ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Trade Mark: ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಪ್ರದರ್ಶನವಾದ BP, IB ವಿಸ್ಕಿ ಬಾಟಲಿ

Published 6 ಜನವರಿ 2024, 10:35 IST
Last Updated 6 ಜನವರಿ 2024, 11:00 IST
ಅಕ್ಷರ ಗಾತ್ರ

ನವದೆಹಲಿ: ವಿಸ್ಕಿ ಬ್ರಾಂಡ್‌ಗಳ ಟ್ರೇಡ್‌ಮಾರ್ಕ್ ಉಲ್ಲಂಘನೆ ಪ್ರಕರಣವೊಂದು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದು, ಇದಕ್ಕೆ ಸಂಬಂಧಿಸಿದ ಮದ್ಯದ ಬಾಟಲಿಗಳನ್ನು ದೇಶದ ಅತ್ಯುನ್ನತ ನ್ಯಾಯ ಸಂಸ್ಥೆಯಲ್ಲಿ ಪ್ರದರ್ಶಿಸಿದ ಅಪರೂಪದ ಘಟನೆ ನಡೆದಿದೆ.

ಪೆರ್ನಾಡ್ ರಿಕಾರ್ಡ್‌ ಇಂಡಿಯಾ ಕಂಪನಿಯು ತಯಾರಿಸುವ ಬ್ಲೆಂಡರ್ಸ್‌ ಪ್ರೈಡ್‌ (ಬಿ.ಪಿ.), ಇಂಪೀರಿಯಲ್ ಬ್ಲೂ (ಐ.ಬಿ.) ವಿಸ್ಕಿಗಳ ಟ್ರೇಡ್‌ ಮಾರ್ಕ್‌ನಲ್ಲಿ ಮಧ್ಯಪ್ರದೇಶದ ಜೆ.ಕೆ.ಎಂಟರ್‌ಪ್ರೈಸಸ್‌ ಕಂಪನಿಯು ತನ್ನ ವಿಸ್ಕಿಯನ್ನು ಮಾರಾಟ ಮಾಡುತ್ತಿದೆ ಎಂಬ ಚರ್ಚೆ ಈಗ ಇಂದೋರ್‌ನಿಂದ ನವದೆಹಲಿಯಲ್ಲಿರುವ ಸುಪ್ರೀಂ ಕೋರ್ಟ್ ಅಂಗಳಕ್ಕೆ ಬಂದಿಳಿದಿದೆ.

ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠ ನಡೆಸಿತು. ಈ ಪೀಠದಲ್ಲಿ ನ್ಯಾ. ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾ ಇದ್ದರು.

ಟ್ರೇಡ್‌ ಮಾರ್ಕ್ ಕಾಯ್ದೆ ಉಲ್ಲಂಘಿಸಿರುವ ಕುರಿತು ಇಂದೋರ್‌ನ ವಾಣಿಜ್ಯ ನ್ಯಾಯಾಲಯ ನೀಡಿದ ಆದೇಶಕ್ಕೆ ತಡೆಯಾಜ್ಞೆ ನೀಡಲು ಪೆರ್ನಾಡ್ ರಿಕಾರ್ಡ್‌ ಇಂಡಿಯಾ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು. ಬ್ಲೆಂಡರ್ಸ್‌ ಪ್ರೈಡ್ ಮತ್ತು ಇಂಪೀರಿಯಲ್ ಬ್ಲೂ ಉತ್ಪನ್ನಗಳ ಹೆಸರುಗಳನ್ನು ಪೆರ್ನಾಡ್ ರಿಕಾರ್ಡ್‌ ಇಂಡಿಯಾ ಕಂಪನಿ ನೋಂದಾಯಿಸಿಕೊಂಡಿದೆ. ಇದೇ ರೀತಿ ಸಿಗ್ರಾಮ್ಸ್‌ ಎಂಬುದೂ ತಮ್ಮದೇ ಮಾತೃ ಸಂಸ್ಥೆಯಾಗಿದ್ದು, ಅದರ ಹೆಸರು ಕಂಪನಿ ಮಾರಾಟ ಮಾಡುವ ಉತ್ಪನ್ನಗಳ ಮೇಲೆ ನಮೂದಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಕಂಪನಿ ಹೇಳಿತ್ತು.

ಆದರೆ, ಈ ನಡುವೆ ಜೆ.ಕೆ. ಎಂಟರ್‌ಪ್ರೈಸಸ್‌ ಎಂಬ ಕಂಪನಿಯು ನಾವು ಪಡೆದ ಟ್ರೇಡ್‌ ಮಾರ್ಕ್‌ನ ಉತ್ಪನ್ನಗಳ ಹೆಸರಿನಲ್ಲಿ ಅವರು ತಯಾರಿಸುವ ವಿಸ್ಕಿಯನ್ನು ಮಾರಾಟ ಮಾಡುತ್ತಿದೆ. ಆದರೆ ಅದನ್ನು ಮಾರಾಟ ಮಾಡಲು ‘ಲಂಡನ್‌ ಪ್ರೈಡ್‌’ ಎಂಬ ಟ್ರೇಡ್ ಮಾರ್ಕ್ ಪಡೆದಿದೆ ಎಂದು ಆರೋಪಿಸಿದೆ.

ಆದರೆ ಈ ಆರೋಪವನ್ನು ಮಧ್ಯಪ್ರದೇಶ ಹೈಕೋರ್ಟ್ ತಳ್ಳಿಹಾಕಿತ್ತು. ಕೆಳ ಹಂತದ ನ್ಯಾಯಾಲಯವು ತನ್ನ ಆದೇಶದಲ್ಲಿ ಯಾವುದೇ ಲೋಪ ಮಾಡಿಲ್ಲ. ಪೆರ್ನಾಡ್ ರಿಕಾರ್ಡ್‌ ಕಂಪನಿಯ ಉತ್ಪನ್ನಗಳ ಟ್ರೇಡ್ ಮಾರ್ಕ್‌ಗಳನ್ನು ಜೆ.ಕೆ.ಎಂಟರ್‌ಪ್ರೈಸಸ್‌ ಉಲ್ಲಂಘಿಸಿದ್ದು ಕಂಡುಬಂದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಅರ್ಜಿಯ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್‌ ಎದುರು ಹಿರಿಯ ವಕೀಲ ಮುಕುಲ್ ರೊಹಟಗಿ ಅವರು ಪೆರ್ನಾಡ್ ರಿಕಾರ್ಡ್‌ ತಯಾರಿಸಿದ ಮದ್ಯದ ಬಾಟಲಿಗಳನ್ನು ಪೀಠದ ಮುಂದಿಟ್ಟರು. ಎರಡೂ ಬಾಟಲಿಗಳು ಒಂದೇ ರೀತಿಯಾಗಿವೆ. 1995ರಿಂದ ಬ್ಲೆಂಡರ್ಸ್‌ ಪ್ರೈಡ್‌ ಎಂಬ ಉತ್ಪನ್ನವನ್ನು ತಯಾರಿಸುತ್ತಿದ್ದು, ಇದು ಕಂಪನಿಯ ಅತ್ಯಂತ ಪ್ರಮುಖ ಉತ್ಪನ್ನ ಹಾಗೂ ಹೆಸರಾಗಿದೆ ಎಂದು ಪೀಠಕ್ಕೆ ತಿಳಿಸಿದರು.

1997ರಿಂದ ಇಂಪೀರಿಯಲ್ ಬ್ಲೂ ಎಂಬ ಮತ್ತೊಂದು ವಿಸ್ಕಿಯನ್ನು ಕಂಪನಿ ಪರಿಚಯಿಸಿದೆ. ಈ ಎರಡೂ ವಿಸ್ಕಿಗಳನ್ನು ಕಂಪನಿಯು ಒಂದೇ ರೀತಿಯ ಲೇಬಲ್‌, ಪ್ಯಾಕಿಂಗ್ ಮತ್ತು ಟ್ರೇಡ್‌ ಡ್ರೆಸ್‌ ಮೂಲಕ ಮಾರಾಟ ಮಾಡುತ್ತಿದೆ. ಆದರೆ ಜೆ.ಕೆ. ಎಂಟರ್‌ಪ್ರೈಸಸ್‌ ಕಂಪನಿಯು, ತನ್ನ ಲಂಡನ್‌ ಪ್ರೈಡ್ ಉತ್ಪನ್ನವನ್ನು ಬ್ಲೆಂಡರ್ಸ್ ಪ್ರೈಡ್‌ ಮತ್ತು ಇಂಪೀರಿಯಲ್ ಬ್ಲೂ ಟ್ರೇಡ್‌ ಮಾರ್ಕ್‌ಗೆ ಹೋಲುವಂತೆಯೇ ಸಿದ್ಧಪಡಿಸಿ ಮಾರಾಟ ಮಾಡುತ್ತಿದೆ. ಇದನ್ನು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ ಎಂದು ಪೀಠದ ಗಮನಕ್ಕೆ ತಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎದುರುಗಾರ ಪರ ವಕೀಲರು, ‘ಲಂಡನ್‌ ಪ್ರೈಡ್ ಎಂಬ ಹೆಸರಿನಡಿ ಕಂಪನಿಯು ಮಧ್ಯಪ್ರದೇಶದಲ್ಲಿ ತಾನು ತಯಾರಿಸಿದ ವಿಸ್ಕಿ ಮಾರಾಟ ಮಾಡುತ್ತಿದೆ. ಇದರ ಹೆಸರು, ಸಂಯೋಜನೆ ಮತ್ತು ಅದರ ಸ್ವರೂಪ ಸಂಪೂರ್ಣ ಭಿನ್ನವಾಗಿದೆ. ಆದರೆ ಎರಡು ಪ್ರತ್ಯೇಕ ಉತ್ಪನ್ನಗಳು ಭಿನ್ನವಾಗಿದ್ದು, ಗ್ರಾಹಕರು ಖರೀದಿ ಸಮಯದಲ್ಲಿ ಇವುಗಳ ನಡುವಿನ ವ್ಯತ್ಯಾಸ ಸುಲಭವಾಗಿ ಗ್ರಹಿಸಬಹುದಾಗಿದೆ’ ಎಂದು ಪೀಠಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT