ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಬಿಆರ್‌ಎಸ್ ನಾಯಕಿ ಕೆ.ಕವಿತಾ, ನ್ಯಾಯಕ್ಕಾಗಿ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಯಾಗಿದ್ದ ಕವಿತಾ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದ್ದು, ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದರು.
ಬಿಡುಗಡೆಯಾದ ಒಂದು ದಿನದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ನ್ಯಾಯಕ್ಕೆ ಜಯವಿದೆ ಎಂದು ನಾನು ನಂಬಿದ್ದೇನೆ. ನಮ್ಮ ಕಾನೂನು ಹೋರಾಟ ಮುಂದುವರಿಯಲಿದೆ. ಸ್ಥೈರ್ಯ ಕಳೆದುಕೊಳ್ಳುವುದಿಲ್ಲ’ ಎಂದರು.
ತಮ್ಮ ವಿರುದ್ಧದ ಆರೋಪಗಳಿಗೆ ನ್ಯಾಯಾಲಯದಲ್ಲಿ ಸವಾಲು ಹಾಕುವುದಾಗಿಯೂ ಇದೇ ವೇಳೆ ಅವರು ಹೇಳಿದರು.