ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಗೆ ಗಲಭೆ ವ್ಯಾಪಿಸದಂತೆ ಕಟ್ಟೆಚ್ಚರ; ಪೆಟ್ರೋಲ್ ಚಿಲ್ಲರೆ ಮಾರಾಟಕ್ಕೆ ನಿಷೇಧ

Published 2 ಆಗಸ್ಟ್ 2023, 6:25 IST
Last Updated 2 ಆಗಸ್ಟ್ 2023, 6:25 IST
ಅಕ್ಷರ ಗಾತ್ರ

ಗುರುಗ್ರಾಮ: ಹರಿಯಾಣದಲ್ಲಿ ಭುಗಿಲೆದ್ದಿರುವ ಕೋಮುಗಲಭೆ ದೆಹಲಿಗೂ ವ್ಯಾಪಿಸುವ ಭೀತಿ ಎದುರಾಗಿದೆ. ಗುರುಗ್ರಾಮದ ಸೆಕ್ಟರ್ 70ರಲ್ಲಿ ಹಲವು ಅಂಗಡಿ ಹಾಗೂ ಗುಡಿಸಿಲುಗಳಿಗೆ ಬೆಂಕಿ ಹಚ್ಚಲಾಗಿದೆ. ಗಲಭೆ ನಿಯಂತ್ರಿಸಲು ಪೆಟ್ರೋಲ್ ಹಾಗೂ ಡೀಸೆಲ್ ಚಿಲ್ಲರೆ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿದೆ.

ಹರಿಯಾಣದ ನೂಹ್‌ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್‌ ಮೆರವಣಿಗೆ ವೇಳೆ ಸೋಮವಾರ ಪ್ರಾರಂಭವಾದ ಘರ್ಷಣೆಯು ಮಂಗಳವಾರ ಹೊತ್ತಿಗೆ ಪಕ್ಕದ ಗುರುಗ್ರಾಮ ಜಿಲ್ಲೆಗೂ ವ್ಯಾಪಿಸಿತು. ಗುರುಗ್ರಾಮದ ಸೆಕ್ಟರ್‌ 57ರಲ್ಲಿ ಮಸೀದಿಯೊಂದಕ್ಕೆ ಬೆಂಕಿ ಹಚ್ಚಲಾಗಿದ್ದು, 26 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇಬ್ಬರು ಗಾಯಗೊಂಡಿದ್ದರು. 

ಸೆಕ್ಟರ್ 57ರಲ್ಲಿರುವ ಅಂಜುಮನ್‌ ಮಸೀದಿಗೆ ಮಧ್ಯರಾತ್ರಿ ಗುಂಪು ತಲುಪಿದ್ದು, ಗುಂಪಿನಲ್ಲಿದ್ದವರು ಮಸೀದಿಗೆ ಬೆಂಕಿ ಹಚ್ಚಿದ್ದಾರೆ. ಗಲಭೆಯು ಬುಧವಾರ ಸೆಕ್ಟರ್ 70ರವರೆಗೂ ವ್ಯಾಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹರಿಯಾಣದ ನೂಹ್‌ ಪಟ್ಟಣದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡು‌ವೆ ಘರ್ಷಣೆ ನಡೆದಿತ್ತು. ಉದ್ರಿಕ್ತರು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದರು.

ಘಟನೆಯಲ್ಲಿ ಗೃಹರಕ್ಷಕ ದಳದ ಇಬ್ಬರು ಸಿಬ್ಬಂದಿ ಹಾಗೂ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ. ಪೊಲೀಸ್ ವಾಹನಗಳಿಗೂ ಹಾನಿಯಾಗಿದೆ. ಡಿಎಸ್‌ಪಿ ಸೇರಿದಂತೆ ಹಲವು ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಲಭೆಯಲ್ಲಿ ಗಾಯಗೊಂಡ ಭಜರಂಗದಳದ 6 ಜನ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಹೇಳಿದೆ. ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ಸುರೇಂದ್ರ ತನ್ವಾರ್ ಅವರು ಮಾಹಿತಿ ನೀಡಿ, ‘ನೂಹ್‌ನಲ್ಲಿ ಸೋಮವಾರ ನಡೆದ ಗಲಭೆಯಲ್ಲಿ ಭಜರಂಗದಳದ ಕಾರ್ಯಕರ್ತ ಪ್ರದೀಪ್ ಶರ್ಮಾ ಮೇಲೆ ಉದ್ರಿಕ್ತರ ಗುಂಪು ಹಲ್ಲೆ ನಡೆಸಿ ಗಾಯಗೊಳಿಸಿತ್ತು. ಅವರನ್ನು ದೆಹಲಿಯ ಸಫದರ್ಝಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವದಂತಿಗಳನ್ನು ನಾಗರಿಕರು ನಂಬದಂತೆ ಪೊಲೀಸರು ಕೋರಿದ್ದಾರೆ. ದೆಹಲಿಯಲ್ಲಿ ಶಾಲಾ, ಕಾಲೇಜು ಹಾಗೂ ಕಚೇರಿಗಳು ಮುಚ್ಚಲಾಗಿವೆ ಎಂಬ ವದಂತಿ ಸುಳ್ಳು. ಎಲ್ಲವೂ ಎಂದಿನಂತೆಯೇ ಇದೆ‘ ಎಂದು ಗುರುಗ್ರಾಮದ ಸಹಾಯಕ ಪೊಲೀಸ್ ಆಯುಕ್ತ ವರುಣ್ ಕುಮಾರ್ ದಹಿಯಾ ತಿಳಿಸಿದ್ದಾರೆ.

ಮನೆಯಿಂದಲೇ ಕೆಲಸ ಮಾಡುವಂತೆ ಬಹುರಾಷ್ಟ್ರೀಯ ಕಂಪನಿ ಅಮೆರಿಕನ್ ಎಕ್ಸ್‌ಪ್ರೆಸ್‌ ಹಾಗೂ ಕೆಪಿಎಂಜಿ ತನ್ನ ಉದ್ಯೋಗಿಗಳಿಗೆ ತಿಳಿಸಿದೆ. ಗುರುಗ್ರಾಮದ ಗಡಿ ಪ್ರದೇಶದ ಸೊಹ್ನಾದಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ದೆಹಲಿಯಲ್ಲಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಡ್ರೋಣ್ ಮೂಲಕ ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT