ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ನಮನ: ರಾಜಕೀಯ ಕುಸ್ತಿ ಕಣದ ಪೈಲ್ವಾನ್‌

Last Updated 10 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

‘ನಾನು ಅಖಾಡ ಬದಲಿಸಿದ್ದೇನೆ, ಕುಸ್ತಿಯನ್ನು ಬಿಟ್ಟಿಲ್ಲ’. 2021ರಲ್ಲಿ ಬಿಡುಗಡೆಯಾಗಿದ್ದ ‘ಮೇ ಮುಲಾಯಂ ಸಿಂಗ್‌ ಯಾದವ್’ ಚಲನಚಿತ್ರದ ಸಂಭಾಷಣೆ ಇದು. 1960ರ ದಶಕದಲ್ಲಿ ಮುಲಾಯಂ ಸಿಂಗ್‌ ಯಾದವ್ ರಾಜಕೀಯಕ್ಕೆ ಧುಮುಕಬೇಕು ಎಂಬ ತಮ್ಮ ನಿರ್ಧಾರವನ್ನು ಮನೆಯಲ್ಲಿ ಹೇಳಿದಾಗ, ಅವರ ತಮ್ಮ ಶಿವಪಾಲ್‌ ಯಾದವ್ ಆ ನಿರ್ಧಾರವನ್ನು ಪ್ರಶ್ನಿಸುತ್ತಾರೆ. ಆಗ ಮುಲಾಯಂ ಸಿಂಗ್‌ ಯಾದವ್ ಪಾತ್ರಧಾರಿ ಹೇಳುವ ಮಾತಿದು.

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಈ ಚಿತ್ರವನ್ನು ನಿರ್ಮಿಸಲಾಗಿತ್ತು. ಸಮಾಜವಾದಿ ಪಕ್ಷವೂ ಭಾರಿ ತಯಾರಿಯೊಂದಿಗೆ ಕಣಕ್ಕೆ ಇಳಿದಿತ್ತು. ಆದರೆ ಚಿತ್ರವಾಗಲೀ, ಪ್ರಚಾರವಾ
ಗಲೀ ಪಕ್ಷದ ನೆರವಿಗೆ ಬರಲಿಲ್ಲ. ಪಕ್ಷವು ಸತತವಾಗಿ ಎರಡನೇ ಬಾರಿ ಹೀನಾಯವಾಗಿ ಸೋತಿತು. ಪಕ್ಷವು ಈ ರೀತಿ ಸೋತಿದ್ದು ಇದೇ ಮೊದಲಲ್ಲ. ಇದೇ ಮಾತು ಮುಲಾಯಂ ಸಿಂಗ್‌ ಅವರಿಗೂ ಅನ್ವಯವಾಗುತ್ತದೆ.

ಮುಲಾಯಂ ಅವರು ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರೂ, ಒಂದು ಬಾರಿಯೂ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅವರ ರಾಜಕೀಯ ಸಿದ್ಧಾಂತ ಮತ್ತು ರಾಜಕೀಯ ನಿಲುವು ಅವರ ಕುರ್ಚಿಯನ್ನು ಹಲವು ಬಾರಿ ಕಸಿದುಕೊಂಡಿದೆ.

1967ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದ ಮುಲಾಯಂ ಆನಂತರದ 22 ವರ್ಷ ಬಳಿಕ (1989ರಲ್ಲಿ) ಮುಖ್ಯಮಂತ್ರಿ ಹುದ್ದೆಗೆ ಏರಿದ್ದರು. 1989ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ದಳ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್‌ ಅನ್ನು ಅಧಿಕಾರದಿಂದ ದೂರ ಇಡುವ ಒಂದೇ ಉದ್ದೇಶದಿಂದ ಜನತಾ ದಳಕ್ಕೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ಅದೇ ಸಂದರ್ಭದಲ್ಲಿ ಎಲ್‌.ಕೆ.ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿಯು ರಥಯಾತ್ರೆ ಆರಂಭಿಸಿತ್ತು. ಬಾಬರಿ ಮಸೀದಿ ಜಾಗದಲ್ಲಿ ರಾಮಮಂದಿರ ನಿರ್ಮಿಸಬೇಕು ಎಂದು ಬಿಜೆಪಿ ಈ ರಥಯಾತ್ರೆ ಆಯೋಜಿಸಿತ್ತು. ಈ ರಥಯಾತ್ರೆ ಮತ್ತು ಬೇಡಿಕೆ ಎರಡನ್ನೂ ಮುಲಾಯಂ ವಿರೋಧಿಸಿದ್ದರು.

1990ರ ಅಕ್ಟೋಬರ್ ಕೊನೆಯ ವಾರ. ನೂರಾರು ಕರಸೇವಕರು ಬಾಬರಿ ಮಸೀದಿಗೆ ನುಗ್ಗಿ, ಗುಮ್ಮಟದ ಮೇಲೆ ಕೇಸರಿ ಧ್ವಜ ಹಾರಿಸಿದರು. ಪರಿಸ್ಥಿತಿ ಕೈಮೀರಿದ ಕಾರಣ ಪೊಲೀಸರು ಗುಂಡು ಹಾರಿಸಿದರು. ಕರಸೇವಕರು ಚದುರಿದರು. ನವೆಂಬರ್ 2ರಂದು ಕರಸೇವಕರು ಎರಡನೇ ಬಾರಿ ಮಸೀದಿಯತ್ತ ನುಗ್ಗಿದ್ದರು. ಮುಲಾಯಂ ಅವರ ಆದೇಶದ ಮೇರೆಗೆ ಪೊಲೀಸರು ಮತ್ತೆ ಗುಂಡು ಹಾರಿಸಿದರು. 20ಕ್ಕೂ ಹೆಚ್ಚು ಜನರು ಮೃತಪಟ್ಟರು. ಮುಲಾಯಂ ಸರ್ಕಾರಕ್ಕೆ ನೀಡಿದ್ದ ಬಾಹ್ಯ ಬೆಂಬಲವನ್ನು ಬಿಜೆಪಿ ವಾಪಸ್ ಪಡೆಯಿತು.ಮುಲಾಯಂ ಅವರನ್ನು ‘ಮೌಲಾನಾ ಮುಲಾಯಂ’ ಎಂದು ಜರೆಯಿತು. ಸರ್ಕಾರಕ್ಕೆ ಕಾಂಗ್ರೆಸ್‌ ಬೆಂಬಲ ಘೋಷಿಸಿತು. ಆದರೆ 1991ರಲ್ಲಿ ಸರ್ಕಾರ ಉರುಳಿಬಿತ್ತು.

1992ರಲ್ಲಿ ಸಮಾಜವಾದಿ ಪಕ್ಷವನ್ನು ಮುಲಾಯಂ ಸ್ಥಾಪಿಸಿದರು. 1992ರಲ್ಲಿ ಬಾಬರಿ ಮಸೀದಿ ಧ್ವಂಸವಾದ ನಂತರ, ಮುಸ್ಲಿಮರು ಮುಲಾಯಂ ಅವರ ಸಮಾಜವಾದಿ ಪಕ್ಷದತ್ತ ಹೊರಳಿದರು. 1993ರ ಚುನಾವಣೆಯಲ್ಲಿ ಯಾದವರು ಮತ್ತು ಮುಸ್ಲಿ
ಮರು ಮುಲಾಯಂ ಅವರಿಗೆ ಮತ ನೀಡಿದರು. ಬಿಎಸ್‌ಪಿ, ಮುಲಾಯಂಗೆ ಬೆಂಬಲ ಘೋಷಿಸಿತ್ತು. 1995ರಲ್ಲಿ ಬಿಎಸ್‌ಪಿ ಬೆಂಬಲ ವಾಪಸ್‌ ಪಡೆದ ಕಾರಣ ಮುಲಾಯಂ ಅವರ ಸರ್ಕಾರ ಬಿತ್ತು.

ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಮುಲಾಯಂ ಸಂಸತ್ತಿಗೂ ಹೋದರು. ಅದಕ್ಕೂ ಮುನ್ನ ಮುಲಾಯಂ ಅವರು ಸೋನಿಯಾ ನಾಯಕತ್ವ ವಿರೋಧಿಸಿ, ವಿದೇಶಿ ಮಹಿಳೆ ಎಂದು ಜರೆದಿದ್ದರು. 1996ರಲ್ಲಿ ಮುಲಾಯಂ ಅವರು ಸಂಯುಕ್ತ ರಂಗ ನೇತೃತ್ವದ ಸರ್ಕಾರದ ಪ್ರಧಾನಿಯಾಗುವ ಸಾಧ್ಯತೆ ಅತ್ಯಧಿಕವಾಗಿತ್ತು. ಆದರೆ, ಸೋನಿಯಾ ಅವರನ್ನು ಜರೆದಿದ್ದ ಕಾರಣಕ್ಕೆ ಆ ಅವಕಾಶವನ್ನು ಮುಲಾಯಂ ಕಳೆದುಕೊಂಡರು ಎಂದು ಆಗ ಹೇಳಲಾಗಿತ್ತು.

2002ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಸರ್ಕಾರ ರಚಿಸಿದ್ದು ಬಿಎಸ್‌ಪಿ–ಬಿಜೆಪಿ. ಒಂದೇ ವರ್ಷದಲ್ಲಿ ಆ ಸರ್ಕಾರ ಬಿತ್ತು. 2003ರಲ್ಲಿ ಬಿಎಸ್‌ಪಿ ಬೆಂಬಲದೊಂದಿಗೆ ಮುಲಾಯಂ ಮತ್ತೆ ಸರ್ಕಾರ ರಚಿಸಿದರು.

ಮುಲಾಯಂ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭಾಗವಾಗಿದ್ದರೂ, ಸರ್ಕಾರದ ಹಲವು ನೀತಿಗಳನ್ನು ಮುಲಾಯಂ ವಿರೋಧಿಸುತ್ತಾ ಬಂದಿದ್ದರು. 2012ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಪೂರ್ಣ ಬಹುಮತ ಪಡೆದು, ಸರ್ಕಾರ ರಚಿಸಿತು. ಆದರೆ ಮುಖ್ಯಮಂತ್ರಿಯಾಗಿದ್ದು, ಮುಲಾಂಯ ಅವರ ಮಗ ಅಖಿಲೇಶ್ ಯಾದವ್.

‘1990ರಲ್ಲಿ ಕರಸೇವಕರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದು ಯಾರು?’ ಎಂದು ಬಿಜೆಪಿ ಇಂದಿಗೂ ಮುಲಾಯಂ ಅವರನ್ನು ಟೀಕಿಸುತ್ತದೆ. ಆದರೆ ಮುಲಾಯಂ ಮಾತ್ರ ತಮ್ಮ ನಿರ್ಧಾರ ಸರಿ ಎಂದೇ ಪ್ರತಿಪಾದಿಸಿದ್ದರು.
ಈ ಬಗ್ಗೆ ಪತ್ರರ್ತರೊಬ್ಬರು ಕೇಳಿದ್ದ ಪ್ರಶ್ನೆಗೆ ಮುಲಾಯಂ, ‘ನನ್ನ ನಿರ್ಧಾರ ಸರಿಯಾಗಿತ್ತು. ಆ ನಿರ್ಧಾರದಿಂದ ಬಹಳ ನೋವೂ ಆಗಿದೆ. ಆದರೆ, ದೇಶದ ಹಿತಾಸಕ್ತಿಗಾಗಿ ನಾನು ಆ ನಿರ್ಧಾರ ತೆಗೆದುಕೊಂಡೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT