ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ ಆಸ್ತಿಯಲ್ಲಿ ಪತ್ನಿಗೂ ಸಮಪಾಲು: ಮದ್ರಾಸ್‌ ಹೈಕೋರ್ಟ್‌ ಪ್ರತಿಪಾದನೆ

Published 26 ಜೂನ್ 2023, 15:42 IST
Last Updated 26 ಜೂನ್ 2023, 15:42 IST
ಅಕ್ಷರ ಗಾತ್ರ

ಚೆನ್ನೈ: ಗಂಡನ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿಗೂ ಸಮಪಾಲಿದೆ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ. ಕುಟುಂಬದ ನಿರ್ವಹಣೆಯಲ್ಲಿ ಹಲವು ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವ ಪತ್ನಿಯ ಸಾಮರ್ಥ್ಯವನ್ನು ಪತಿಯ ಎಂಟು ಗಂಟೆಯ ದುಡಿಮೆಯೊಂದಿಗೆ ಹೋಲಿಕೆ ಮಾಡಲಾಗದು ಎಂದು ನ್ಯಾಯಾಲಯವು ಪ್ರತಿಪಾದಿಸಿದೆ.

ದಂಪತಿಯ ಆಸ್ತಿ ವಿವಾದದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣನ್ ರಾಮಸಾಮಿ ಅವರು, ಗೃಹಿಣಿಯು ನೇರವಾಗಿ ಆರ್ಥಿಕ ಕೊಡುಗೆ ನೀಡಬೇಕಾಗಿಲ್ಲ. ಆದರೆ, ಪ್ರತಿದಿನವೂ ಮಕ್ಕಳ ಪಾಲನೆ, ಅಡುಗೆ ತಯಾರಿಕೆ, ಮನೆಯ ಸ್ವಚ್ಛತೆ ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾಳೆ. ಕುಟುಂಬದ ಮುಖ್ಯಸ್ಥನ ಕೆಲಸಕ್ಕೆ ಯಾವುದೇ ತೊಡಕು ಎದುರಾಗದಂತೆ ಕೆಲಸ ನಿಭಾಯಿಸುತ್ತಾಳೆ. ಕುಟುಂಬ ಮತ್ತು ಮಕ್ಕಳಿಗಾಗಿ ತನ್ನ ಕನಸುಗಳನ್ನು ಬದಿಗೊತ್ತಿ ಸಮಯ ಮೀಸಲಿಡುತ್ತಾಳೆ ಎಂದು ಹೇಳಿದರು.

ಮದುವೆ ಬಳಿಕ ಹೆಂಡತಿಯೇ ಮಕ್ಕಳ ಪೋಷಣೆ ಮಾಡಬೇಕೆಂದು ಕುಟುಂಬದವರು ಅಪೇಕ್ಷಿಸುತ್ತಾರೆ. ಗಂಡನ ದುಡಿಮೆ ಹಿಂದೆ ಅವಳ ತ್ಯಾಗವೂ ಅಡಗಿದೆ. ಹಾಗಾಗಿ, ಆತನ ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹಳಾಗುತ್ತಾಳೆ ಎಂದು ಹೈಕೋರ್ಟ್‌ ಹೇಳಿದೆ.

ಆಕೆ ಸುಲಲಿತವಾಗಿ ಈ ಕಾರ್ಯಗಳನ್ನು ನಿಭಾಯಿಸುವುದರಿಂದಲೇ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನೆಲೆಸುತ್ತದೆ. ಆಕೆಯ ಈ ಸೇವೆಯನ್ನು ಮೌಲ್ಯರಹಿತವೆಂದು ಹೇಳಲಾಗದು. ದಿನದ 24 ಗಂಟೆ ಕಾಲ ರಜೆಯೇ ಇಲ್ಲದೆ ದುಡಿಯುವ ಅವಳ ಸೇವೆಯು ಎಂಟು ಗಂಟೆ ಕಾಲ ದುಡಿಯುವ ಪತಿಯ ಕೆಲಸಕ್ಕಿಂತ ಕಡಿಮೆ ಅಲ್ಲ ಎಂದು ಹೇಳಿದೆ.

ಗಂಡ ಮತ್ತು ಹೆಂಡತಿಯನ್ನು ಕೌಟುಂಬಿಕ ರಥದ ಎರಡು ಚಕ್ರಗಳಂತೆ ನೋಡಬೇಕು. ಕುಟುಂಬದ ಶ್ರೇಯೋಭಿವೃದ್ಧಿಯಲ್ಲಿ ಪತಿಯ ದುಡಿಮೆ ಮತ್ತು ಪತ್ನಿಯ ಸೇವೆಯನ್ನು ಪ್ರತ್ಯೇಕಿಸಬಾರದು. ಆಸ್ತಿಯನ್ನು ಗಂಡನ ಹೆಸರಿನಲ್ಲಿ ಖರೀದಿಸಲಾಗಿದೆಯೇ ಅಥವಾ ಹೆಂಡತಿಯ ಹೆಸರಿನಲ್ಲಿ ಖರೀದಿಸಲಾಗಿದೆಯೇ ಎಂಬುದು ಮುಖ್ಯವಲ್ಲ. ಆಸ್ತಿ ಖರೀದಿಗಾಗಿ ಹಣ ಉಳಿತಾಯ ಮಾಡಿದ್ದರಲ್ಲಿ ಇಬ್ಬರ ಶ್ರಮವೂ ಇದೆ. ಹಾಗಾಗಿ, ಆಸ್ತಿಯಲ್ಲಿ ಇಬ್ಬರಿಗೂ ಸಮಾನ ಪಾಲಿದೆ ಎಂದು ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT