ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Wayanad landslides |ನಲುಗಿದ ನೆಲದಲ್ಲಿ ‘ಅಪರಿಚಿತರ’ ಚಿರನಿದ್ರೆ

ಭೂಕುಸಿತಕ್ಕೆ ನಲುಗಿದ ಚಹಾತೋಟದ ನಡುವೆ ದೇಹ, ಅಂಗಾಂಗಗಳ ಅಂತ್ಯಸಂಸ್ಕಾರ
Published : 5 ಆಗಸ್ಟ್ 2024, 23:48 IST
Last Updated : 5 ಆಗಸ್ಟ್ 2024, 23:48 IST
ಫಾಲೋ ಮಾಡಿ
Comments

ಕಲ್ಪೆಟ್ಟ (ವಯನಾಡ್ ಜಿಲ್ಲೆ): ಎಂದೋ ಒಮ್ಮೆ ಇವರು ಪರಸ್ಪರ ಕಂಡಿರಬಹುದು, ನಸುನಗೆ ವಿನಿಮಯ ಮಾಡಿಕೊಂಡಿರಬಹುದು, ಮಾತನಾಡಿರಲೂಬಹುದು, ಸುಂದರ ಸಂಜೆಗಳಲ್ಲಿ ಪೆಟ್ಟಿಗೆ ಅಂಗಡಿಯಲ್ಲಿ ಕುಳಿತು ಚಹಾ ಸವಿದಿರಬಹುದು. ಇವರು ನೆರೆಹೊರೆಯ ನಿವಾಸಿಗಳೂ ಆಗಿರಬಹುದು. ಆದರೆ ಇಲ್ಲಿ ಎಲ್ಲರೂ ಅಪರಿಚಿತರೇ. ಇವರೆಲ್ಲರೂ ಜೊತೆಯಾಗಿ ಚಿರನಿದ್ರೆಗೈಯ್ಯುತ್ತಿರುವ ಚಹಾ ತೋಟದ ಸುಂದರ ತಾಣವಿನ್ನು ದುರಂತದ ಸ್ಮಾರಕ.

ಮೇಪ್ಪಾಡಿ ಗ್ರಾಮ ಪಂಚಾಯಿತಿಯ ಚೂರಲ್‌ಮಲ, ಮುಂಡಕ್ಕೈ ಮತ್ತು ಪುಂಜಿರಿಮಟ್ಟಂ ಪ್ರದೇಶಗಳಲ್ಲಿ ಕಳೆದ ಮಂಗಳವಾರ ಮಧ್ಯರಾತ್ರಿ ಪ್ರಕೃತಿ ತಾಂಡವವಾಡಿ ಕೆಸರು ನೀರಿನಲ್ಲಿ ಎಳೆದುಕೊಂಡು ಹೋಗಿ ಒಂದಿನಿತೂ ಗುರುತು ಸಿಗದ ಮೃತದೇಹಗಳು ಕೊನೆಗೂ ಪುತ್ತುಮಲದ ಮಣ್ಣಿನಲ್ಲಿ ಲೀನವಾಗಿವೆ.

ಹ್ಯಾರಿಸನ್ಸ್ ಮಲಯಾಳಂ ಚಹಾತೋಟದ ಮಾಲೀಕರು ಉಚಿತವಾಗಿ ನೀಡಿದ 64 ಸೆಂಟ್ ಜಾಗ ಈಗ ಸರ್ವಧರ್ಮದ ಸ್ಮಶಾನವಾಗಿದ್ದು ಗುರುತು ಪತ್ತೆಯಾಗದ 35 ಮೃತದೇಹಗಳನ್ನು ಭಾನುವಾರ ಮತ್ತು ಸೋಮವಾರ ಹೂಳಲಾಗಿದೆ. ದೇಹದ ಭಾಗಗಳನ್ನು ಕೂಡ ಇಲ್ಲಿ ಮಣ್ಣು ಮಾಡಲಾಗಿದೆ. ನಾಪತ್ತೆಯಾದವರ ಸಂಬಂಧಿಕರು  ಈ ‘ಅಪರಿಚಿತರಲ್ಲಿ’ ತಮ್ಮವರು ಇರುವರು ಎಂಬ ಭಾವದಿಂದ ಇನ್ನು ಇಲ್ಲಿ ಅಂತಿಮ ವಿದಾಯ ಹೇಳಬಹುದಾಗಿದೆ.

ಮಣ್ಣಿನಡಿಯಲ್ಲೂ ಬಂಡೆಗಳ ಎಡೆಯಲ್ಲೂ ಕಾಡಿನ ಅಂಚಿನಲ್ಲೂ ನದಿಯ ಒಡಲಿನಲ್ಲೂ ಸಿಕ್ಕಿದ್ದ ಈ ಮೃತದೇಹಗಳು ಈಗ ಮತ್ತೊಂದು ದುರಂತ ಭೂಮಿಯನ್ನು ಸೇರಿವೆ. 2019ರಲ್ಲಿ ಸಂಭವಿಸಿದ ಪುತ್ತುಮಲ ದುರಂತದಲ್ಲಿ 17 ಮಂದಿಯನ್ನು ಈ ಜಾಗದ ಮೂಲಕ ಗುಡ್ಡದ ನೀರು ಎಳೆದೊಯ್ದು ಚಾಲಿಯಾರ್ ನದಿಗೆ ಎಸೆದಿತ್ತು. ಅಂದು ನಾಪತ್ತೆಯಾದವರಲ್ಲಿ ಐದು ಮಂದಿಯ ದೇಹಗಳು ಪತ್ತೆಯಾಗಲಿಲ್ಲ. ದುರಂತಕ್ಕೆ ಮೊದಲು ಇಲ್ಲಿ ದೇವಸ್ಥಾನ ಮತ್ತು ಮಸೀದಿ ಇತ್ತು. ಈಗ ಈ ಸ್ಥಳವು ಮತ್ತೊಂದು ದುರಂತದಲ್ಲಿ ಜೀವ ಕಳೆದುಕೊಂಡವರ ‘ವಿಶ್ರಾಂತಿ ತಾಣ’ವಾಗಿದೆ.

ಸರ್ವಧರ್ಮದ ಪ್ರಾರ್ಥನೆ ಸೇರಿದಂತೆ ಸಕಲ ಗೌರವ ಪಡೆದಿರುವ ಮೃತದೇಹಗಳು ಮತ್ತು ದೇಹದ ಭಾಗಗಳ ನಡುವೆ ಜಾತಿ, ಧರ್ಮದ ಭೇದವಿಲ್ಲ. ಆಸ್ತಿ, ಮನೆ, ಅಂತಸ್ತು ಮುಂತಾದ ಗೋಡೆಗಳೂ ಇಲ್ಲ.  

ಮಾಹಿತಿಗೆ ಡಿಎನ್ಎ ಪರೀಕ್ಷೆಯ ಸಂಖ್ಯೆ

ದುರಂತ ಸಂಭವಿಸಿದ ಚೂರಲ್‌ಮಲ ಭಾಗಕ್ಕೆ ಮೇಪ್ಪಾಡಿ ಪಟ್ಟಣದಿಂದ ಹೋಗುವ ಹಾದಿಯ ಸುಮಾರು ಎಂಟು ಕಿಲೊಮೀಟರ್ ದೂರದಲ್ಲಿ ಈ ಜಾಗವಿದೆ. ಮಣ್ಣು ಮಾಡಿರುವ ಜಾಗದಲ್ಲಿ ಪ್ರತಿ ಮೃತದೇಹ ಮತ್ತು ದೇಹದ ಭಾಗಗಳ ಜಾಗದಲ್ಲಿ ಸಿಮೆಂಟ್‌ ಕಲ್ಲೊಂದನ್ನು ಇರಿಸಲಾಗಿದ್ದು ಅದರಲ್ಲಿ ಡಿಎನ್‌ಎ ಪರೀಕ್ಷೆಯ ಮಾಹಿತಿಗೆ ಸಂಬಂಧಿಸಿದ ಸಂಖ್ಯೆಯೊಂದನ್ನು ನಮೂದಿಸಲಾಗಿದೆ. 

ಆಭರಣಗಳು ಮತ್ತು ಅದರ ಚಿತ್ರವನ್ನು ತೆಗೆದಿರಿಸಲಾಗಿದ್ದು ಭವಿಷ್ಯದಲ್ಲಿ ಯಾರಾದರೂ ಇದು ತಮ್ಮವರದು ಎಂದು ಸಾಬೀತು ಮಾಡಿದರೆ ಇಲ್ಲಿಂದ ಶವವನ್ನು ಎತ್ತಿ ತಮ್ಮ ಧರ್ಮದ ಆಚಾರದ ಪ್ರಕಾರ ಅಂತಿಮ ಸಂಸ್ಕಾರ ಮಾಡಲು ಅವಕಾಶವಿದೆ. ಇದಕ್ಕೆ ಡಿಎನ್‌ಎ ಹೊಂದಿಕೆಯಾಗಬೇಕು.

ಕೊನೆಯ ಕ್ಷಣದಲ್ಲಿ ಗುರುತು ಪತ್ತೆ 

ಗುರುತು ಪತ್ತೆಯಾಗದ 8 ಮೃತದೇಹಗಳನ್ನು ಭಾನುವಾರ ಮತ್ತು 29 ಮೃತದೇಹಗಳನ್ನು ಸೋಮವಾರ ಮಣ್ಣುಮಾಡಲಾಯಿತು. ಒಟ್ಟು 164 ಅಂಗಾಗಗಳೂ ಇಲ್ಲಿ ಮಣ್ಣು ಸೇರಿದವು. ಭಾನುವಾರ ಪುತ್ತುಮಲ ಪ್ರದೇಶಕ್ಕೆ ತರಲು ಸಜ್ಜು ಮಾಡಿದ್ದ ಒಂದು ಮೃತದೇಹದ ಗುರುತನ್ನು ಕೊನೆಯ ಕ್ಷಣದಲ್ಲಿ ಸಂಬಂಧಿಕರು ಪತ್ತೆ ಮಾಡಿದ್ದು ಅದನ್ನು ಅವರಿಗೆ ಹಸ್ತಾಂತರಿಸಲಾಯಿತು.

ತೀರಿಹೋದವರೆಲ್ಲರೂ ಚೂರಲ್‌ಮಲ, ಮುಂಡಕ್ಕೈ ಭಾಗದವರು. ಅಲ್ಲಿನ ಜನರಿಗೆ ಗೌರವ ಸಲ್ಲಿಸಲು ಅನುಕೂಲ ಆಗಲಿ ಎಂಬ ಕಾರಣಕ್ಕೆ ಈ ಜಾಗ ಆಯ್ಕೆ ಮಾಡಲಾಗಿದೆ
ನಾಸರ್, ಮೇಪ್ಪಾಡಿ ಗ್ರಾ.ಪಂ ಸ್ಥಾಯಿ ಸಮಿತಿ ಸದಸ್ಯ
2019ರಲ್ಲಿ ಸಂಭವಿಸಿದ ದುರಂತದಲ್ಲಿ 17 ಜನರು ಸಾವಿಗೀಡಾಗಿದ್ದರು. ಕಾಫಿ, ಚಹಾ ಮತ್ತು ಏಲಕ್ಕಿ ತೋಟವೂ ಇಲ್ಲದಾಗಿತ್ತು. ಈ ಜಾಗದಲ್ಲಿ ಈಗ ಮತ್ತೊಂದು ನೋವು
ಮುತ್ತಲಿಬ್ ತಾಞಿಲೋಡ್, ಸ್ಥಳೀಯ ವ್ಯಾಪಾರಿ
‘ಕಳ್ಳರ ಕಾಟ: ಸೇವೆಗೆ ಬಂದವರ ನೋಂದಣಿ
ದುರಂತಭೂಮಿಯಲ್ಲಿ ಕಳ್ಳರ ಕಾಟ ಹೆಚ್ಚಿದ್ದು ಸ್ವಯಂಸೇವಕರ ಹೆಸರಿನಲ್ಲಿ ಹಣ ಸಂಗ್ರಹ ಮಾಡುತ್ತಿರುವುದು ಗಮನಕ್ಕೆ ಬಂದಿದ್ದರಿಂದ ‘ಸೇವೆ’ಗೆ ಜಿಲ್ಲಾಡಳಿತ ನಿಯಂತ್ರಣ ಹೇರಿದೆ. ಆರಂಭದ ಕೆಲವು ದಿನ ಮೃತದೇಹಗಳ ಹುಡುಕಾಟದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮತ್ತು ವೈಯಕ್ತಿಕವಾಗಿ ಕೆಲವರು ತೊಡಗಿಸಿಕೊಂಡಿದ್ದರು. ಈ ನಡುವೆ ಕೆಲವರು ಮೃತದೇಹಗಳಿಂದ ಆಭರಣ ಮತ್ತು ಅಳಿದುಳಿದ ಮನೆಗಳಿಂದ ಹಣ, ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಗಮನಕ್ಕೆ ಬಂದಿದೆ. ಕೆಲವರನ್ನು ಊರವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಪ್ರತಿ ಊರಿನಲ್ಲಿ ಅಪರಿಚಿತರನ್ನು ಕಂಡರೆ ಸ್ಥಳೀಯರೇ ತಡೆದು ನಿಲ್ಲಿಸಿ ಮಾಹಿತಿ ಕೇಳಿ ಕಳುಹಿಸುತ್ತಿದ್ದರು. ಈ ಎಲ್ಲದರಿಂದಾಗಿ ಹೆಸರು ನೊಂದಾಯಿಸಿಕೊಂಡೇ ಸೇವಾಕಾರ್ಯಕ್ಕೆ ಇಳಿಯಲು ವ್ಯವಸ್ಥೆ ಮಾಡಲಾಗಿದೆ.
ಭೂಕುಸಿತದಿಂದ ಸಾವಿಗೀಡಾದವರ ಪೈಕಿ ಗುರುತು ಪತ್ತೆಯಾಗದ ಮೃತದೇಹದ ಅಂತ್ಯಸಂಸ್ಕಾರ ಮಾಡಿದ ಜಾಗದಲ್ಲಿ ಡಿಎನ್‌ಎ ಮಾದರಿಯ ಸಂಖ್ಯೆ ನಮೂದಿಸುತ್ತಿರುವ ಸಿಬ್ಬಂದಿ –ಪ್ರಜಾವಾಣಿ ಚಿತ್ರ–ಫಕ್ರುದ್ದೀನ್‌ ಎಚ್‌.
ಭೂಕುಸಿತದಿಂದ ಸಾವಿಗೀಡಾದವರ ಪೈಕಿ ಗುರುತು ಪತ್ತೆಯಾಗದ ಮೃತದೇಹದ ಅಂತ್ಯಸಂಸ್ಕಾರ ಮಾಡಿದ ಜಾಗದಲ್ಲಿ ಡಿಎನ್‌ಎ ಮಾದರಿಯ ಸಂಖ್ಯೆ ನಮೂದಿಸುತ್ತಿರುವ ಸಿಬ್ಬಂದಿ –ಪ್ರಜಾವಾಣಿ ಚಿತ್ರ–ಫಕ್ರುದ್ದೀನ್‌ ಎಚ್‌.
‘ಡಿಸಾಸ್ಟರ್ ಟೂರಿಸಂ’ಗೆ ನಿಯಂತ್ರಣ
ದುರಂತ ನಡೆದ ಚೂರಲ್‌ಮಲ ಮತ್ತು ಮುಂಡಕ್ಕೈ ಪ್ರದೇಶಗಳನ್ನು ನೋಡಲು ಶನಿವಾರದಿಂದ ಕೆಲವು ಜನರು ಹೋಗಿದ್ದರು. ನೂರಾರು ಜನರು ಪ್ರಾಣ ಕಳೆದುಕೊಂಡ ಮತ್ತು ಬಂಡೆಕಲ್ಲುಗಳು ಉರುಳಿ ಬಿದ್ದ ಜಾಗಗಳಲ್ಲಿ ನಿಂತು ಸೆಲ್ಫಿ ತೆಗೆದು ಸಾಮಾಜಿಕ ತಾಣಗಳಿಗೆ ಅಪ್‌ಲೋಡ್‌ ಮಾಡತೊಡಗಿದ್ದರು. ಭಾನುವಾರ ಈ ಸ್ಥಳಗಳು ‘ಡಿಸಾಸ್ಟರ್ ಟೂರಿಸಂ’ ತಾಣದಂತಾಗಿತ್ತು. ಇದನ್ನು ಮನಗಂಡ ಜಿಲ್ಲಾಡಳಿತ ಅನವಶ್ಯಕವಾಗಿ ಜನರು ಅತ್ತ ಹೋಗದಂತೆ ನಿರ್ಬಂಧ ಹೇರಿದೆ.
ಭೂಕುಸಿತದಿಂದ ಸಾವಿಗೀಡಾದವರ ಪೈಕಿ ಗುರುತು ಪತ್ತೆಯಾಗದ ಮೃತದೇಹಗಳನ್ನು ಸಾಮೂಹಿಕ ಅಂತ್ಯಕ್ರಿಯೆ ತರಲಾಯಿತು –ಪ್ರಜಾವಾಣಿ ಚಿತ್ರ–ಫಕ್ರುದ್ದೀನ್‌ ಎಚ್‌.
ಭೂಕುಸಿತದಿಂದ ಸಾವಿಗೀಡಾದವರ ಪೈಕಿ ಗುರುತು ಪತ್ತೆಯಾಗದ ಮೃತದೇಹಗಳನ್ನು ಸಾಮೂಹಿಕ ಅಂತ್ಯಕ್ರಿಯೆ ತರಲಾಯಿತು –ಪ್ರಜಾವಾಣಿ ಚಿತ್ರ–ಫಕ್ರುದ್ದೀನ್‌ ಎಚ್‌.
ಗುಡ್ಡ ಇಳಿದ ಬುಡಕಟ್ಟು ಜನರು
ದುರಂತದ ನಂತರವೂ ಗುಡ್ಡ ಇಳಿಯಲು ಮತ್ತು ಕಾಡಿನಿಂದ ಹೊರಬರಲು ನಿರಾಕರಿಸಿದ್ದ ಏರಾಟ್ಟುಕುಂಡ್‌ ಭಾಗದ ಬುಡಕಟ್ಟು ಜನರನ್ನು ಕೊನೆಗೂ ಕಾಳಜಿ ಕೇಂದ್ರಗಳಿಗೆ ತಲುಪಿಸಲಾಗಿದ್ದು ಅಟ್ಟಮಲದಲ್ಲಿ ಅವರು ಸುರಕ್ಷಿತರಾಗಿದ್ದಾರೆ. ಈ ಶಿಬಿರದ ಮೇಲುಸ್ತುವಾರಿಯನ್ನು ಪರಿಶಿಷ್ಟ ಪಂಗಡದ ಅಭಿವೃದ್ಧಿ ಇಲಾಖೆಗೆ ವಹಿಸಲಾಗಿದೆ. ಏರಾಟ್ಟುಕುಂಡ್‌ ರಕ್ಷಿತಾರಣ್ಯ ಪ್ರದೇಶದಲ್ಲಿ ಪರಿಶಿಷ್ಟ ಪಂಗಡದ ನಾಲ್ಕು ಕುಟುಂಬಗಳು ಇದ್ದವು. ಸತತ ಪ್ರಯತ್ನದ ನಂತರ ಅವರನ್ನು ಅಟ್ಟಮಲ ಕಾಳಜಿ ಕೇಂದ್ರಕ್ಕೆ ತಲುಪಿಸಲಾಗಿತ್ತು. ಮೇಪ್ಪಾಡಿಯಲ್ಲಿರುವ ಕಾಳಜಿ ಕೇಂದ್ರಗಳಿಗೆ ಬರಲು ಒಪ್ಪದ ಕಾರಣ ಅವರನ್ನು ಅಲ್ಲೇ ಇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT