ನವದೆಹಲಿ: ವೈಎಸ್‌ಆರ್ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯರಾದ ಎಂ. ವೆಂಕಟರಮಣ ರಾವ್ ಮತ್ತು ಬೀದಾ ಮಸ್ತಾನ್ ರಾವ್ ಯಾದವ್ ಅವರು ಗುರುವಾರ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸೇರುವ ಸಾಧ್ಯತೆ ಇದೆ.
ರಾವ್ ಮತ್ತು ಯಾದವ್ ಅವರು ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರಿಗೆ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು. ಅವರ ರಾಜೀನಾಮೆಗಳನ್ನು ಸಭಾಪತಿ ಅಂಗೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮೂಲಕ ರಾಜ್ಯಸಭೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಸದಸ್ಯರ ಸಂಖ್ಯೆ 9ಕ್ಕೆ ಇಳಿದಿದೆ. ಸಂಖ್ಯಾಬಲ ಹೊಂದಿರುವ ಟಿಡಿಪಿ–ಬಿಜೆಪಿ–ಜನಸೇನಾ ಪಕ್ಷಗಳ ಒಕ್ಕೂಟವು ಈ ಎರಡೂ ಸ್ಥಾನಗಳನ್ನು ಉಪ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯಿದೆ.
ಎರಡೂ ಸ್ಥಾನಗಳನ್ನು ಟಿಡಿಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆಯೋ ಅಥವಾ ಒಂದನ್ನು ಮೈತ್ರಿಕೂಟಕ್ಕೆ ಬಿಟ್ಟುಕೊಡುತ್ತದೆಯೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಮೂರು ಬಾರಿ ಶಾಸಕರಾಗಿರುವ ರಾವ್ ಅವರು 2007ರಿಂದ 2014ರಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2020ರಲ್ಲಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ಅವರ ಅಧಿಕಾರಾವಧಿ 2026ರ ಜೂನ್‌ವರೆಗೆ ಇತ್ತು.
ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಯಾದವ್ ಅವರು 2022ರ ಜೂನ್‌ನಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅವರು 2028ರ ಜೂನ್‌ವರೆಗೂ ಅಧಿಕಾರಾವಧಿಯನ್ನು ಹೊಂದಿದ್ದರು.