ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆ’ ಅಕಾಡೆಮಿಯಲ್ಲೇ ಆಗಲಿ: ರಂಜನಿ ಮತ್ತು ಗಾಯತ್ರಿ

Published 25 ಮಾರ್ಚ್ 2024, 21:00 IST
Last Updated 25 ಮಾರ್ಚ್ 2024, 21:00 IST
ಅಕ್ಷರ ಗಾತ್ರ

ಚೆನ್ನೈ: ‘ಭಿನ್ನ ಜಾತಿ, ಸಮುದಾಯದ ಸಭಿಕರು ಒಟ್ಟಾಗಿ ಸಂಗೀತ ಕಛೇರಿಯಲ್ಲಿ ಗಾಯನ ಆಲಿಸುವುದನ್ನು ನೋಡಲು ನಾವು ಬಯಸುತ್ತೇವೆ. ಅಂತಹ ‘ಬದಲಾವಣೆ’ ಅಕಾಡೆಮಿಯಿಂದ, ಪದಾಧಿಕಾರಿಗಳಿಂದಲೇ
ಆರಂಭವಾಗಲಿ’ ಎಂದು ಕರ್ನಾಟಕ ಸಂಗೀತ ಗಾಯಕಿಯರಾದ ರಂಜನಿ ಮತ್ತು ಗಾಯತ್ರಿ ಹೇಳಿದ್ದಾರೆ. 

‘ಮ್ಯೂಸಿಕ್ ಅಕಾಡೆಮಿಯ ಕಾರ್ಯಕಾರಿ ಸಮಿತಿ ಈಗ ಕೇವಲ ಬ್ರಾಹ್ಮಣರು ಮತ್ತು ನಿಮ್ಮ ನಿಷ್ಠರಿಂದಲೇ ತುಂಬಿದೆ. ಎರಡು ದಶಕಗಳಿಂದ ಈ ಸಮಿತಿಯೇ ಮುನ್ನಡೆಸುತ್ತಿದೆ. ಎಲ್ಲರೂ ಬಯಸುವ ‘ಬದಲಾವಣೆ’ ಯನ್ನು ಸಮಿತಿಯ ತಕ್ಷಣದ ನಿರ್ಧಾರ, ಹಲವರ ರಾಜೀ ನಾಮೆಯಿಂದ ತರಬಹುದು’ ಎಂದು ಸಲಹೆ ನೀಡಿದ್ದಾರೆ.

ಸಂಗೀತಗಾರ, ಸಾಮಾಜಿಕ ಹೋರಾಟಗಾರ ಟಿ.ಎಂ.ಕೃಷ್ಣ ಅವರಿಗೆ ‘ಸಂಗೀತ ಕಲಾನಿಧಿ’ ಪ್ರಶಸ್ತಿ ಘೋಷಣೆ ಸಂಬಂಧ ನೀಡಿದ್ದ ಹೇಳಿಕೆಗೆ ಮ್ಯೂಸಿಕ್‌ ಅಕಾಡೆಮಿಯ ಅಧ್ಯಕ್ಷ ಎನ್‌.ಮುರಳಿ ಅವರ ಪ್ರತಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ರಂಜನಿ ಮತ್ತು ಗಾಯತ್ರಿ ಸಹೋದರಿಯರು ಹೀಗೆ ತೀಕ್ಷ್ಣವಾಗಿ ಮಾತನಾಡಿದ್ದಾರೆ.

‘ಗಾಯಕಿ ಸಹೋದರಿಯರದು ಅನಪೇಕ್ಷಿತ ಮತ್ತು ನಿಂದನಾತ್ಮಕವಾದ ಹೇಳಿಕೆ’ ಎಂದು ಮುರಳಿ ಅವರು ಕಳೆದ ವಾರ ಪ್ರತಿಕ್ರಿಯಿಸಿದ್ದರು.

‘ಕಲಾವಿದರ ಸಾಧನೆಯ ಹಿಂದೆ ದೀರ್ಘಾವಧಿಯ ಕಠಿಣ ಶ್ರಮ ಇರುತ್ತದೆ. ಆದರೆ, ಎಲ್ಲರೂ ಬಯಸು ತ್ತಿರುವ ‘ಬದಲಾವಣೆ’ಯನ್ನು ತಕ್ಷಣದಲ್ಲಿ ಒಂದು ನಿರ್ಣಯದಿಂದಲೇ ಸಾಧಿಸಬಹುದು. ಇದಕ್ಕೆ ನೀವೇ ಮಾದರಿಯಾಗಿ. ಇಲ್ಲದಿದ್ದರೆ ನಿಮ್ಮದು ಕೇವಲ ಬಾಯಿಮಾತಿನ ಹೇಳಿಕೆ, ನೀವು ಮತಾಂಧರು, ಜಾತಿವಾದಿಗಳ ಒಕ್ಕೂಟ ಎಂದು ಸಮಾಜ ಹೇಳೀತು’ ಎಂದು ಕುಟುಕಿದ್ದಾರೆ.  ‘ಪ್ರಶಸ್ತಿಗೆ ಆಯ್ಕೆ ಮಾಡುವ ಅಕಾಡೆಮಿಯ ವಿವೇಚನಾಧಿಕಾರವನ್ನು ನಾವು ಎಂದಿಗೂ ಪ್ರಶ್ನಿಸಿಲ್ಲ. ಡಿಸೆಂಬರ್‌ನಲ್ಲಿ ನಡೆಯಲಿರುವ ಸಂಗೀತ ಉತ್ಸವದಲ್ಲಿ ಕಛೇರಿ ನೀಡುವುದರಿಂದ ಹಿಂದೆ ಸರಿಯುವ ನಮ್ಮ ವಿವೇಚನಾಧಿಕಾರವನ್ನಷ್ಟೇ ಬಳಸಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ನಾವು ಪ್ರಶ್ನಿಸದೇ ಇರುವ ಅಂಶಗಳಿಗೂ ಉತ್ತರಿಸುವ ಮೂಲಕ ನಿಮಗೆ ಅನುಕೂಲಕರವಾದ ರೂಪಕವನ್ನು ಸೃಷ್ಟಿಸಲು ಹಾಗೂ ನಮ್ಮ ಮೇಲೆ ಜಾತಿ ಕಳಂಕವನ್ನು ಹಚ್ಚಲು ಮುಂದಾಗಿದ್ದೀರಿ. ಮಾಧ್ಯಮಗಳಿಗೆ ನೀವು ನೀಡಿರುವ ಹೇಳಿಕೆಯು ಅಪ್ರಾಮಾಣಿಕ ಮತ್ತು ಅನೈತಿಕವಾದುದಾಗಿದೆ. ನಿಮ್ಮ ಹೇಳಿಕೆಯು ಪ್ರಶಸ್ತಿ ಪುರಸ್ಕೃತರ ವಕ್ತಾರರ ರೀತಿ ಇದೆ ಎಂಬುದೇ ಆಶ್ಚರ್ಯಕರ. ಎನ್.ರಾಮ್ ಅವರೂ ಈ ಅಭಿಯಾನದ ಅಘೋಷಿತ ವಕ್ತಾರಂತೆ ಸೇರಿದ್ದು, ನಮ್ಮನ್ನು ಜಾತಿವಾದಿಗಳಂತೆ ಬಿಂಬಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ಈ ಸಂಸ್ಥೆಯ ಬಗ್ಗೆ ಉನ್ನತ ಗೌರವವಿದೆ. ಅಲಕ್ಷಿತ ಸಮುದಾಯದಿಂದ ತಾರಾ ಕಲಾವಿದರು ಉದಯಿಸುವುದು ಹಾಗೂ ಸಂಗೀತ ವೇದಿಕೆ ಆವರಿಸುವುದನ್ನು ನೋಡುವುದು ನಮಗೆ ಹಾಗೂ ಅಸಂಖ್ಯಾತ ಜನರಿಗೆ ಸಂತೋಷ ನೀಡುವ ದಿನವಾಗಿರುತ್ತದೆ. ಟಿಟಿಕೆ ಸಭಾಂಗಣವು ಎಲ್ಲ ಜಾತಿ, ಧಾರ್ಮಿಕ ಅಲ್ಪಸಂಖ್ಯಾತ ಸಭಿಕರಿಂದ ತುಂಬಿರುವ ದಿನವನ್ನು ನೋಡಲು ನಾವೂ ಬಯಸುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

’ಪ್ರಚಾರ ನೀಡಲು ಬಯಸುವುದಿಲ್ಲ’: ‘ನಾವು ಏನನ್ನು ಹೇಳಬೇಕಾಗಿತ್ತೊ, ಅದನ್ನು ಮಾರ್ಚ್‌ 21ರಂದು ಅವರಿಗೆ (ರಂಜನಿ, ಗಾಯತ್ರಿ) ಬರೆದಿರುವ ಪತ್ರದಲ್ಲಿಯೇ ಹೇಳಿದ್ದೇವೆ. ಮತ್ತೆ ಪ್ರತಿಕ್ರಿಯೆ ನೀಡಿ, ಆ ಇಬ್ಬರಿಗೆ ಪ್ರಚಾರವನ್ನು ನೀಡಲು ಬಯಸುವುದಿಲ್ಲ’ ಎಂದು ಎನ್‌.ಮುರಳಿ ಪ್ರತಿಕ್ರಿಯಿಸಿದ್ದಾರೆ.

ಗಾಯಕಿ ಸಹೋದರಿಯರ ಹೇಳಿಕೆಗೆ ಪ್ರತಿಕ್ರಿಯೆ ಯನ್ನು ಬಯಸಿದಾಗ, ಅವರು ಹೀಗೆ ಹೇಳಿದರು.

ಕೃಷ್ಣ ಅವರಿಗೆ ‘ಸಂಗೀತ ಕಲಾನಿಧಿ ಪ್ರಶಸ್ತಿ’ ನೀಡುವುದನ್ನು ವಿರೋಧಿಸಿ, ಅಕಾಡೆಮಿಯ ವಾರ್ಷಿಕ ಸಂಗೀತ ಕಾರ್ಯಕ್ರಮದಲ್ಲಿ ನಾವು ಕಛೇರಿಯನ್ನು ನೀಡು ವುದಿಲ್ಲ ಎಂದು ಸಹೋದರಿಯರು ಘೋಷಿಸಿದ್ದರು.

ತಮ್ಮ ನಡೆಗೆ ಅವರು ನೀಡಿದ್ದ ಕಾರಣಗಳಲ್ಲಿ, ‘ಕೃಷ್ಣ ಅವರು ಸಮಾಜ ಸುಧಾರಕ ಇ.ವಿ.ಆರ್.ಪೆರಿಯಾರ್ ಅವರನ್ನು ಶ್ಲಾಘಿಸುತ್ತಾರೆ. ಪೆರಿಯಾರ್ ಅವರು ‘ಬ್ರಾಹ್ಮಣರ ನರಮೇಧಕ್ಕೆ ಕರೆ ನೀಡಿದ್ದವರು’ ಎಂಬುದೂ ಸೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT