ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿ ವಿಶ್ಲೇಷಣೆ | ಬಿಎಸ್‌ವೈ ಹಾದಿಯಲ್ಲಿ ಸಾಗುತ್ತಿದ್ದಾರೆಯೇ ‘ಮಹಾರಾಣಿ’ ರಾಜೇ

ವಸುಂಧರಾ ರಾಜೇ ಅವರನ್ನು ವರಿಷ್ಠರು ನಿರ್ಲಕ್ಷಿಸುತ್ತಿದ್ದಾರೆಯೇ: ಬಿಜೆಪಿಯೊಳಗೆ ಚರ್ಚೆ
Published 10 ಅಕ್ಟೋಬರ್ 2023, 23:37 IST
Last Updated 11 ಅಕ್ಟೋಬರ್ 2023, 3:01 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಶೋಕ ಗೆಹಲೋತ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ಘಟಕವು ಈ ವರ್ಷದ ಮಾರ್ಚ್‌ನಲ್ಲಿ ಜೈಪುರದಲ್ಲಿ ಭಾರಿ ಪ್ರತಿಭಟನೆ ಸಂಘಟಿಸಿತು. ಈ ಪ್ರತಿಭಟನೆಯ ನೇತೃತ್ವ ವಹಿಸಿದವರು ಬಿಜೆಪಿ ರಾಜ್ಯ ಘಟಕದ ಆಗಿನ ಅಧ್ಯಕ್ಷ ಸತೀಶ್‌ ಪುನಿಯಾ. ಆದರೆ, ಪಕ್ಷದ 40ಕ್ಕೂ ಹೆಚ್ಚು ಶಾಸಕರು ಹಾಗೂ 10 ಸಂಸದರು ಈ ಪ್ರತಿಭಟನೆಗೆ ಚಕ್ಕರ್‌ ಹೊಡೆದರು. ಬದಲಿಗೆ ಜೈಪುರದಿಂದ 240 ಕಿ.ಮೀ. ದೂರದ ಚುರುವಿಗೆ ಈ ಮುಖಂಡರು ಪ್ರಯಾಣಿಸಿದರು. ಅಲ್ಲಿ ನಡೆದ ವಸಂತೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಮುಖ್ಯ ಅತಿಥಿಯಾಗಿದ್ದರು. 

ಪ್ರತಿಭಟನೆಗೆ ಗೈರಾಗಿ ಚುರುವಿನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ರಾಜೆ ಬಣವು ಬಿಜೆಪಿ ಹೈಕಮಾಂಡ್‌ಗೆ ಬಲವಾದ ಹಾಗೂ ಸ್ಪಷ್ಟವಾದ ಸಂದೇಶ ರವಾನಿಸಿತು. ಜತೆಗೆ, ರಾಜ್ಯ ನಾಯಕರ ಮೇಲೆ ತಮಗಿರುವ ಬಲವಾದ ಹಿಡಿತವನ್ನು ರಾಜೇ ಪ್ರದರ್ಶಿಸಿದರು. ಹೋಳಿ ಮುಗಿದ ಮೂರೇ ವಾರಗಳಲ್ಲಿ ಪುನಿಯಾ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಯಿತು. ಆ ಜಾಗಕ್ಕೆ ಚಿತ್ತೋರ್‌ಗಢ ಸಂಸದ ಸಿ.ಪಿ.ಜೋಶಿ ಅವರನ್ನು ತರಲಾಯಿತು. ಪುನಿಯಾ ಅವರು ಮೊದಲಿನಿಂದಲೂ ರಾಜೇ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಪಕ್ಷದ ರಾಜ್ಯ ಘಟಕದಲ್ಲಿ ರಾಜೇ ಅವರ ಉತ್ತರಾಧಿಕಾರಿಯಾಗುವ ಮಹತ್ವಾಕಾಂಕ್ಷೆ ತೋರಿದ್ದರು.    

ಕಳೆದ ವಾರ ಜೋಧಪುರದಲ್ಲಿ ₹5,000 ಕೋಟಿ ಮೊತ್ತದ ವಿವಿಧ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ವೇದಿಕೆಯಲ್ಲಿ ‘ಪ್ರಧಾನ ಸೇವಕ’ ಮೋದಿ ಅವರ ಪಕ್ಕದಲ್ಲಿ ಕೂರಲು ‘ಮಹಾರಾಣಿ’ ರಾಜೇ ಅವರಿಗೆ ಅವಕಾಶ ಸಿಕ್ಕಿತು. ರಾಜೆ ಅವರೊಂದಿಗೆ ಪ್ರಧಾನಿ ಆಡಿದ್ದು ಒಂದೆರಡು ಮಾತುಗಳಷ್ಟೇ. ಜತೆಗೆ, ರಾಜೇ ಅವರಿಗೆ ಭಾಷಣ ಮಾಡಲೂ ಅವಕಾಶ ಸಿಗಲಿಲ್ಲ. ‘ಕಮಲ’ದ ಹೆಸರಿನಲ್ಲಿ ಪಕ್ಷ ಚುನಾವಣೆ ಎದುರಿಸಲಿದೆ ಎಂದು ಹೇಳುವ ಮೂಲಕ ಪ್ರಧಾನಿ ಅವರು ರಾಜೇ ಅವರ ಆಸೆಗೆ ತಣ್ಣೀರನ್ನೂ ಎರಚಿದರು. 

ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ತಮ್ಮನ್ನು ಘೋಷಿಸಬೇಕು ಎಂದು ರಾಜೇ ಅವರು ಬಹುದಿನಗಳಿಂದ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ, ಈ ಬೇಡಿಕೆಗೆ ವರಿಷ್ಠರು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ರಾಜ್ಯದಲ್ಲಿ ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸುವುದಾಗಿ ಪಕ್ಷದ ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ರಾಜೇ ಹಾಗೂ ಬೆಂಬಲಿಗರು ಹಲವು ಬಗೆಯ ಒತ್ತಡ ಹೇರಿದರೂ ವರಿಷ್ಠರು ಅದನ್ನು ನಿರ್ಲಕ್ಷಿಸುತ್ತಲೇ ಬಂದರು. ಅದರೊಂದಿಗೆ, ರಾಜೇ ಬೆಂಬಲಿಗರನ್ನು ನಿಧಾನವಾಗಿ ಮಟ್ಟ ಹಾಕುವ ಕೆಲಸವನ್ನೂ ಮಾಡಿದರು. ಆ ಜಾಗದಲ್ಲಿ ಹೊಸ ಮುಖಗಳಿಗೆ ಹಾಗೂ ಪಕ್ಷನಿಷ್ಠರಿಗೆ ಅವಕಾಶ ನೀಡಿದರು. ಚುನಾವಣಾ ಪ್ರಣಾಳಿಕೆ ಹಾಗೂ ಚುನಾವಣಾ ನಿರ್ವಹಣಾ ಸಮಿತಿಗಳಲ್ಲೂ ರಾಜೇ ಅವರಿಗೆ ಜಾಗ ಸಿಗಲಿಲ್ಲ. ಪಕ್ಷದ ರಾಷ್ಟ್ರೀಯ ಸಂಘಟನೆಯ ಪುನರ್‌ ರಚನೆಯ ವೇಳೆಯಲ್ಲೂ ರಾಜೇ ಅವರಿಗೆ ಬಡ್ತಿ ಸಿಗಲಿಲ್ಲ. ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಲ್ಲೇ ಅವರನ್ನು ಮುಂದುವರಿಸಲಾಯಿತು. 

ವಿಧಾನಸಭಾ ಚುನಾವಣೆ ವೇಳಾಪಟ್ಟಿ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯು ರಾಜಸ್ಥಾನದ 41 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತು. ಈ ಪಟ್ಟಿಯಲ್ಲಿ ರಾಜೇ ಅವರ ಹೆಸರು ಇರಲಿಲ್ಲ. ಜೈಪುರದ ಹಿಂದಿನ ರಾಜಕುಮಾರಿ ದಿಯಾ ಕುಮಾರಿ ಸೇರಿದಂತೆ ಏಳು ಸಂಸದರ ಹೆಸರು ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಬಿಜೆಪಿ ಪಾಳಯದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸೆಪ್ಟೆಂಬರ್ ಕೊನೆಯ ವಾರದಲ್ಲಿ ದಿಯಾ ಕುಮಾರಿ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದರು. ದಿಯಾ ಅವರನ್ನು ಇದೀಗ ಜೈಪುರದ ವಿದ್ಯಾಧರನಗರದಿಂದ ಕಣಕ್ಕೆ ಇಳಿಸಲಾಗಿದೆ. ರಾಜೇ ಅವರ ನಿಕಟವರ್ತಿ ನರ್ಪತ್‌ ಸಿಂಗ್‌ ರಾಜ್ವಿ ಅವರಿಗೆ ಟಿಕೆಟ್‌ ನಿರಾಕರಿಸಿ ದಿಯಾ ಕುಮಾರಿ ಅವರಿಗೆ ಅವಕಾಶ ನೀಡಲಾಗಿದೆ. 

ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅಂಗೀಕಾರ ಸಿಕ್ಕ ಬಳಿಕ ಪ್ರಧಾನಿಯವರು ಸೆಪ್ಟೆಂಬರ್‌ 25ರಂದು ಜೈಪುರದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ನಿರೂಪಣೆ ಹೊಣೆಯನ್ನು ದಿಯಾ ಕುಮಾರಿ ಅವರಿಗೆ ವಹಿಸಲಾಗಿತ್ತು. ರಾಜ್ಯದಲ್ಲಿ ಎರಡನೇ ಹಂತದ ನಾಯಕರನ್ನು ಮುಂಚೂಣಿಗೆ ತರುವ ಪ್ರಯತ್ನದ ಭಾಗವಾಗಿ ದಿಯಾ ಕುಮಾರಿ ಅವರಿಗೆ ವರಿಷ್ಠರು ಆದ್ಯತೆ ನೀಡುತ್ತಿದ್ದಾರೆ. ಜತೆಗೆ, ರಾಜೇ ಅವರನ್ನು ನಿಧಾನವಾಗಿ ಮಟ್ಟ ಹಾಕುವ ಕೆಲಸವನ್ನೂ ಮಾಡುತ್ತಿದ್ದಾರೆ ಎಂಬ ಚರ್ಚೆಗಳು ಪಕ್ಷದ ವಲಯದಲ್ಲಿ ನಡೆದಿವೆ. 

ರಾಜಸ್ಥಾನದ ಬಿಜೆಪಿಯ ದೊಡ್ಡ ನಾಯಕ ಭೈರೋನ್‌ ಸಿಂಗ್ ಶೆಖಾವತ್‌ ಅವರು 2002ರ ಕೊನೆಯಲ್ಲಿ ದೇಶದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ಆಗ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ರಾಜೇ ಅವರನ್ನು ನೇಮಿಸಲಾಯಿತು. 2003ರ ವಿಧಾನಸಭಾ ಚುನಾವಣೆಯನ್ನು ರಾಜೇ ನೇತೃತ್ವದಲ್ಲೇ ಪಕ್ಷ ಎದುರಿಸಿತು. ಆ ಚುನಾವಣೆಯಲ್ಲಿ ಬಿಜೆಪಿ ವಿಜಯ ಗಳಿಸಿತು. ಅಂದಿನಿಂದ ರಾಜೇ ಹಿಂತಿರುಗಿ ನೋಡಲೇ ಇಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ರಾಜೇ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಲಾಯಿತು. ಆ ಚುನಾವಣೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತ ಗಳಿಸಿತು. ಆಡಳಿತ ವಿರೋಧಿ ಅಲೆಯಿಂದಾಗಿ 2018ರ ಚುನಾವಣೆಯಲ್ಲಿ ಕೇಸರಿ ಪಾಳಯ ಸೋತಿತು. ಆ ಬಳಿಕ ರಾಷ್ಟ್ರ ರಾಜಕಾರಣಕ್ಕೆ ರಾಜೇ ಅವರನ್ನು ಕರೆ ತರಲು ಬಿಜೆಪಿ ವರಿಷ್ಠರು ಹಲವು ಸಲ ಪ್ರಯತ್ನ ನಡೆಸಿದರು. ಒಂದು ವೇಳೆ ರಾಷ್ಟ್ರ ರಾಜಕಾರಣಕ್ಕೆ ಬಂದರೆ ‘ಮರುಭೂಮಿ’ಯ ಹಿಡಿತ ತಪ್ಪಲಿದೆ ಎಂದು ಭಾವಿಸಿದ ‘ಮಹಾರಾಣಿ’ ವರಿಷ್ಠರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಇನ್ನೊಂದೆಡೆ, ಮುಖ್ಯಮಂತ್ರಿ ಅಶೋಕ ಗೆಹಲೋತ್‌ ಬಗ್ಗೆ ಮೃದುಧೋರಣೆ ತಾಳುತ್ತಾ ಬಂದರು. ಮತ್ತೊಂದೆಡೆ, ಅವರು ಏಕಾಂಗಿಯಾಗಿ ರಾಜ್ಯ ಪ್ರವಾಸ ಮಾಡಿ ತಮಗಿರುವ ಜನಬೆಂಬಲ ತೋರ್ಪಡಿಸಿದರು. ಪಕ್ಷದ ಕಾರ್ಯಕ್ರಮಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲೂ ಹೋಗಲಿಲ್ಲ. ಅವರು ಈಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (ಬಿಎಸ್‌ವೈ) ಹಾದಿಯಲ್ಲೇ ಸಾಗುತ್ತಿದ್ದಾರೆಯೇ? 

ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಪಕ್ಷ ಸಂಘಟನೆಗೆ ಹಾಗೂ ಪ್ರವಾಸಕ್ಕೆ ಹಲವು ಸಲ ಉಮೇದು ತೋರಿದ್ದಾರೆ. ಆದರೆ, ಅದಕ್ಕೆ ವರಿಷ್ಠರು ಒಪ್ಪಿಗೆ ನೀಡಿದ್ದು ಕಡಿಮೆ. ಒಂದರ್ಥದಲ್ಲಿ ರಾಜೇ ಹಾಗೂ ಯಡಿಯೂರಪ್ಪ ಅವರು ಒಂದೇ ದೋಣಿಯ ಪಯಣಿಗರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT