ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದ ಬಡ ಜನರಿಂದ ಲೂಟಿ ಮಾಡಿದ ಹಣ ವಾಪಸ್‌ಗೆ ಯತ್ನ: ಪ್ರಧಾನಿ ಮೋದಿ

ಬಿಜೆಪಿ ಅಭ್ಯರ್ಥಿ ಅಮೃತಾ ರಾಯ್‌ ಜತೆ ದೂರವಾಣಿ ಸಂಭಾಷಣೆ ನಡೆಸಿದ ಪ್ರಧಾನಿ
Published 27 ಮಾರ್ಚ್ 2024, 13:02 IST
Last Updated 27 ಮಾರ್ಚ್ 2024, 13:02 IST
ಅಕ್ಷರ ಗಾತ್ರ

ನವದೆಹಲಿ/ಕೋಲ್ಕತ್ತ: ಪಶ್ಚಿಮ ಬಂಗಾಳದ ಬಡ ಜನರಿಂದ ಲೂಟಿ ಮಾಡಲಾದ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿರುವ ಸುಮಾರು ₹3,000 ಕೋಟಿಯನ್ನು ಆ ಜನರಿಗೆ ಹಿಂತಿರುಗಿಸಲು ತಾನು ಕೆಲಸ ಮಾಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ಕೃಷ್ಣನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ರಾಜಮನೆತನದವರಾದ ಅಮೃತಾ ರಾಯ್‌ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಮೋದಿ ಅವರು, ವಿರೋಧ ಪಕ್ಷಗಳಿಗೆ ಅಧಿಕಾರ ಮುಖ್ಯವಾಗಿದೆಯೇ ಹೊರತು, ದೇಶವಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಕೃಷ್ಣನಗರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಮಹುವಾ ಮೊಯಿತ್ರಾ ಸ್ಪರ್ಧಿಸಲಿದ್ದಾರೆ.

‘ಬಡವರಿಂದ ಲೂಟಿ ಮಾಡಿದ ಹಣ ಅವರಿಗೆ ಹಿಂತಿರುಗಿಸಬೇಕು. ಭ್ರಷ್ಟರಿಂದ ಇ.ಡಿ ಜಪ್ತಿ ಮಾಡಿರುವ ಆಸ್ತಿ ಮತ್ತು ಹಣ ಬಡಜನರಿಗೆ ಹಿಂತಿಗುವುದನ್ನು ಖಚಿತಪಡಿಸಿಕೊಳ್ಳಲು ಕಾನೂನು ಆಯ್ಕೆಗಳ ಕುರಿತು ಪರಿಶೀಲಿಸುತ್ತಿರುವುದಾಗಿ’ ಪ್ರಧಾನಿ ಮೋದಿ ಅವರು ‘ರಾಜಮಾತಾ’ ಅಮೃತಾ ರಾಯ್‌ ಅವರಿಗೆ ತಿಳಿಸಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದರು.

ಬಿಜೆಪಿ ಹಂಚಿಕೊಂಡಿರುವ ಸಂಭಾಷಣೆಯ ವಿವರಗಳ ಪ್ರಕಾರ, ಉದ್ಯೋಗ ಪಡೆಯಲು ರಾಜ್ಯದ ಜನರು ಲಂಚವಾಗಿ ₹3,000 ಕೋಟಿ ಪಾವತಿಸಿದ್ದಾರೆ. ತಾವು ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಈ ಕುರಿತು ಕಾನೂನು ಸಾಧ್ಯತೆಗಳನ್ನು ಪರಿಶೀಲಿಸಿ, ಮೊತ್ತವನ್ನು ಬಡಜನರಿಗೆ ಹಿಂತಿರುಗಿಸಲು ಮಾರ್ಗವನ್ನು ಕಂಡುಕೊಳ್ಳುವುದಾಗಿ ಪ್ರಧಾನಿ ತಿಳಿಸಿದ್ದಾರೆ. ಈ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಳ್ಳುವಂತೆಯೂ ಅವರು ಹೇಳಿದ್ದಾರೆ.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿಯನ್ನು ಇ.ಡಿ ಬಂಧಿಸಿದೆ. ಈ ಮೊದಲು ಎಎಪಿ ವಿರುದ್ಧ ದೂರು ನೀಡಿದ್ದ ಕಾಂಗ್ರೆಸ್‌ ಇದೀಗ ಪಥ ಬದಲಿಸಿದ್ದು, ಕೇಜ್ರಿವಾಲ್‌ ಬೆಂಬಲಕ್ಕೆ ನಿಂತಿದೆ ಎಂದು ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ. ಇದು ವಿರೋಧ ಪಕ್ಷಗಳ ಆದ್ಯತೆ ಅಧಿಕಾರವೇ ಹೊರತು ದೇಶವಲ್ಲ ಎಂಬುದನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.

ರಾಯ್‌ ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದ ಬಳಿಕ, ವಿರೋಧ ಪಕ್ಷಗಳು ರಾಜಮನೆತವನ್ನು ಗುರಿಯಾಗಿಸಿ ಟೀಕೆ ಮಾಡಿವೆ. ಈ ರಾಜಮನೆತನವು ಬ್ರಿಟಿಷರಿಗೆ ಬೆಂಬಲ ನೀಡಿತ್ತು ಎಂದೂ ದೂರಿವೆ.

ಈ ಕುರಿತು ಮೋದಿ ಅವರ ಬಳಿ ಅಲವತ್ತುಕೊಂಡ ರಾಯ್‌ ಅವರು, ‘ನನ್ನ ಕುಟುಂಬವನ್ನು ದೇಶದ್ರೋಹಿ ಎಂದು ಕರೆಯಲಾಗುತ್ತಿದೆ. 18ನೇ ಶತಮಾನದ ರಾಜ ಕೃಷ್ಣಚಂದ್ರ ರಾಯ್‌ ಅವರು ಸನಾತನ ಧರ್ಮ ಉಳಿಸಲು, ಇತರ ರಾಜರೊಂದಿಗೆ ಕೈಜೋಡಿಸಿದ್ದರು’ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಮೋದಿ ಅವರು, ಟಿಎಂಸಿ ಮತ ಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದು, ಈ ರೀತಿಯ ಆರೋಪಗಳಿಂದ ಒತ್ತಡಕ್ಕೆ ಒಳಗಾಗಬೇಡಿ ಎಂದು ಸಲಹೆ ನೀಡಿದ್ದಾರೆ.

‘ವಿರೋಧ ಪಕ್ಷಗಳು ಭಗವಾನ್‌ ರಾಮನ ಅಸ್ತಿತ್ವದ ಪುರಾವೆಗಳನ್ನು ಒಂದೆಡೆ ಹುಡುಕುತ್ತಿದ್ದರೆ, ಇನ್ನೊಂದೆಡೆ ಇತರರನ್ನು ದೂಷಿಸಲು ಎರಡು, ಮೂರು ಶತಮಾನಗಳ ಹಿಂದಿನ ಘಟನೆಗಳನ್ನು ಉಲ್ಲೇಖಿಸುತ್ತಿವೆ. ಇದು ಅವರ ದ್ವಂದ್ವ ನೀತಿಯಾಗಿದೆ’ ಎಂದು ಮೋದಿ ಟೀಕಿಸಿದ್ದಾರೆ.

ರಾಯ್‌ ಅವರ ಗೆಲುವಿನ ಕುರಿತು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ, ಪಶ್ಚಿಮ ಬಂಗಾಳದಲ್ಲಿ ಬದಲಾವಣೆಗಾಗಿ ಜನ ಮತ ಹಾಕುತ್ತಾರೆ ಎಂದಿದ್ದಾರೆ.

ಜನರು ಮೋದಿ ಸರ್ಕಾರದ ಕಾರ್ಯಗಳಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಮತ್ತು ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲಿಗೆ ಹೋಗುತ್ತಾರೆ ಎಂದು ರಾಯ್‌ ಹೇಳಿದಾಗ, ಪ್ರಧಾನಿ ಅವರು ನಗೆಗಡಲಲ್ಲಿ ತೇಲಿದರು.

ಟಿಎಂಸಿ ಟೀಕೆ

ಬಿಜೆಪಿ ಮಹಿಳಾ ಅಭ್ಯರ್ಥಿಗೆ ಪ್ರಧಾನಿ ಮಾಡಿದ ದೂರವಾಣಿ ಕರೆಯು ‘ಚೆನ್ನಾಗಿ ರಚಿಸಿದ ನಾಟಕ’ ಎಂದು ಟಿಎಂಸಿ ಬಣ್ಣಿಸಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯ ಈ ನಡೆಯು ನಾಟಕವಲ್ಲದೇ ಮತ್ತೇನು? ಮಣಿಪುರದ ಮಹಿಳೆಯರು, ಉತ್ತರ ಪ್ರದೇಶದ ಹತ್ರಾಸ್‌ನ ಸಂತ್ರಸ್ತರ ಕುಟುಂಬದ ಸದಸ್ಯರೊಂದಿಗೂ ಇದೇ ರೀತಿಯ ದೂರವಾಣಿ ಸಂಭಾಷಣೆ ನಡೆಸುತ್ತೀರಾ?’ ಎಂದು ಟಿಎಂಸಿ ನಾಯಕ ಕುನಾಲ್‌ ಘೋಷ್‌ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT