ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಯುತ ತನಿಖೆಯನ್ನು ಪ್ರೋತ್ಸಾಹಿಸುತ್ತೇವೆ: ಸಮನ್ಸ್ ನಂತರವೂ ಅಮೆರಿಕ ಹೇಳಿಕೆ

Published 28 ಮಾರ್ಚ್ 2024, 3:47 IST
Last Updated 28 ಮಾರ್ಚ್ 2024, 3:47 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಆರೋಪ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಿರುವ ಕುರಿತು ಮತ್ತೆ ಪ್ರತಿಕ್ರಿಯಿಸಿರುವ ಅಮೆರಿಕ, ನ್ಯಾಯಯುತ, ಪಾರದರ್ಶಕ, ಸಕಾಲಿಕ ಕಾನೂನು ಪ್ರಕ್ರಿಯೆಯನ್ನು ಬೆಂಬಲಿಸುವುದಾಗಿ ಹೇಳಿದೆ.

ಭಾರತವು ಅಮೆರಿಕದ ರಾಜತಾಂತ್ರಿಕ ಅಧಿಕಾರಿಗೆ ಸಮನ್ಸ್‌ ನೀಡಿರುವುದು ಹಾಗೂ ಭಾರತದಲ್ಲಿ ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಗಳನ್ನು ಸ್ಥಗಿತೊಳಿಸಿರುವ ಕುರಿತು, ಅಮೆರಿಕದ ರಾಜ್ಯ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿಕೆ ನೀಡಿದ್ದಾರೆ.

ರಾಜ್ಯ ಇಲಾಖೆಯ ಮಾಧ್ಯಮ ಹೇಳಿಕೆ ಪ್ರಕಟಿಸುವ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, 'ದೆಹಲಿ ಸಿಎಂ ಕೇಜ್ರಿವಾಲ್‌ ಬಂಧನದ ಜೊತೆಗೆ, ಈ ಎಲ್ಲ ವಿಚಾರಗಳನ್ನು ನಿಕಟವಾಗಿ ಗಮನಿಸುವುದನ್ನು ಮುಂದುವರಿಸುತ್ತೇವೆ' ಎಂದು ತಿಳಿಸಿದ್ದಾರೆ.

'ಮುಂಬರುವ ಚುನಾವಣೆಗಳಲ್ಲಿ ಪರಿಣಾಮಕಾರಿಯಾಗಿ ಪ್ರಚಾರದಲ್ಲಿ ತೊಡಗಿಕೊಳ್ಳದಂತೆ ತಡೆಯುವುದಕ್ಕಾಗಿ ತೆರಿಗೆ ಇಲಾಖೆ ಅಧಿಕಾರಿಗಳು ತನ್ನ ಕೆಲವು ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ. ಈ ವಿಚಾರ ಗೊತ್ತಿದೆ. ನಾವು ನ್ಯಾಯಯುತ, ಪಾರದರ್ಶಕ ಮತ್ತು ಸಮಯೋಚಿತ ಕಾನೂನು ಪ್ರಕ್ರಿಯೆಗಳಿಗೆ ಪ್ರೋತ್ಸಾಹ ನೀಡುತ್ತೇವೆ' ಎಂದು ಪುನರುಚ್ಛರಿಸಿದ್ದಾರೆ.

'ಸಮನ್ಸ್‌ ಕುರಿತಂತೆ, ರಾಜತಾಂತ್ರಿಕ ಅಧಿಕಾರಿಗಳೊಂದಿಗೆ ಖಾಸಗಿಯಾಗಿ ಮಾತುಕತೆ ನಡೆಸಿಲ್ಲ. ನ್ಯಾಯಯುತ ಕಾನೂನು ಪ್ರಕ್ರಿಯೆಗಳನ್ನು ಬೆಂಬಲಿಸುತ್ತೇವೆ ಎಂದು ಇಲ್ಲಿಂದಲೇ ಸಾರ್ವಜನಿಕವಾಗಿಯೇ ಹೇಳಿದ್ದೇವೆ. ಅಂತಹ ಪ್ರಕ್ರಿಯೆಗೆ ಯಾರೂ ಅಡ್ಡಿಪಡಿಸಬಾರದು. ಅದೇ ವಿಷಯವನ್ನು ಮತ್ತೆ ಖಾಸಗಿಯಾಗಿಯೂ ಸ್ಪಷ್ಟಪಡಿಸುತ್ತೇವೆ' ಎಂದಿದ್ದಾರೆ.

ಕೇಜ್ರಿವಾಲ್‌ ಬಂಧನದ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ್ದ ಅಮೆರಿಕ, ಕಾನೂನು ಪ್ರಕ್ರಿಯೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವಾಲಯ, ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯ ಹಂಗಾಮಿ ಉಪ ಮುಖ್ಯಸ್ಥೆ ಗ್ಲಾರಿಯಾ ಬರ್ಬೆನಾ ಅವರಿಗೆ ಬುಧವಾರ ಸಮನ್ಸ್‌ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT