ ಜೀವಹಾನಿ ಆಗಿಲ್ಲದಿದ್ದರೂ, ಕಾಮಗಾರಿಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಮೂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT