ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ರಾಜ್ಯಪಾಲರು 3 ವರ್ಷಗಳಿಂದ ಏನು ಮಾಡುತ್ತಿದ್ದರು? ಸುಪ್ರೀಂ ಪ್ರಶ್ನೆ

Published 20 ನವೆಂಬರ್ 2023, 16:30 IST
Last Updated 20 ನವೆಂಬರ್ 2023, 16:30 IST
ಅಕ್ಷರ ಗಾತ್ರ

ನವದೆಹಲಿ: ಅಂಕಿತ ಕೋರಿ ಸಲ್ಲಿಕೆಯಾಗಿದ್ದ ಮಸೂದೆಗಳ ವಿಚಾರವಾಗಿ ತಮಿಳುನಾಡು ರಾಜ್ಯಪಾಲರು ತೋರಿದ ವಿಳಂಬ ಧೋರಣೆಯನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್‌, ‘ಮೂರು ವರ್ಷಗಳಿಂದ ಅವರು ಏನು ಮಾಡುತ್ತಿದ್ದರು’ ಎಂದು ಸೋಮವಾರ ಕೇಳಿದೆ. 

‘ಸಂಬಂಧಪಟ್ಟವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವವರೆಗೆ ರಾಜ್ಯಪಾಲರು ಕಾಯುವುದು ಏಕೆ? ರಾಜ್ಯಪಾಲರು ಮೂರು ವರ್ಷ ಏನು ಮಾಡುತ್ತಿದ್ದರು’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರನ್ನು ಪ್ರಶ್ನೆ ಮಾಡಿದೆ.

ಅರ್ಜಿಯ ವಿಚಾರವಾಗಿ ನೋಟಿಸ್‌ ಜಾರಿಗೆ ಆದೇಶಿಸಿದ ನಂತರದಲ್ಲಿ ಕೆಲವು ಮಸೂದೆಗಳಿಗೆ ‘ಅಂಕಿತ ಹಾಕುವುದನ್ನು ತಡೆಹಿಡಿಯಲಾಗಿದೆ’ ಎಂದು ರಾಜ್ಯಪಾಲರು ತಿಳಿಸಿದ್ದಾರೆ ಎನ್ನುವ ವಿಚಾರವನ್ನು ನ್ಯಾಯಪೀಠದ ಗಮನಕ್ಕೆ ತರಲಾಯಿತು. ಇದಾದ ನಂತರದಲ್ಲಿ ತಮಿಳುನಾಡು ವಿಧಾನಸಭೆಯ ವಿಶೇಷ ಅಧಿವೇಶನ ನಡೆದಿದೆ, ಇದೇ 18ರಂದು ಅವೇ ಮಸೂದೆಗಳಿಗೆ ಮರು ಅನುಮೋದನೆ ನೀಡಲಾಗಿದೆ ಎಂಬ ಮಾಹಿತಿಯನ್ನೂ ಪೀಠಕ್ಕೆ ನೀಡಲಾಯಿತು.

ನೋಟಿಸ್ ಜಾರಿಗೆ ಕೋರ್ಟ್‌ ಆದೇಶಿಸಿದ್ದು ನವೆಂಬರ್ 10ರಂದು. ಆದರೆ ಮಸೂದೆಗಳು 2020ರ ಜನವರಿಯಿಂದಲೂ ಬಾಕಿ ಇವೆ ಎಂದು ಕೋರ್ಟ್ ಹೇಳಿತು. ‘ಅಂದರೆ, ಕೋರ್ಟ್‌ ನೋಟಿಸ್ ಜಾರಿಮಾಡಿದ ನಂತರದಲ್ಲಿ ರಾಜ್ಯಪಾಲರು ಈ ವಿಷಯ ತಿಳಿಸಿದ್ದಾರೆ’ ಎಂದು ಪೀಠ ಹೇಳಿತು.

ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕದಲ್ಲಿ ರಾಜ್ಯಪಾಲರ ಅಧಿಕಾರವನ್ನು ಕಸಿಯುವ ಮಸೂದೆಗಳ ವಿಚಾರದಲ್ಲಿ ಮಾತ್ರ ಸಮಸ್ಯೆ ಇದೆ. ಇದು ಗಂಭೀರ ವಿಚಾರವಾಗಿರುವ ಕಾರಣ ಒಂದಿಷ್ಟು ಮರುಪರಿಶೀಲನೆಯ ಅಗತ್ಯ ಇದೆ ಎಂದು ಅಟಾರ್ನಿ ಜನರಲ್ ಅವರು ವಿವರಿಸಿದರು. ರಾಜ್ಯಪಾಲರು ತಾಂತ್ರಿಕವಾಗಿ ಮೇಲ್ವಿಚಾರಣೆ ನಡೆಸುವ ವ್ಯಕ್ತಿ ಮಾತ್ರವೇ ಅಲ್ಲ ಎಂದರು.

ಈಗ ತಮಿಳುನಾಡಿನ ರಾಜ್ಯಪಾಲರಾಗಿರುವ ಆರ್.ಎನ್. ರವಿ ಅವರು 2021ರ ನವೆಂಬರ್‌ನಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಅಟಾರ್ನಿ ಜನರಲ್ ತಿಳಿಸಿದರು. ಇದಕ್ಕೆ ಉತ್ತರವಾಗಿ ಪೀಠವು, ‘ಯಾವುದೇ ಒಬ್ಬ ರಾಜ್ಯಪಾಲರಿಂದ ಮಸೂದೆಗಳಿಗೆ ಅಂಕಿತ ದೊರೆಯುವುದು ವಿಳಂಬವಾಗಿದೆಯೇ ಎಂಬುದು ಇಲ್ಲಿನ ವಿಷಯ ಅಲ್ಲ. ಬದಲಿಗೆ, ಸಾಂವಿಧಾನಿಕ ಕೆಲಸ ನಿರ್ವಹಿಸುವಲ್ಲಿ ಒಟ್ಟಾರೆಯಾಗಿ ವಿಳಂಬ ಆಗಿದೆಯೇ ಎಂಬುದು ಇಲ್ಲಿನ ಪ್ರಶ್ನೆ’ ಎಂದು ಸ್ಪಷ್ಟಪಡಿಸಿತು.

ಮಸೂದೆಗಳನ್ನು ಅನಿರ್ದಿಷ್ಟ ಅವಧಿಗೆ ತಡೆಹಿಡಿಯಲು ರಾಜ್ಯಪಾಲರಿಗೆ ಅವಕಾಶ ಮಾಡಿಕೊಟ್ಟರೆ, ಆಡಳಿತ ವ್ಯವಸ್ಥೆಗೆ ಪಾರ್ಶ್ವವಾಯು ಬಡಿದಂತೆ ಆಗುತ್ತದೆ, ಇಂಥದ್ದೊಂದು ಅಧಿಕಾರ ರಾಜ್ಯಪಾಲರಿಗೆ ಇರಬೇಕು ಎಂಬುದು ಸಂವಿಧಾನದ ಆಶಯ ಅಲ್ಲ ಎಂದು ಹಿರಿಯ ವಕೀಲ ಪಿ. ವಿಲ್ಸನ್ ವಾದಿಸಿದರು. ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠವು ಡಿಸೆಂಬರ್ 1ಕ್ಕೆ ಮುಂದೂಡಿದೆ.

ನ್ಯಾಯಸಮ್ಮತವಾಗಿ ಆಯ್ಕೆಯಾಗಿರುವ ರಾಜ್ಯ ಸರ್ಕಾರದ ಪಾಲಿಗೆ ರಾಜ್ಯಪಾಲರು ‘ರಾಜಕೀಯ ವಿರೋಧಿ’ಯಂತೆ ವರ್ತಿಸುತ್ತಿದ್ದಾರೆ ಎಂದು ತಮಿಳುನಾಡು ಸರ್ಕಾರವು ತನ್ನ ಅರ್ಜಿಯಲ್ಲಿ ಹೇಳಿದೆ.

ಶಿಕ್ಷೆಗೆ ಗುರಿಯಾದವರನ್ನು ಅವಧಿಗೆ ಮುನ್ನವೇ ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದ 54 ಕಡತಗಳು, ಕಾನೂನು ಕ್ರಮ ಜರುಗಿಸುವುದಕ್ಕೆ ಅನುಮತಿ ಕೋರಿ ಸಲ್ಲಿಸಿರುವ ನಾಲ್ಕು ಕಡತಗಳು ಹಾಗೂ 12 ಮಸೂದೆಗಳು ರಾಜ್ಯಪಾಲರ ಎದುರು ಇವೆ ಎಂದು ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT