ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರೂಣ ಲಿಂಗ ಪತ್ತೆ ಮೂಲಕ ಹೆಣ್ಣು ಮಗುವಿನ ರಕ್ಷಣೆ ಮಾಡಬಾರದೇಕೆ? ಡಾ.ಅಶೋಕನ್‌

ಭಾರತೀಯ ವೈದ್ಯಕೀಯ ಸಂಸ್ಥೆ ಅಧ್ಯಕ್ಷ ಅಶೋಕನ್‌ ಪ್ರಶ್ನೆ
Published 30 ಏಪ್ರಿಲ್ 2024, 15:32 IST
Last Updated 30 ಏಪ್ರಿಲ್ 2024, 15:32 IST
ಅಕ್ಷರ ಗಾತ್ರ

ನವದೆಹಲಿ: ‘ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ (ಲಿಂಗ ಆಯ್ಕೆ ನಿಷೇಧ) ಕಾಯ್ದೆ (ಪಿಸಿ–ಪಿಎನ್‌ಡಿಟಿ ಆ್ಯಕ್ಟ್) ಪರಿಷ್ಕರಿಸುವ ಕುರಿತಂತೆ ದಾಖಲೆಪತ್ರಯೊಂದನ್ನು ಸಂಸ್ಥೆ ಸಿದ್ಧಪಡಿಸುತ್ತಿದೆ. ಭ್ರೂಣದ ಲಿಂಗ ಪತ್ತೆ ಮಾಡಿ, ಆ ಮೂಲಕ ಹೆಣ್ಣು ಮಗುವಿನ ರಕ್ಷಣೆ ಮಾಡಬಾರದೇಕೆ? ಎಂಬ ಸಲಹೆಯನ್ನು ಈ ದಾಖಲೆಪತ್ರ ಒಳಗೊಂಡಿರಲಿದೆ’ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ) ಅಧ್ಯಕ್ಷ ಡಾ.ಆರ್‌.ವಿ.ಅಶೋಕನ್‌ ಹೇಳಿದ್ದಾರೆ.

‘ಈಗಿರುವ ಕಾಯ್ದೆಯು ಭ್ರೂಣ ಲಿಂಗ ಪತ್ತೆಗಾಗಿ ಪ್ರಸವಪೂರ್ವ ಪತ್ತೆ ತಂತ್ರವಿಧಾನಗಳನ್ನು ಬಳಸುವುದನ್ನು ನಿಷೇಧಿಸುತ್ತದೆ. ಲಿಂಗ ಪತ್ತೆ ನಡೆದಲ್ಲಿ ಅದಕ್ಕೆ ವೈದ್ಯರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಹೀಗಾಗಿ, ಭ್ರೂಣದ ಲಿಂಗ ಪತ್ತೆ ಮಾಡಿ, ಆ ಮೂಲಕ ಹೆಣ್ಣು ಮಗುವಿನ ರಕ್ಷಣೆ ಮಾಡಬಾರದೇಕೆ’ ಎಂಬ ಪ್ರಶ್ನೆಯನ್ನು ಡಾ.ಅಶೋಕನ್‌ ಮುಂದಿಟ್ಟಿದ್ದಾರೆ. 

ಪಿಟಿಐ ಸಂಪಾದಕರ ಜೊತೆಗೆ ನಡೆಸಿದ ಸಂವಾದದಲ್ಲಿ ಈ ವಿಷಯ ಕುರಿತು ಮಾತನಾಡಿರುವ ಅವರು, ‘ಒಂದು ಸಾಮಾಜಿಕ ಅನಿಷ್ಟ  ವೈದ್ಯಕೀಯ ಪರಿಹಾರ ಇರಲು ಸಾಧ್ಯವಿಲ್ಲ’ ಎಂದೂ  ಪ್ರತಿಪಾದಿಸಿದ್ದಾರೆ.

‘ಲಿಂಗ ಪತ್ತೆಯನ್ನು ನಿಷೇಧಿಸುವ ಕಾನೂನಿನ ಮೂಲಕ ಹೆಣ್ಣು ಭ್ರೂಣಹತ್ಯೆಯನ್ನು ತಡೆಗಟ್ಟಬಹುದು. ಆದರೆ, ಹೆಣ್ಣು ಶಿಶುಗಳ ಹತ್ಯೆ ನಡೆಯುತ್ತದೆ. ಈ ಸಾಮಾಜಿಕ ಅನಿಷ್ಟಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಏನಾಗುತ್ತದೆ ಗೊತ್ತೇ? ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣಕ್ಕೆ ಬಂದರೂ ಹೆಣ್ಣು ಶಿಶುಗಳ ಹತ್ಯೆ ಮುಂದುವರಿಯುತ್ತದೆ’ ಎಂದು ಅವರು ವಿವರಿಸಿದ್ದಾರೆ. 

‘ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವ ಕಾರ್ಯದಲ್ಲಿ ನಾವೂ ಭಾಗೀದಾರರು. ಆದರೆ, ಈ ವಿಚಾರವಾಗಿ ಪಿಸಿ–ಪಿಎನ್‌ಡಿಟಿ ಕಾಯ್ದೆ ಅಡಿ ಅನುಸರಿತ್ತಿರುವ ಕಾರ್ಯವಿಧಾನವನ್ನು ನಾವು ಒಪ್ಪುವುದಿಲ್ಲ. ಕಾಯ್ದೆಯಲ್ಲಿ ಹೇಳಿರುವ ಕಾರ್ಯವಿಧಾನದಿಂದ ವೈದ್ಯರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ’ ಎಂದಿದ್ದಾರೆ. 

‘ಈ ಕಾಯ್ದೆಯನ್ನು ಪರಿಷ್ಕರಣೆ ಮಾಡಬೇಕು ಎಂಬುದು ವೈದ್ಯರ ಬಹುದಿನಗಳ ಬೇಡಿಕೆಯಾಗಿದೆ. ಯಾವುದಾದರೂ ಒಂದು ಕಾನೂನನ್ನು ತೆಗೆದುಹಾಕಬೇಕು ಎಂದಾದಲ್ಲಿ, ಅದು ಪಿಸಿ–ಪಿಎನ್‌ಡಿಟಿ ಕಾಯ್ದೆಯಾಗಿದೆ’ ಎಂದು ಡಾ.ಅಶೋಕನ್‌ ಹೇಳಿದ್ದಾರೆ.

ಪಿಸಿ–ಪಿಎನ್‌ಡಿಟಿ ಕಾಯ್ದೆ ಸಮರ್ಪಕವಾಗಿಲ್ಲ. ಇದು ದೂರದೃಷ್ಟಿರಹಿತ ಹಾಗೂ ಎನ್‌ಜಿಒಗಳು ರೂಪಿಸಿರುವ ಕಾಯ್ದೆಯಾಗಿದೆ
ಡಾ.ಆರ್‌.ವಿ.ಅಶೋಕನ್ ಅಧ್ಯಕ್ಷ ಐಎಂಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT